)
ಉಡುಪಿ: ಇಲ್ಲಿನ ದೊಡ್ಡಣಗುಡ್ಡೆಯ ಪುರಾಣೇತಿಹಾಸ ಪ್ರಸಿದ್ಧ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಮಹೋತ್ಸವಕ್ಕೆ ನಿತ್ಯವೂ ಭಕ್ತ ಸಾಗರವೇ ಹರಿದು ಬರುತ್ತಿದೆ. ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಿತ್ಯವೂ ಧಾರ್ಮಿಕ - ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವದಿಂದ ನಡೆಯುತ್ತಿವೆ.ಕ್ಷೇತ್ರದಲ್ಲಿ ನವರಾತ್ರಿಯ ಅಂಗವಾಗಿ ನಡೆಯುತ್ತಿರುವ ಸಾಂಸ್ಕೃತಿಕ ವೈಭವಕ್ಕೆ ಗುರೂಜಿ ಅವರು ಚಾಲನೆ ನೀಡಿ ಅನುಗ್ರಹ ಸಂದೇಶ ನೀಡುತ್ತಾ, ಕಲಾವಿದರನ್ನು ವಿಶೇಷವಾಗಿ ಅನುಗ್ರಹಿಸುವ ಶಕ್ತಿಪೀಠ ಇದು, ಇಲ್ಲಿ ಶ್ರೀ ದುರ್ಗಾ ಆದಿಶಕ್ತಿ ದೇವಿ ಸಾನ್ನಿಧ್ಯದಲ್ಲಿ ತಮ್ಮ ಕಲಾ ಪ್ರತಿಭೆಯನ್ನು ಸಮರ್ಪಿಸುವ ಕಲಾವಿದರು ಮುಂದೆ ಯಶಸ್ಸಿನ ಮೆಟ್ಟಿಲೇರಿದ್ದಾರೆ. ಆದ್ದರಿಂದ ಈ 9 ದಿನಗಳ ಕಾಲ ಕಲಾವಿದರು ಸಂಗೀತ, ನೃತ್ಯ ಕಲೆಯ ಮೂಲಕ ತಾಯಿಯ ಆರಾಧನೆ ನಡೆಸಿ, ಕ್ಷೇತ್ರದ ಸಾಂಸ್ಕೃತಿಕ ವೈಭವವನ್ನು ಹೆಚ್ಚಿಸುತ್ತಿದ್ದಾರೆ ಎಂದರು.ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಉಷಾ ರಮಾನಂದ, ಸಹ ಮುಖ್ಯಶಿಕ್ಷಕಿ ಚಂದ್ರಕಲಾ ಶರ್ಮ, ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಆಚಾರ್ಯ ಉಪಸ್ಥಿತರಿದ್ದರು.ಆದಿಶಕ್ತಿ ಕ್ಷೇತ್ರದಲ್ಲಿ ವೇ.ಮೂ. ಸರ್ವೇಶ ತಂತ್ರಿ, ವೇ.ಮೂ. ವಿಖ್ಯಾತ್ ಭಟ್, ಗಣೇಶ ಸರಳಾಯರ ನೇತೃತ್ವದಲ್ಲಿ ಶರನ್ನವರಾತ್ರಿಯ ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತಿವೆ. ಮಂಗಳವಾರ ಶ್ರೀ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮೀ ಸಾನ್ನಿಧ್ಯದಲ್ಲಿ ಶ್ರೀ ಲಕ್ಷ್ಮೀ ಸಹಸ್ರನಾಮ ಪಾಯಸ ಹೋಮ, ಸಂಜೆ 6ರಿಂದ ದೀಪಾರಾಧನೆ ಸಹಿತ ರಂಗಪೂಜೆ ನಡೆಯಿತು. ಬೆಳಗ್ಗೆ ಕಡೆಕಾರು ಚಿತ್ರಾಕ್ಷಿ ಉಮೇಶ್ ದಂಪತಿ ಹಾಗೂ ಮುಂಬಯಿಯ ಅರುಂಧತಿ ಮತ್ತು ಮನೆಯವರ ಚಂಡಿಕಾಯಾಗಗಳು, ಕಡೆಕಾರು ಚಿತ್ರಾಕ್ಷಿ ಉಮೇಶ್ ದಂಪತಿ ಸೇವಾರ್ಥ ದುರ್ಗಾ ನಮಸ್ಕಾರ ಹಾಗೂ ರಂಗಪೂಜೆ ನಡೆಯಿತು.