-ಎಚ್‌ಡಿಕೆ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶಕನ್ನಡಪ್ರಭ ವಾರ್ತೆ ಕೊಪ್ಪಳ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುವ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದಿದ್ದರು. ಈಗ ಯಾರು ದಾರಿ ತಪ್ಪಿದ್ದಾರೆ? ಎಂದು ಸಾರಿಗೆ ಸಚಿವ ರಾಮಲಿಂಗಾರಡ್ಡಿ ಕಟುವಾಗಿ ಪ್ರಶ್ನಿಸಿದರು.ಸುದ್ದಿಗೋಷ್ಠಿಯಲ್ಲಿ ಎಚ್‌ಡಿಕೆ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ ಅವರು, ಪ್ರಜ್ವಲ್ ಪ್ರಕರಣವನ್ನು ಈಗಗಾಲೇ ಎಸ್‌ಐಟಿಗೆ ವಹಿಸಿದ್ದು, ತನಿಖೆ ನಡೆಯುತ್ತಿದೆ. ಯಾರು ದಾರಿ ತಪ್ಪಿದ್ದಾರೆ ಎನ್ನುವುದು ರಾಜ್ಯ ಅಷ್ಟೇ ಅಲ್ಲ, ದೇಶದ ಜನತೆ ನೋಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಶಕ್ತಿ ಯೋಜನೆಯಲ್ಲಿ ಬರೋಬ್ಬರಿ 198 ಕೋಟಿ ಮಹಿಳೆಯರು ಬಸ್ಸಿನಲ್ಲಿ ಸಂಚಾರ ಮಾಡಿದ್ದಾರೆ. ಇದೆಲ್ಲವೂ ಉಚಿತ ಎನ್ನುವುದು ಗಮನಾರ್ಹ ಸಂಗತಿಯಾಗಿದೆ. ಈ ಎಲ್ಲ ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.ರಾಜ್ಯ ಸರ್ಕಾರ ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಗಳನ್ನು ಅಲ್ಪ ಅವಧಿಯಲ್ಲಿ ಜಾರಿ ಮಾಡಿದೆ. ಈ ಲೋಕಸಭೆ ಚುನಾವಣೆಯಲ್ಲಿ ಇನ್ನಷ್ಟು ಗ್ಯಾರಂಟಿಗಳನ್ನು ಘೋಷಿಸಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಅವುಗಳನ್ನೂ ಜಾರಿ ಮಾಡಿ ತನ್ನ ಭಾಷೆ ಉಳಿಸಿಕೊಳ್ಳಲಿದೆ ಎನ್ನುವ ವಿಶ್ವಾಸ ಮತದಾರರಲ್ಲಿ ಇರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಬೆಂಬಲ ನೀಡಲಿದ್ದಾರೆ. ಹೀಗಾಗಿ, ಬಿಜೆಪಿಗೆ ಸೋಲು ನಿಶ್ಚಿತ ಎಂದರು.
₹130 ಲಕ್ಷ ಕೋಟಿ ಸಾಲ:ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಯಾವುದೇ ಜನಪರ ಯೋಜನೆ ಜಾರಿ ಮಾಡಿಲ್ಲ, ಬದಲಾಗಿ ಧರ್ಮಾಧರಿತ ಆಡಳಿತ ನಡೆಸಿದೆ. ಅಲ್ಲದೆ ದೇಶದ ಮೇಲೆ ₹130 ಲಕ್ಷ ಕೋಟಿ ಸಾಲದ ಹೊರೆ ಹೊರಿಸಿದೆ. ಹಿಂದೆಂದು ಇಷ್ಟೊಂದು ಸಾಲ ಮಾಡಿದ ಉದಾಹರಣೆ ಇಲ್ಲ ಎಂದರು.
ಶ್ರೀಮಂತರ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರ, ಬಡವರು ಮತ್ತು ರೈತರ ಸಾಲ ಮನ್ನಾ ಮಾಡುತ್ತಿಲ್ಲ ಎಂದು ಆರೋಪಿಸಿದರು.ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ ಇದ್ದರು.