ದೇಗುಲ ಅಭಿವೃದ್ಧಿಗೆ ರಾಮಲಿಂಗಾರೆಡ್ಡಿ ಪಣ

KannadaprabhaNewsNetwork |  
Published : Oct 05, 2025, 01:00 AM IST

ಸಾರಾಂಶ

ಯಾವುದೇ ಸ್ವಂತ ಆದಾಯವಿಲ್ಲದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಸಿ-ವರ್ಗದ 34,165 ದೇವಾಲಯಗಳ ಮೂಲ ಸೌಕರ್ಯಗಳ ಅಭಿವೃದ್ಧಿ ಹಾಗೂ ಸಮರ್ಪಕ ನಿರ್ವಹಣೆ ಕುರಿತು ಸಲಹೆ ನೀಡಲು ಏಳು ಮಂದಿ ಸದಸ್ಯರನ್ನೊಳಗೊಂಡ ವಿಜನ್‌ ಗ್ರೂಪ್‌ ರಚನೆ ಮಾಡಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಯಾವುದೇ ಸ್ವಂತ ಆದಾಯವಿಲ್ಲದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಸಿ-ವರ್ಗದ 34,165 ದೇವಾಲಯಗಳ ಮೂಲ ಸೌಕರ್ಯಗಳ ಅಭಿವೃದ್ಧಿ ಹಾಗೂ ಸಮರ್ಪಕ ನಿರ್ವಹಣೆ ಕುರಿತು ಸಲಹೆ ನೀಡಲು ಏಳು ಮಂದಿ ಸದಸ್ಯರನ್ನೊಳಗೊಂಡ ವಿಜನ್‌ ಗ್ರೂಪ್‌ ರಚನೆ ಮಾಡಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ 34,563 ದೇವಾಲಯಗಳಿದ್ದು, ಇವುಗಳಲ್ಲಿ ಪ್ರವರ್ಗ ‘ಎ’ 205, ಪ್ರವರ್ಗ ಬಿ-193 ಮತ್ತು ಪ್ರವರ್ಗ ‘ಸಿ’ ಯಲ್ಲಿ 34,165 ದೇವಾಲಯಗಳಿವೆ. ಈ ಪೈಕಿ ‘ಸಿ’ ವರ್ಗದ ದೇವಾಲಯಗಳಿಗೆ ಸ್ವಂತ ಆದಾಯ ಇಲ್ಲ. ಇದರಿಂದ ಬಹುತೇಕ ದೇವಾಲಯಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದ ಸ್ಥಿತಿಯಲ್ಲಿವೆ.

ಈ ದೇವಾಲಯಗಳ ಅಭಿವೃದ್ಧಿಗೆ ಪಣ ತೊಟ್ಟಿರುವ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ಪ್ರತಿ ವರ್ಷ ನಿರ್ವಹಣೆ ಅಗತ್ಯವಿರುವ ಕನಿಷ್ಠ 1,000 ದಿಂದ 1,500 ದೇವಾಲಯಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ.

ಇದಕ್ಕಾಗಿ 34,165 ‘ಸಿ’ ವರ್ಗದ ಐತಿಹಾಸಿಕ ದೇವಾಲಯಗಳಲ್ಲಿನ ವಾಸ್ತವ ಸ್ಥಿತಿಗತಿ ಪರಿಶೀಲಿಸಿ ಅವುಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಸಮಾಜದ ವಿವಿಧ ಕ್ಷೇತ್ರಗಳ ಪ್ರಮುಖರನ್ನೊಳಗೊಂಡ ವಿಜನ್‌ ಗ್ರೂಪ್‌ ರಚಿಸಿ ಕಂದಾಯ ಇಲಾಖೆ (ಧಾರ್ಮಿಕ ದತ್ತಿ) ಆದೇಶ ಹೊರಡಿಸಿದೆ.

ವಿಜನ್‌ ಗ್ರೂಪ್‌ ಸದಸ್ಯರು:

ವಿಜನ್‌ ಗ್ರೂಪ್‌ಗೆ ಪ್ರೊ.ಕೆ.ಇ.ರಾಧಾಕೃಷ್ಣ, ನಿವೃತ್ತ ಐಪಿಎಸ್‌, ರಾಜ್ಯಸಭೆ ಮಾಜಿ ಸದಸ್ಯ ಕೆ.ಸಿ.ರಾಮಮೂರ್ತಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಡಾ। ಮಹಾಂತೇಶ್ ಬಿರಾದಾರ್‌, ಡಾ.ಎಸ್‌.ಬಿ.ಶ್ರೀಪಾದ್‌, ಪಿ.ಸಿ.ಶ್ರೀನಿವಾಸ, ಎಸ್‌.ಎನ್‌.ಯತಿರಾಜ ಸಂಪತ್‌ ಕುಮಾರನ್‌ (ಸಂಚಾಲಕರು) ಅವರನ್ನು ನೇಮಿಸಲಾಗಿದೆ. ಅಲ್ಲದೆ ಆಸಕ್ತಿ ಹೊಂದಿರುವ ಗಣ್ಯರು ಇನ್ನು ಮುಂದೆಯೂ ಗ್ರೂಪ್‌ ಸೇರಿಕೊಳ್ಳಬಹುದು ಎಂದು ಸಚಿವ ರಾಮಲಿಂಗಾರೆಡ್ಡಿ ಮುಕ್ತ ಆಹ್ವಾನ ನೀಡಿದ್ದಾರೆ.

ವಿಜನ್‌ ಗ್ರೂಪ್‌ ಪಾತ್ರ, ಜವಾಬ್ದಾರಿಯೇನು?:

ದಾನಿಗಳಿಂದ ಸಂಪನ್ಮೂಲ ಕ್ರೋಢೀಕರಣ, ಸಿ ವರ್ಗದ ದೇವಾಲಯಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿಗೆ ಅಗತ್ಯ ಸಲಹೆ ಮತ್ತು ಸೂಚನೆ, ದೇವಾಲಯಗಳಿಗೆ ಅಗತ್ಯ ಮೂಲ ಸೌಲಭ್ಯಗಳ ಬಗ್ಗೆ ದೇವಾಲಯ ಆಡಳಿತಕ್ಕೆ ಅಗತ್ಯ ಸಲಹೆ ಸೂಚನೆ ನೀಡಿ ಜೀರ್ಣೋದ್ಧಾರ ಕಾರ್ಯದ ಮೇಲುಸ್ತುವಾರಿ ವಹಿಸುವುದು ಸೇರಿ ವಿವಿಧ ಜವಾಬ್ದಾರಿ ವಹಿಸಲಾಗಿದೆ.

ಈಗಾಗಲೇ ಸಮೀಕ್ಷೆಗಾಗಿ ಆದೇಶ: ರಾಮಲಿಂಗಾರೆಡ್ಡಿ:

ರಾಜ್ಯದಲ್ಲಿರುವ 34,000 ‘ಸಿ’ ವರ್ಗದ ದೇವಾಲಯಗಳಿಗೂ ನಿರ್ವಹಣೆಯ ಅಗತ್ಯವಿಲ್ಲ. ಕೆಲ ದೇವಾಲಯಗಳು ಸ್ಥಳೀಯ ದಾನಿಗಳ ಸಹಕಾರದಿಂದ ಉತ್ತಮವಾಗಿ ನಡೆಯುತ್ತಿವೆ. ನಿರ್ವಹಣೆ ಇಲ್ಲದ ದೇವಾಲಯಗಳ ಸಮೀಕ್ಷೆ ನಡೆಸಲು ಸೂಚನೆ ನೀಡಿದ್ದೇನೆ. ಈ ಸಮೀಕ್ಷೆ ಮಾಹಿತಿ ಪ್ರಕಾರ ತುರ್ತು ಅಗತ್ಯವಿರುವ ದೇವಾಲಯಗಳನ್ನು ಆಯ್ಕೆ ಮಾಡಿ ಪ್ರತಿ ವರ್ಷ ಇಂತಿಷ್ಟು ದೇವಾಲಯಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.-

ಅರ್ಚಕರಿಗೆ ವಿಮೆ ಸೇರಿ ಕಲ್ಯಾಣ ಕಾರ್ಯಕ್ರಮ:

ಸ್ವಂತ ಆದಾಯವಿಲ್ಲದ ದೇವಾಲಯಗಳ ಅಭಿವೃದ್ಧಿಗಾಗಿ ವಿಧೇಯಕ ರೂಪಿಸಿದ್ದೆವು. ಅದಕ್ಕೆ ರಾಜ್ಯಪಾಲರು ಅಂಕಿತ ಹಾಕಿಲ್ಲ. ಬಿಜೆಪಿಯವರು ವಿನಾಕಾರಣ ಕೆಟ್ಟ ರಾಜಕೀಯ ಮಾಡಿದರು. ಇದೀಗ ರಾಷ್ಟ್ರಪತಿಗಳ ಮೊರೆ ಹೋಗಿದ್ದೇವೆ. 34,000 ದೇವಾಲಯಗಳಲ್ಲಿ 40,000 ಅರ್ಚಕರು ಇದ್ದು, ಅವರಲ್ಲಿ ಬಹುತೇಕರಿಗೆ ನಿಧನ ಹೊಂದಿದರೆ ಅಂತ್ಯಸಂಸ್ಕಾರ ಮಾಡಲೂ ಹಣವಿಲ್ಲ. ಅಂಥವರಿಗೆ 10 ಲಕ್ಷ ರು. ವಿಮೆ ಮಾಡಿಸಲು ನಿರ್ಧರಿಸಿದ್ದೇವೆ. ಅದಕ್ಕೆ ಪ್ರೀಮಿಯಂ ಹಣ ಹೊಂದಿಸಬೇಕಿದೆ. ಜತೆಗೆ ಅವರ ಮಕ್ಕಳಿಗೆ ಸ್ಕಾಲರ್‌ಶಿಪ್‌ ಸೇರಿ ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಹೊಂದಿಸಬೇಕಿದೆ. ಇದಕ್ಕೆ ವಿಜನ್‌ಗ್ರೂಪ್‌ ನೆರವಾಗಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ನಿತ್ಯದ ನಿರ್ವಹಣೆಯೂ ಇಲ್ಲದಂಥ ದೇವಾಲಯಗಳನ್ನು ಗುರುತಿಸಿ ವರ್ಷಕ್ಕೆ ಕನಿಷ್ಠ 1,000 ದಿಂದ 2,000 ದೇವಾಲಯ ಅಭಿವೃದ್ಧಿಪಡಿಸಲು ಸಲಹೆ ನೀಡಲು ವಿಜನ್‌ ಗ್ರೂಪ್‌ ರಚಿಸಿದ್ದೇವೆ. ಸ್ಥಳೀಯ ದಾನಿಗಳು, ಸಿಎಸ್‌ಆರ್‌ ನಿಧಿ, ರಾಜ್ಯ ಸರ್ಕಾರದ ಅನುದಾನ ಸೇರಿ ಸಂಪನ್ಮೂಲ ಕ್ರೋಡೀಕರಣ ಮಾಡಿ ದೇವಾಲಯ ಅಭಿವೃದ್ಧಿ ಮಾಡಲಾಗುವುದು.

- ರಾಮಲಿಂಗಾರೆಡ್ಡಿ, ಸಾರಿಗೆ ಮತ್ತು ಮುಜರಾಯಿ ಸಚಿವ

PREV

Recommended Stories

ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರ ಅಭಿಮತ
‘ಅಗತ್ಯ ಬಂದಾಗ ಸೂಕ್ತ ನಿರ್ಧಾರ ಕೈಗೊಳ್ಳೋ ಸಾಮರ್ಥ್ಯ ಪಕ್ಷಕ್ಕಿದೆ’