ರಾಮಮಯವಾದ ಕೋಲಾರ ಜಿಲ್ಲೆ, ಪೂಜೆ, ಅನ್ನದಾಸೋಹ

KannadaprabhaNewsNetwork | Published : Jan 23, 2024 1:47 AM

ಸಾರಾಂಶ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಹಬ್ಬವಾಗಿ ಆಚರಿಸಿ ಸಂಭ್ರಮಿಸಿದ ಜನತೆ ತಮ್ಮ ಮನೆಗಳಲ್ಲೂ ಹಬ್ಬ ಆಚರಿಸಿದ್ದು ಮಾತ್ರವಲ್ಲ ರಸ್ತೆ ಬದಿ ಮಜ್ಜಿಗೆ, ಪಾನಕ ವಿತರಣೆಗೂ ವ್ಯವಸ್ಥೆ ಮಾಡಿ ತಮ್ಮ ರಾಮಭಕ್ತಿ ಮೆರೆದರು

ಕನ್ನಡಪ್ರಭ ವಾರ್ತೆ ಕೋಲಾರ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಇಡೀ ಜಿಲ್ಲೆ ರಾಮಮಯವಾಗಿತ್ತು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲಿ ನೋಡಿದರೂ ಕೇಸರಿ ಬಂಟಿಂಗ್‌ಗಳು, ಭಗವಧ್ವಜ ರಾರಾಜಿಸುತ್ತಿದ್ದು, ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ, ಪಾನಕ ಕೋಸಂಬರಿ ವಿತರಣೆ, ಅನ್ನದಾಸೋಹ ನಡೆಯಿತು.

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಹಬ್ಬವಾಗಿ ಆಚರಿಸಿ ಸಂಭ್ರಮಿಸಿದ ಜನತೆ ತಮ್ಮ ಮನೆಗಳಲ್ಲೂ ಹಬ್ಬ ಆಚರಿಸಿದ್ದು ಮಾತ್ರವಲ್ಲ ರಸ್ತೆ ಬದಿ ಮಜ್ಜಿಗೆ, ಪಾನಕ ವಿತರಣೆಗೂ ವ್ಯವಸ್ಥೆ ಮಾಡಿ ತಮ್ಮ ರಾಮಭಕ್ತಿ ಮೆರೆದರು.

ರಾಮದೇವರಗುಡಿ ಕಲ್ಯಾಣೋತ್ಸವನಗರದ ಬಸ್ ನಿಲ್ದಾಣದ ಸಮೀಪದ ಪುರಾತನ ರಾಮದೇವರ ಗುಡಿಯನ್ನು ಸಂಸದ ಎಸ್.ಮುನಿಸ್ವಾಮಿ ಕಳೆದ ಒಂದು ವಾರದಿಂದ ಅಲ್ಲೇ ನಿಂತು ಕಾಂಪೌಂಡ್ ದುರಸ್ತಿ, ಬಣ್ಣ ಬಳಿಸಿ ದೇವಾಲಯ ಅಣಿಗೊಳಿಸಿದ್ದರು. ದೇವಾಲಯದಲ್ಲಿ ಸಂಸದರ ನೇತೃತ್ವದಲ್ಲಿ ಬೃಹತ್ ಎಲ್‌ಇಡಿ ಪರದೇ ನಿರ್ಮಿಸಿ ರಾಮಲಲ್ಲಾ ಪ್ರತಿಷ್ಟಾಪನೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಅದೇ ವೇದಿಕೆಯಲ್ಲೇ ಸೀತಾರಾಮನ ಕಲ್ಯಾಣೋತ್ಸವ ಅತ್ಯಂತ ವೈಭವದಿಂದ ನಡೆದಿದ್ದು, ಸಹಸ್ರಾರು ಮಂದಿಗೆ ಅನ್ನದಾಸೋಹ ನಡೆಯಿತು.ಗ್ರಾಮಗಳಲ್ಲೂ ರಾಮತಾರಕ ಜಪಜಿಲ್ಲೆಯ ಸರಿಸುಮಾರು ಎಲ್ಲಾ ಗ್ರಾಮಗಳಲ್ಲೂ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದಿದ್ದು, ಕೇಸರಿ ಬಂಟಿಂಗ್‌ಗಳು, ಭಗವಧ್ವಜಗಳು ರಾರಾಜಿಸಿದವು. ತಾಲೂಕಿನ ಚಿಟ್ನಹಳ್ಳಿ, ನರಸಾಪುರ, ವೇಮಗಲ್, ಮಡೇರಹಳ್ಳಿ, ವೆಂಕಟಾಪುರ, ಕೋಡಿಕಣ್ಣೂರು, ಟಮಕ, ಕೊಂಡರಾಜನಹಳ್ಳಿ ಸೇರಿದಂತೆ ಎಲ್ಲಾ ಗ್ರಾಮಗಳಲ್ಲೂ ರಾಮನಾಮ ಸ್ಮರಣೆ ಮುಗಿಲು ಮುಟ್ಟಿತ್ತು.

ತಾಲ್ಲೂಕಿನ ಅರಾಭಿಕೊತ್ತನೂರಿನಲ್ಲಿ ನೂರಾರು ಮಂದಿ ಒಂದೆಡೆ ಸೇರಿ ರಾಮನ ಕಟೌಟ್ ನಿರ್ಮಿಸಿ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಉತ್ಸವ ಮೂರ್ತಿಗಳ ಪ್ರತಿಷ್ಟೆಯೂ ನಡೆದಿದ್ದು, ದೇವಾಲಯದಲ್ಲಿ ಹೋಮ, ಹವನ ನಡೆಯಿತು. ನೂರಾರು ಮಂದಿಗೆ ಅನ್ನದಾಸೋಹವೂ ನಡೆಯಿತು.

ವರ್ತಕರಿಂದ ಸ್ವಯಂ ಪ್ರೇರಿತ ಬಂದ್ರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ನಗರದ ದೊಡ್ಡಪೇಟೆ, ಕಾಳಮ್ಮ ಗುಡಿಬೀದಿ, ಎಂ.ಜಿ.ರಸ್ತೆ ಮತ್ತಿರ ಕಡೆಗಳಲ್ಲಿ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿ ನಾಲ್ಕಾರು ಅಂಗಡಿಗಳವರು ಒಂದು ಕಡೆ ಸೇರಿ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿದರು.

ನಗರದ ಡೂಂಲೈಟ್ ವೃತ್ತದಲ್ಲಿ ನಿರ್ಮಿಸಿರುವ ಬೃಹತ್ ರಾಮನ ಕಟೌಟ್‌ಗೆ ವಿಶೇಷ ಪೂಜೆ ಸಲ್ಲಿಸಿ ಎಲ್‌ಇಡಿ ಪರದೆ ಅಳವಡಿಸಿ ಸಹಸ್ರಾರು ಮಂದಿ ರಾಮಲಲ್ಲಾ ಪ್ರತಿಷ್ಠಾನ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ನಗರದ ಕಾಳಮ್ಮ ಗುಡಿ ರಸ್ತೆಯ ಗಣೇಶ ದರ್ಶಿನಿ ಸಮೀಪ ಬಜರಂಗದಳ ಮುಖಂಡರಾದ ಬಾಲಾಜಿ, ಬಾಬು, ಅಪ್ಪಿ,ವಿಶ್ವನಾಥ್, ಸಾಯಿಮೌಳಿ ಮತ್ತಿತರರು ರಾಮನ ಕಟೌಟ್ ನಿಲ್ಲಿಸಿ ಪೂಜೆಸಲ್ಲಿಸಿ ಇಡೀ ದಿನ ಅನ್ನದಾಸೋಹ, ಪಾನಕ, ಕೋಸಂಬರಿ ವಿತರಿಸಿದರು.ಟೇಕಲ್ ರಸ್ತೆ ಕೇಸರಿಮಯನಗರದ ಟೇಕಲ್ ರಸ್ತೆಯ ರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್‌ನ ಇಕ್ಕೆಲಗಳಲ್ಲಿ ಚೌಡೇಶ್ವರಿ ದೇವಿ ಅಭಿವೃದ್ದಿ ಟ್ರಸ್ಟ್ ಹಾಗೂ ಪೇಟೆಚಾಮನಹಳ್ಳಿ ನಿವಾಸಿಗಳು ಸೇರಿಕೊಂಡು ರಾಮನ ಬೃಹತ್ ಕಟೌಟ್‌ಗಳ ಜತೆಗೆ ಕೇಸರಿ ಧ್ವಜಗಳನ್ನು,ಬಂಟಿಂಗ್‌ಗಳನ್ನು ಕಟ್ಟಿ, ಇಡೀ ದಿನ ನಿರಂತರ ಭಜನೆಗೆ ವ್ಯವಸ್ಥೆ ಮಾಡಿದ್ದು, ಅನ್ನದಾಸೋಹ, ಪಾನಕ, ಕೋಸಂಬರಿ ವಿತರಣೆ ಮಾಡಿದರು.ಇಡೀ ಕೋಲಾರ ಜಿಲ್ಲೆ ರಾಮನಾಮದಲ್ಲಿ ಮುಳುಗಿ ಹೋಗಿದ್ದು, ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನೆ ಜನತೆ ಅತ್ಯಂತ ಶ್ರದ್ಧಾಭಕ್ತಿಗಳಿಂದ ವೀಕ್ಷಿಸಿದರು.

Share this article