ರಾಮನಗರ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಡಿವೈಎಸ್ಪಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ರೌಡಿಗಳ ಪರೇಡ್ ನಡೆಸಲಾಯಿತು.
ರಾಮನಗರ ಪುರ ಠಾಣೆ, ಐಜೂರು ಠಾಣೆ, ಗ್ರಾಮಾಂತರ ಠಾಣೆ ಹಾಗೂ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗಳನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ, ಪ್ರತಿಯೊಬ್ಬರ ಅಪರಾಧ ಹಿನ್ನೆಲೆಯನ್ನು ಡಿವೈ ಎಸ್ಪಿ ಶ್ರೀನಿವಾಸ್ ಪರಿಶೀಲಿಸಿದರು.
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರ ವಿರುದ್ಧ ಕಠಿಣವಾಗಿ ನಡೆದುಕೊಳ್ಳಬೇಕು, ಕೊಲೆ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳಲ್ಲಿ ಶಾಮೀಲಾದವರ ಚಟುವಟಿಕೆಗಳ ಮೇಲೆ ವಿಶೇಷ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ವಿವಿಧ ಪ್ರಕರಣಗಳಲ್ಲಿ ಕೆಲವರು ಪೊಲೀಸ್ ಇಲಾಖೆಯ ಸಾಕ್ಷಿಗಳಿದ್ದಾರೆ. ಅಂತಹವರನ್ನು ಯಾರು ಕೂಡ ಹೆದರಿಸುವಂತಿಲ್ಲ. ಅನುಮತಿ ಇಲ್ಲದೆ ಹಠಾತ್ ಆಗಿ ಯಾರೂ ಪ್ರತಿಭಟನೆ, ರಸ್ತೆತಡೆ, ಬಂದ್ ಮಾಡುವಂತಿಲ್ಲ. ಒಂದು ವೇಳೆ ಆ ರೀತಿ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿದರೆ ನಿಮಗಷ್ಟೇ ಅಲ್ಲ, ನಿಮ್ಮ ಕುಟುಂಬ ವರ್ಗದವರಿಗೂ ಸಮಸ್ಯೆಯಾಗುತ್ತದೆ ಎಂದು ಶ್ರೀನಿವಾಸ್ ಕಿವಿಮಾತು ಹೇಳಿದರು.ಪುರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಕೃಷ್ಣ, ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ರಮೇಶ್, ಬಿಡದಿ ಠಾಣೆ ವೃತ್ತ ನಿರೀಕ್ಷಕ ಶಂಕರ್ ನಾಯಕ್ ಸೇರಿದಂತೆ ಠಾಣೆಗಳ ಸಬ್ ಇನ್ಸ್ ಪೆಕ್ಟರ್ ಗಳು ಹಾಜರಿದ್ದರು.