ರಾಮನಗರವೇ ಕಣ್ಣೆಂದವರು ಜಿಲ್ಲೇನೆ ಬಿಟ್ಟು ಹೋದ್ರು: ಜೆಡಿಎಸ್‌ನವರು ಕೈ ಸೇರಿದ್ರು

KannadaprabhaNewsNetwork |  
Published : Apr 13, 2024, 01:09 AM ISTUpdated : Apr 13, 2024, 12:20 PM IST
12ಕೆಆರ್ ಎಂಎನ್ 10 ಜೆಪಿಜಿ | Kannada Prabha

ಸಾರಾಂಶ

ರಾಮನಗರ ಎರಡು ಕಣ್ಣುಗಳು ಎನ್ನುತ್ತಿದ್ದವರು ಜಿಲ್ಲೆಯನ್ನು ಬಿಟ್ಟು ಬೇರೆಡೆ ಹೋಗಿದ್ದು, ಜಿಲ್ಲೆಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮಾಡಿದ ಅಪಮಾನವಲ್ಲವೇ ಎಂದು ಸಂಸದ ಡಿ.ಕೆ.ಸುರೇಶ್  ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ರಾಮನಗರ: ಜಿಲ್ಲೆಯಲ್ಲಿದ್ದ ಎರಡು ಕಣ್ಣುಗಳಲ್ಲಿ ಈಗ ಒಂದು ಕಣ್ಣು ಹೋಗಿ ಐದು ವರ್ಷವಾಯಿತು. ಈಗ ಮತ್ತೊಂದು ಕಣ್ಣು ಬೇರೆ ಜಿಲ್ಲೆಗೆ ಹೋಗಿದೆ. ಎರಡು ಕಣ್ಣುಗಳು ಎನ್ನುತ್ತಿದ್ದವರು ಜಿಲ್ಲೆಯನ್ನು ಬಿಟ್ಟು ಬೇರೆಡೆ ಹೋಗಿದ್ದು, ಜಿಲ್ಲೆಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮಾಡಿದ ಅಪಮಾನವಲ್ಲವೇ ಎಂದು ಸಂಸದ ಡಿ.ಕೆ.ಸುರೇಶ್ ಅವರು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಕೈಲಾಂಚ, ಕಸಬಾ ಹೋಬಳಿಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯವರು ಸೋಲಿಸಿದ ಮೇಲೆ ರಾಮನಗರದವರು ಮತ ನೀಡಿ ಅವರನ್ನು ಸಂಸದರಾಗಿ ಮಾಡಿದರು. ಇದೀಗ ಜಿಲ್ಲೆಯನ್ನು ಬಿಟ್ಟು ಹೋಗಿದ್ದಾರೆ. ಜೆಡಿಎಸ್ ಮುಖಂಡರು ಕಾರ್ಯಕರ್ತರಿಗೆ ನೈಜತೆಯನ್ನು ತಿಳಿಸಿಕೊಟ್ಟು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿಸಿ ಎಂದು ಹೇಳಿದರು.

ಜಿಲ್ಲೆಯಲ್ಲಿ ಜೆಡಿಎಸ್‌ನಲ್ಲಿ ನಾಯಕತ್ವ ಬೆಳೆಸಲು ಯಾರು ಸಿಗಲಿಲ್ಲವೇ, ಭಾವನವರಿಗೆ ಸ್ಪರ್ಧೆಗೆ ಅವಕಾಶ ನೀಡಿ ಕಮಲದ ಗುರ್ತಿನಿಂದ ಕಣಕ್ಕಿಳಿಸಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಮಾದೇಗೌಡ, ನಾಗೇಗೌಡರಿಗೆ ಬಾಯಿಗೆ ಬಂದಂತೆ ಬೈಯುತ್ತಿದ್ದವರು, ಈಗ ಚುನಾವಣೆ ಸಮಯದಲ್ಲಿ ಅವರ ಸಮಾಧಿಗೆ ಪೂಜೆ ಸಲ್ಲಿಸಲು ಹೋಗುತ್ತಿದ್ದಾರೆ ಎಂದು ಕಾಲೆಳೆದರು.

ಗ್ರಾಮಾಂತರ ಲೋಕಸಭಾ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ ಪಕ್ಷಬೇದ ಮರೆತು ಜನರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಮೂರು ಬಾರಿ ನನಗೆ ಪಕ್ಷಬೇದ ಮರೆತು ಚುನಾವಣೆಯಲ್ಲಿ ಆಶೀರ್ವಾದ ಮಾಡಿದ್ದೀರಿ. ಜನರು ಮತ್ತೆ ಚುನಾವಣೆಯಲ್ಲಿ ನನ್ನನ್ನು ಚುನಾಯಿಸಬೇಕು ಎಂದು ಮನವಿ ಮಾಡಿದರು.

ಪಕ್ಷಾತೀತ ಸೇವೆ:

ಸರ್ಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಗಳು ಜಾತಿ ಧರ್ಮ ಎನ್ನದೆ ಪಕ್ಷಾತೀತವಾಗಿ ಶೇ.94 ರಷ್ಟು ಜನರಿಗೆ ತಲುಪಿವೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿ ಮನೆ ಮನೆಗೆ ಸರ್ಕಾರದ ಅಭಿವೃದ್ಧಿ ಕೆಲಸಗಳು ಮತ್ತು ನಾನು ಕೈಗೊಂಡ ಅಭಿವೃದ್ದಿ ಕಾರ್ಯಗಳನ್ನು ತಿಳಿಸಿ ಮತಯಾಚನೆ ಮಾಡಬೇಕು. ಕಾಂಗ್ರೆಸ್ ಸರ್ಕಾರ ಬರಲು ಬೇರು ಮಟ್ದದಲ್ಲಿ ಪಕ್ಷ ಸಂಘಟಿಸಿರುವವರು ಕಾರ್ಯಕರ್ತರಾದ ನೀವು. ನಾನು ಎಂದೂ ಕಾರ್ಯಕರ್ತರಿಗೆ ಅವಮಾನ ಮಾಡುವ ರೀತಿಯಲ್ಲಿ ಕೆಲಸ ಮಾಡಿಲ್ಲ. ಆದರೆ, ಬಿಜೆಪಿ - ಜೆಡಿಎಸ್ ನವರು ಕೊಡದಿರುವುದನ್ನು ಹೇಳುತ್ತಾ ಮತಯಾಚನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

120 ಕೋಟಿ ಅನುದಾನ ಕಸಬಾ ಕೈಲಾಂಚ ಹೋಬಳಿ ಅಭಿವೃದ್ಧಿಗೆ ತರಲಾಗಿದೆ. ಮಂಚನಬೆಲೆ, ಸುಗ್ಗನಹಳ್ಳಿ, ಹರೀಸಂದ್ರ, ಗುನ್ನೂರು, ವಡ್ಡರಹಳ್ಳಿ ಬಳಿ ಅರ್ಕಾವತಿ ನದಿಗೆ ಸೇತುವೆ, ಜಿಲ್ಲಾಸ್ಪತ್ರೆ, ಕೆರೆ ತುಂಬಿಸುವ ಯೋಜನೆ, ಕೈಲಾಂಚ ಕೆರೆಗಳು, ಕಸಬಾದ 60 ಕೆರೆಗಳನ್ನು ತುಂಬಿಸಲು ಕ್ರಮ ವಹಿಸಿದ್ದೇನೆ. ರೈತರಿಗಾಗಿ ಕೃಷಿ ಕಾರ್ಯಕ್ಕೆ 10 ಸಾವಿರ ಟ್ರಾನ್ಸ್ ಪಾರ್ಮರ್‌ಗಳನ್ನು ಅಳವಡಿಸಿದೆ. ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಡಿ 3 ಸಾವಿರ ಚೆಕ್ ಡ್ಯಾಂ ನಿರ್ಮಿಸಿ ಅಂತರ್ಜಲ ವೃದ್ಧಿಯಾಗಿದೆ. ಜಿಲ್ಲೆಯ ಪ್ರತಿ ಮನೆಗೂ ಯೋಜನೆ ತಲುಪಿಸಿದ್ದು ಅಭಿವೃದ್ಧಿ ಪರ್ವವೇ ನಡೆದಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಜೆಡಿಎಸ್‌ನಲ್ಲಿ ನಾಯಕತ್ವ ಬೆಳೆಸಲು ಯಾರು ಸಿಗಲಿಲ್ಲವೇ. ಮಾವನವರಿಗೆ ಸ್ಪರ್ಧೆಗೆ ಅವಕಾಶ ನೀಡಿ ಬಿಜೆಪಿಯ ಸ್ನೇಹದೊಂದಿಗೆ ಕಮಲದ ಗುರುತಿನಲ್ಲಿ ಸ್ಪರ್ಧೆ ಮಾಡಿಸಿದ್ದೀರಿ. ಮಂಡ್ಯ ಕ್ಷೇತ್ರದಲ್ಲಿ ಮಾದೇಗೌಡ, ನಾಗೇಗೌಡರಿಗೆ ಬಾಯಿಗೆ ಬಂದಂತೆ ಬೈಯುತ್ತಿದ್ದವರು, ಈಗ ಚುನಾವಣೆ ಸಮಯದಲ್ಲಿ ಅವರ ಸಮಾಧಿಗೆ ಪೂಜೆ ಮಾಡಲು ಹೋಗುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡರ ಕಾಲೆಳೆದರು.

ಕಾರ್ಯಕ್ರಮದಲ್ಲಿ ಶಾಸಕ ಎಚ್.ಎ.ಇಕ್ಬಾಲ್‌ಹುಸೇನ್, ವಿಧಾನ ಪರಿಷತ್ತು ಮಾಜಿ ಸದಸ್ಯ ಸಿ.ಎಂ.ಲಿಂಗಪ್ಪ, ಮಾಜಿ ಶಾಸಕ ಕೆ.ರಾಜು, ಕೆಪಿಸಿಸಿ ಉಪಾಧ್ಯಕ್ಷ ಸಯ್ಯದ್ ಜಿಯಾವುಲ್ಲಾ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ದೀಪಾಮುನಿರಾಜು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗುರುಪ್ರಸಾದ್, ಮುಖಂಡರಾದ ಕೆ.ರಮೇಶ್, ಕೆ.ಶೇಷಾದ್ರಿ (ಶಶಿ), ಆರ್.ದೊಡ್ಡವೀರಯ್ಯ, ಪಿ.ನಾಗರಾಜು, ಕೆ.ಶೇಷಾದ್ರಿ ಬ್ಲಾಕ್ ಅಧ್ಯಕ್ಷರಾದ ವಿ.ಎಚ್.ರಾಜು, ಎ.ಬಿ.ಚೇತನ್ ಕುಮಾರ್ , ಹುಣಸನಹಳ್ಳಿ ಗ್ರಾಪಂ ಅಧ್ಯಕ್ಷ ಅಚ್ಚಲು ಪುಟ್ಟಸ್ವಾಮಿ, ಯುವ ಮುಖಂಡ ವಾಸು, ಪ್ರಾಣೇಶ್, ರಘು ಇತರರಿದ್ದರು.

ಜಿಲ್ಲೆಗೆ ಅಮಿತ್ ಶಾ ಬರಲಿ

ಕೇಂದ್ರ ಸಚಿವ ಅಮಿತ್‌ ಶಾ ಅವರು ಜಿಲ್ಲೆಗೆ ಬರಲಿ, ಕೇಂದ್ರದಿಂದ ಬರಗಾಲದ ಹಣ ನೀಡಲಾಗದೇ ಕರ್ನಾಟಕದವರಿಗೆ ಅನ್ಯಾಯ ಮಾಡಿದವರು ಯಾವ ಮುಖ ಹೊತ್ತು ಜನರ ಬಳಿ ಮತ ಕೇಳುತ್ತೀರಿ ಎಂದು ಅಮಿತ್ ಶಾ ಸೇರಿದಂತೆ ಬಿಜೆಪಿ ರಾಷ್ಟ್ರೀಯ ನಾಯಕರ ವಿರುದ್ದ ಡಿ.ಕೆ.ಸುರೇಶ್ ಹರಿಹಾಯ್ದರು 

ಹಲವರು ಕಾಂಗ್ರೆಸ್ ಸೇರ್ಪಡೆ:

ಇದೇ ವೇಳೆ ಜೆಡಿಎಸ್ ಬಿಜೆಪಿ ಪಕ್ಷಗಳ ಹಲವು ಮುಖಂಡರಾದ ತಾಪಂ ಮಾಜಿ ಸದಸ್ಯ ಸಿದ್ದೇಗೌಡ (ರವಿ), ಗ್ರಾಪಂ ಮಾಜಿ ಸದಸ್ಯ ದಾಸರಹಳ್ಳಿ ಕೃಷ್ಣಪ್ಪ, ಶ್ರೀನಿವಾಸ್‌ರಾವ್ (ಬಾಬು), ಹುಣಸನಹಳ್ಳಿ ಶಿವಲಿಂಗಣ್ಣ, ಜವಳಗೆರೆದೊಡ್ಡಿ ಪ್ರಕಾಶ, ಹನುಮಂತೇ ಗೌಡನದೊಡ್ಡಿ ಚಂದ್ರು, ಮೊಟ್ಟೆದೊಡ್ಡಿ ಕುಮಾರ್, ಸುಜಯ್, ಕೂನಗಲ್ ವೆಂಕಟಪ್ಪ, ತಿಬ್ಬೇಗೌಡನದೊಡ್ಡಿ ಟಿ.ರಮೇಶ್, ಹಾರ್ಡ್‌ವೇರ್‌ಗಿರೀಶ್ ಮತ್ತಿತರರು ಕಾಂಗ್ರೆಸ್ ಸೇರ್ಪಡೆಯಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿ ಬಿಕ್ಕಟ್ಟು, ಬಲವಂತದ ಭೂಸ್ವಾಧೀನಕ್ಕೆ ಸಿಪಿಎಂ ವಿರೋಧ
ಕನ್ನಡಪ್ರಭ, ಸುವರ್ಣ ನ್ಯೂಸಿಂದ ಚಿತ್ರಕಲಾ ಸ್ಪರ್ಧೆ ಇಂದು