ಭಾರತೀಯ ಜೀವನ ಶಿಕ್ಷಣ ಶಿಬಿರದಲ್ಲಿ ಸು.ರಾಮಣ್ಣ

KannadaprabhaNewsNetwork |  
Published : Apr 16, 2025, 12:37 AM IST
ಫೋಟೋ ಏ.೧೫ ವೈ.ಎಲ್.ಪಿ. ೦೭  | Kannada Prabha

ಸಾರಾಂಶ

ನೆರೆಹೊರೆಯವರು ಪ್ರೀತಿಯಿಂದ ಗೌರವಿಸುವಷ್ಟು ಆದರ್ಶಪ್ರಾಯರಾಗಿ ಬೆಳೆಯಬೇಕು

ಯಲ್ಲಾಪುರ: ಮಕ್ಕಳು ಮನೆಗೆ ಹೊರೆಯಾಗದೇ ಆಸ್ತಿಯಾಗಬೇಕು. ನೆರೆಹೊರೆಯವರು ಪ್ರೀತಿಯಿಂದ ಗೌರವಿಸುವಷ್ಟು ಆದರ್ಶಪ್ರಾಯರಾಗಿ ಬೆಳೆಯಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಬೋಧಿನಿಯ ರಾಷ್ಟ್ರೀಯ ಮುಖ್ಯಸ್ಥ ಸು.ರಾಮಣ್ಣ ಹೇಳಿದರು.

ಅವರು ಮಂಗಳವಾರ ವಿಶ್ವದರ್ಶನ ಸೇವಾ, ಅ.ಭಾ.ಸಾ.ಪ., ಗೋವರ್ಧನ ಗೋಶಾಲೆ ಸಂಯುಕ್ತವಾಗಿ ಹಮ್ಮಿಕೊಂಡ ಭಾರತೀಯ ಜೀವನ ಶಿಕ್ಷಣ ಶಿಬಿರದ ೫ನೇ ದಿನ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ, ಮಕ್ಕಳ ಜೊತೆ ಸಂವಾದ ನಡೆಸಿದರು.

ಯಾವ ವ್ಯಕ್ತಿ ತಂದೆ, ತಾಯಿ, ಗುರುಗಳು, ಅತಿಥಿಗಳನ್ನು ಹಾಗೂ ರಾಷ್ಟ್ರವನ್ನು ಪ್ರೀತಿಯಿಂದ, ಗೌರವದಿಂದ ಕಾಣುತ್ತಾನೋ ಅಂತಹವರು ಮಾತ್ರ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯ. ನಾವು ದಾರಿ ತೋರುವ ಮಕ್ಕಳಾಗಬೇಕು. ಪ್ರತಿನಿತ್ಯವೂ ಕೆಲವೇ ಸಮಯವಾದರೂ ಮನೆಯ ದೇವರ ಗುಡಿಗೆ ಹೋಗಿ ದೇವರನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿ, ಪ್ರಾರ್ಥಿಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಈ ದೇಶಕ್ಕೆ ಪೂರ್ವಜರು ಭಾರತ ಎಂದು ನಾಮಕರಣ ಮಾಡಿದ್ದರು. ಆದರೆ ಬ್ರಿಟಿಷರು ಇಂಡಿಯಾ ಎಂದರು.

ಇಂದು ಅವೆರಡೂ ಇದ್ದರೂ ನಾವು ಭಾರತೀಯರಾಗಿಯೇ ಇರಬೇಕು. ನೀವೆಲ್ಲ ನಿಮ್ಮ ತಾಯಿಗೆ ಅಮ್ಮ ಅನ್ನುತ್ತೀರಾ ಅಥವಾ ಮಮ್ಮಿ ಎನ್ನುತ್ತೀರೋ. ಮಮ್ಮಿ ಎಂದರೆ ಸತ್ತ ಹೆಣ ಎಂದು ಅರ್ಥವಾಗುತ್ತದೆ. ಪ್ರತಿ ವ್ಯಕ್ತಿಯೂ ತಂದೆ, ತಾಯಿಗಳನ್ನು ಪ್ರೀತಿಯಿಂದ ಗೌರವಿಸಬೇಕು. ಎಂದೂ ಅವರನ್ನು ಮರೆಯುವಂತಿಲ್ಲ. ಜನ್ಮ ನೀಡಿದ ಜನ್ಮದಾತರು. ಅಂತೆಯೇ ನಮ್ಮ ಭಾರತ ಮಾತೆಯೂ ನಮ್ಮನ್ನು ಹೊತ್ತುನಿಂತಿದೆ. ಮನೆಯಲ್ಲಿ ಪ್ರೀತಿಯ ಮಮತೆಯ ಊಟ ದೊರೆಯುತ್ತದೆ. ಹೊಟೇಲಿನಲ್ಲಿ ವ್ಯವಹಾರದ ಊಟ ದೊರೆಯುತ್ತದೆ. ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ. ನಮ್ಮ ಮನೆ ದೇವಾಲಯದಂತಿದ್ದಾಗ ಪ್ರಹ್ಲಾದನಂತಾಗುತ್ತೇವೆ. ಇಲ್ಲವಾದರೆ ರಾಕ್ಷಸರಾಗುತ್ತೇವೆ. ಶ್ರದ್ಧಾಭಕ್ತಿಗೆ ಎಷ್ಟು ಶಕ್ತಿಯಿದೆ ಎಂದರೆ ಕನಕದಾಸನ ಭಕ್ತಿಯಿಂದ ಅರ್ಥಮಾಡಿಕೊಳ್ಳಬಹುದು. ಇಂತಹ ಮೌಲ್ಯಯುತ ಶಿಬಿರಗಳು ನಿಮ್ಮ ಜೀವನವನ್ನು ಬದಲಾವಣೆ ಮಾಡಲು ಪೂರಕವಾದೀತು ಎಂದರು.

ಹಿರಿಯರಾದ ಸುಬ್ರಾಯ ಭಟ್ಟ ಬಗನಗದ್ದೆ ಉಪಸ್ಥಿತರಿದ್ದರು. ಸಂಘಟಕರಲ್ಲೊಬ್ಬರಾದ ರಾಮಕೃಷ್ಣ ಭಟ್ಟ ಕವಡಿಕೆರೆ ಅತಿಥಿಗಳನ್ನು ಪರಿಚಯಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾವೂರು ಶ್ರೀ ಗೋಪಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಸಂಪನ್ನ
ಸಚಿವ ತಿಮ್ಮಾಪುರ ಬೆಂಬಲಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ