ಇಂದು ಜೆಡಿಎಸ್ - ಬಿಜೆಪಿ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Jul 09, 2024, 12:49 AM IST
8ಕೆಆರ್ ಎಂಎನ್ 4.ಜೆಪಿಜಿರಾಮನಗರ ಕಂದಾಯ ಭವನದ ಎದುರು ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಹಳ್ಳಿಮಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಜೂನ್ 29ರಂದು ಚುನಾವಣೆ ನಿಗದಿಯಾಗಿತ್ತು. ಗ್ರಾಮದಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂದು ಪೊಲೀಸ್ ಇಲಾಖೆಯ ಅಭಿಪ್ರಾಯದ ಹಿನ್ನೆಲೆಯಲ್ಲಿ ಆ ಚುನಾವಣೆಯನ್ನು ಸಹಕಾರ ಸಂಘಗಳ ಉಪನಿಬಂಧಕರು ನಿಯೋಜಿಸಿದ್ದ ಚುನಾವಣಾಧಿಕಾರಿಗಳು ಮುಂದೂಡಿದ್ದರು.

ಕನ್ನಡಪ್ರಭ ವಾರ್ತೆ ರಾಮನಗರ

ಹಳ್ಳಿಮಾಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನ ಚುನಾವಣೆಯನ್ನು ಪದೆ ಪದೇ ಮುಂದೂಡುತ್ತಿರುವ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿಗಳ ಧೋರಣೆ ಖಂಡಿಸಿ ಜು.9ರ ಇಂದು ಜೆಡಿಎಸ್ - ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿವೆ ಎಂದು ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ. ಅಶ್ವತ್ಥ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಸದ ಡಾ.ಸಿ.ಎನ್ .ಮಂಜುನಾಥ್ ನೇತೃತ್ವದಲ್ಲಿ ಪೊಲೀಸ್ ಭವನದ ಎದುರಿನ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ತರುವಾಯ ನೋಂದಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಹಳ್ಳಿಮಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಜೂನ್ 29ರಂದು ಚುನಾವಣೆ ನಿಗದಿಯಾಗಿತ್ತು. ಗ್ರಾಮದಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂದು ಪೊಲೀಸ್ ಇಲಾಖೆಯ ಅಭಿಪ್ರಾಯದ ಹಿನ್ನೆಲೆಯಲ್ಲಿ ಆ ಚುನಾವಣೆಯನ್ನು ಸಹಕಾರ ಸಂಘಗಳ ಉಪನಿಬಂಧಕರು ನಿಯೋಜಿಸಿದ್ದ ಚುನಾವಣಾಧಿಕಾರಿಗಳು ಮುಂದೂಡಿದ್ದರು.

ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಶಾಂತಿ ಸಭೆ ನಡೆಸಲಾಯಿತು. ಆನಂತರ ಜುಲೈ 8ರಂದು ಚುನಾವಣೆ ನಿಗದಿ ಪಡಿಸಲಾಗಿತ್ತು. ಆದರೀಗ ಚುನಾವಣಾಧಿಕಾರಿಗಳೇ ಚುನಾವಣೆ ರದ್ದು ಪಡಿಸಿ ಗೈರಾಗಿದ್ದಾರೆ. ಇದರಿಂದ ಸಹಕಾರ ಸಂಘಗಳ ಅಧಿಕಾರಿಗಳು ಸಹಕಾರ ತತ್ವವನ್ನು ಗಾಳಿಗೆ ತೂರಿ ರಾಜಕಾರಣಿಗಳ ಒತ್ತಡಕ್ಕೆ ಮಣಿದಿರುವುದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು.

ಈ ಸಂಘದಲ್ಲಿ 7 ಮಂದಿ ಜೆಡಿಎಸ್ ಬೆಂಬಲಿತ, 4 ಮಂದಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿದ್ದಾರೆ. ಚುನಾವಣೆ ನಡೆದರೆ ಅಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗುತ್ತದೆ ಎಂದು ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಮತ್ತು ಕಾಂಗ್ರೆಸ್ ಮುಖಂಡರು ಜೆಡಿಎಸ್ ಬೆಂಬಲಿತರ ಪೈಕಿ ಕೆಲವರನ್ನು ತಮ್ಮತ್ತ ಸೆಳೆಯಲು ಹುನ್ನಾರ ನಡೆಸಿ ಪೊಲೀಸರು ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ತಂದು ಚುನಾವಣೆಯನ್ನು ಮುಂದೂಡಿಸಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ಮುಖಂಡ ಉಮೇಶ್, ಜೆಡಿಎಸ್ ಮುಖಂಡ ಸಬ್ಬಕೆರೆ ಶಿವಲಿಂಗಯ್ಯ ಮಾತನಾಡಿ, ಹಳ್ಳಿಮಾಳ ಸೊಸೈಟಿ ಜೆಡಿಎಸ್ ವಶ ಆಗುತ್ತದೆ ಎಂಬ ಕಾರಣಕ್ಕೆ ಅಧ್ಯಕ್ಷರ ಚುನಾವಣೆಯನ್ನು ಮುಂದೂಡಲಾಗುತ್ತಿದೆ. ಇದರ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿರುವುದು ಸ್ಪಷ್ಟವಾಗಿದೆ. ಈವರೆಗೆ ಕ್ಷೇತ್ರದಲ್ಲಿ ಇಂತಹ ಕ್ಷುಲ್ಲಕ ರಾಜಕಾರಣ ನಡೆದಿರಲಿಲ್ಲ. ಕಾಂಗ್ರೆಸ್ ಶಾಸಕರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.ಚುನಾವಣೆ ನಡೆಸದಿದ್ದರೆ ಉಗ್ರ ಪ್ರತಿಭಟನೆ ಹಮ್ಮಕಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ