-ದೋರನಹಳ್ಳಿ ಸಿದ್ಧಾರೂಢ ಮಠದಲ್ಲಿ ವಿಶ್ವಶಾಂತಿಗಾಗಿ 29ನೇ ವರ್ಷದ ಜ್ಞಾನ ದಾಸೋಹ
----ಕನ್ನಡಪ್ರಭ ವಾರ್ತೆ ಶಹಾಪುರ
ರಮಾನಂದ ಅವಧೂತರು ಎಂದಿಗೂ ಆಡಂಬರದ ಜೀವನ ಅಪೇಕ್ಷೆ ಪಟ್ಟಿರಲಿಲ್ಲ. ಕಾಯಕ, ತತ್ವ, ನಿಷ್ಠೆ, ಸರಳತೆಯಿಂದ ಬದುಕಿ ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಡಾ.ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ದೋರನಹಳ್ಳಿ ಗ್ರಾಮದ ಸಿದ್ಧಾರೂಢ ಮಠದಲ್ಲಿ ವಿಶ್ವಶಾಂತಿಗಾಗಿ ನಡೆದ ಜ್ಞಾನ ದಾಸೋಹ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಚಾರಕ್ಕಾಗಿ ಹಾತೊರೆಯುವ ಸ್ವಾಮೀಜಿಗಳಿರುವಾಗ ಅವಧೂತರು ಪ್ರಚಾರದಿಂದ ದೂರವೇ ಇದ್ದವರು. ರಮಾನಂದ ಅವಧೂತರು ಸಗರನಾಡಿನಾದ್ಯಂತ ಸಂಚರಿಸಿ ಜನರಿಗೆ ಆಶೀರ್ವಸಿದರು. ಅವರ ತಪೋಶಕ್ತಿಯಿಂದಲೇ ಇಂದು ಸಗರ ನಾಡು ಶ್ರೀಮಂತವಾಗಿದೆ ಎಂದರು.
ಪ್ರಣವಾನಂದ ಮಹಾಸ್ವಾಮಿ ಮಾತನಾಡಿ, ದೋರನಹಳ್ಳಿಯ ರಮಾನಂದ ಅವಧೂತರು ಯಾವುದೇ ಜಾತಿಗೆ ಸೀಮಿತರಾಗದೇ ಎಲ್ಲ ಜಾತಿಗಳನ್ನು ಒಂದುಗೂಡಿಸಿದ ಶಿವಾವತಾರಿಯಾಗಿದ್ದಾರೆ. ಅವರ ತತ್ವ ಸಿದ್ಧಾಂತ ಇಂದಿನ ಪೀಳಿಗೆಗೆ ಅಗತ್ಯವಾಗಿವೆ ಎಂದರು.ಭೀಮರಾಯನ ಗುಡಿಯ ಸಿದ್ಧಾರೂಢ ಮಠದ ಮಾತೋಶ್ರೀ ಜ್ಞಾನೇಶ್ವರಿ ದೇವಿ ಮತ್ತು ಸೈದಾಪುರ ಸಿದ್ಧಾರೂಢ ಮಠದ ಸೋಮೇಶ್ವರಾನಂದ ಮಹಾಸ್ವಾಮಿಗಳು ಹಾಗೂ ಯಲಗೋಡ ಪರಮಾನಂದೇಶ್ವರ ಮಠದ ಗುರುಲಿಂಗ ಮಹಾಸ್ವಾಮಿ ಮಾತನಾಡಿದರು. ಕಾರ್ಯಕ್ರಮದ ವೇದಿಕೆಯ ಮೇಲೆ ಭೀಮಾಶಂಕರಾನಂದ ಅವಧೂತರು, ಅನಂತಾನಂದ ಶರಣರು, ಪರಮಾನಂದ ಶಾಸ್ತ್ರಿಗಳು, ಹಣಮೆಗೌಡ ಬೀರನಕಲ್, ಡಾ.ಭೀಮಣ್ಣ ಮೇಟಿ, ಮಹೇಶ್ ಗೌಡ ಮುದ್ನಾಳ ಹಾಗೂ ಇನ್ನಿತರ ಮುಖಂಡರಿದ್ದರು.
ನಿವೃತ್ತ ಉಪನ್ಯಾಸಕ ವಿಶ್ವನಾಥ ಡೊಣ್ಣುರು ನಿರೂಪಿಸಿದರು. ಮುಖ್ಯಗುರು ಯಮನಪ್ಪ ಮುಕುಡಿ ಸ್ವಾಗತಿಸಿದರು. ಗ್ರಂಥ ಪಾಲಕ ಹಯ್ಯಾಳಪ್ಪ ಗುಂಟನೂರು ವಂದಿಸಿದರು.ಪಲ್ಲಕ್ಕಿ ಮೆರವಣಿಗೆ: ಶಹಾಪುರ: ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ವಿಶ್ವಶಾಂತಿಗಾಗಿ ನಡೆದ 29ನೇ ವರ್ಷದ ಜ್ಞಾನ ದಾಸೋಹ ಮಹೋತ್ಸವದ ಅಂಗವಾಗಿ ಶ್ರದ್ಧೆ, ಭಕ್ತಿಯ ಮಧ್ಯೆ ಸಿದ್ಧಾರೂಢರ ಅದ್ಧೂರಿ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ಸಿದ್ಧಾರೂಢರ ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಯಲ್ಲಿ ಸಂಚರಿಸಿ ಸಿದ್ಧಾರೂಡರ ಮಠಕ್ಕೆ ತಲುಪಿ ಸಮಾರೋಪಗೊಂಡಿತು.ಶ್ರೀಮಠಕ್ಕೆ ದಾನ ನೀಡಿದ ದಾನಿಗಳನ್ನು, ಗಣ್ಯರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.
------ಫೋಟೊ: ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಸಿದ್ಧಾರೂಢ ಮಠದಲ್ಲಿ ವಿಶ್ವಶಾಂತಿಗಾಗಿ ನಡೆದ 29ನೇ ವರ್ಷದ ಜ್ಞಾನ ದಾಸೋಹ ಮಹೋತ್ಸವದ ಕಾರ್ಯಕ್ರಮದಲ್ಲಿ ಅಬ್ಬೆತುಮಕೂರಿನ ಸಿದ್ಧಸಂಸ್ಥಾನಮಠದ ಡಾ. ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
3ವೈಡಿಆರ್12