ರಾಮಾನುಜಾಚಾರ್ಯರ 1007ನೇ ತಿರುನಕ್ಷತ್ರ ಮಹೋತ್ಸವ

KannadaprabhaNewsNetwork |  
Published : May 03, 2024, 01:08 AM IST
2ಕೆಎಂಎನ್ ಡಿ14 | Kannada Prabha

ಸಾರಾಂಶ

ತಿರುನಕ್ಷತ್ರ ಮಹೋತ್ಸವದ ಅಂಗವಾಗಿ ಆಚಾರ್ಯ ರಾಮಾನುಜರಿಗೆ ವಿವಿಧ ವಾಹನೋತ್ಸವಗಳು, ಅಭಿಷೇಕ, ಪಲ್ಲಕ್ಕಿ ಉತ್ಸವಗಳು, ವಿಶೇಷ ಅಲಂಕಾರಗಳು, ನೈವೇಧ್ಯ ಸಮರ್ಪಣೆ, ನೇಮಿಸೇವೆಗಳು, ಮುಡಿಉತ್ಸವ, ಸ್ಥಾನಿಕರ ಭಿಕ್ಷಾ ಕೈಂಕರ್ಯ, ರಥೋತ್ಸವ ನೆರವೇರಲಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಆಚಾರ್ಯರ ಕರ್ಮಭೂಮಿ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಮೇ 12 ರಂದು ರಾಮಾನುಜಾಚಾರ್ಯರ 1007ನೇ ತಿರುನಕ್ಷತ್ರ ಮಹೋತ್ಸವ (ಜಯಂತ್ಯುತ್ಸವ ) ವೈಭವದಿಂದ ನೆರವೇರಲಿದೆ.

ತತ್ಸಂಬಂಧದ ಧಾರ್ಮಿಕ ಕಾರ್ಯಕ್ರಮಗಳು ಮೇ 3ರ ಇಂದಿನಿಂದ ಆರಂಭವಾಗಿ ಮೇ 12 ರ ದಶಾವತಾರ ಮಹಾಶಾತ್ತು ಮೊರೈಯೊಂದಿಗೆ ಸಂಪನ್ನಗೊಳ್ಳಲಿದೆ. ತಿರುನಕ್ಷತ್ರ ಮಹೋತ್ಸವದ ಅಂಗವಾಗಿ ಆಚಾರ್ಯ ರಾಮಾನುಜರಿಗೆ ವಿವಿಧ ವಾಹನೋತ್ಸವಗಳು, ಅಭಿಷೇಕ, ಪಲ್ಲಕ್ಕಿ ಉತ್ಸವಗಳು, ವಿಶೇಷ ಅಲಂಕಾರಗಳು, ನೈವೇಧ್ಯ ಸಮರ್ಪಣೆ, ನೇಮಿಸೇವೆಗಳು, ಮುಡಿಉತ್ಸವ, ಸ್ಥಾನಿಕರ ಭಿಕ್ಷಾ ಕೈಂಕರ್ಯ, ರಥೋತ್ಸವ ನೆರವೇರಲಿದೆ.

ರಾಮಾನುಜಾಚಾರ್ಯರು ಮೇಲುಕೋಟೆಯಲ್ಲಿ 12 ವರ್ಷಗಳ ಕಾಲ ವಾಸ್ತವ್ಯ ಹೂಡಿ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡಿ, ಚೆಲುವನಾರಾಯಣಸ್ವಾಮಿಗೆ ಪ್ರತಿದಿನ ಆರಾಧನೆ ಮಾಡಿದ್ದರು. ಹೀಗಾಗಿ ಕರ್ನಾಟಕದಲ್ಲಿನ ರಾಮಾನುಜರ ಕರ್ಮಭೂಮಿಯಾದ ಮೇಲುಕೋಟೆಯಲ್ಲಿ ನಡೆಯುವ ಆಚಾರ್ಯರ ತಿರುನಕ್ಷತ್ರ ಮಹೋತ್ಸವಕ್ಕೆ ವಿಶೇಷ ಮಹತ್ವವಿದ್ದು ಸಾವಿರಾರು ಸಂಖ್ಯೆಯ ಶ್ರೀವೈಷ್ಣವರು ಪಾಲ್ಗೊಳ್ಳಲಿದ್ದಾರೆ.

ತಿರುನಕ್ಷತ್ರ ಮಹೋತ್ಸವದ ಅಂಗವಾಗಿ ಮೇ 3 ರಿಂದ 12 ರವರೆಗೆ ಪ್ರತಿದಿನ ಬೆಳಿಗ್ಗೆ 8ಕ್ಕೆ ವಿವಿಧ ವಾಹನೋತ್ಸವ ನೆರವೇರಲಿದೆ. ರಾಮಾನುಜರಿಗೆ ಕ್ರಮವಾಗಿ ಮಂಟಪವಾಹನ, ಹಂಸವಾಹನ, ಅಶ್ವವಾಹನ, ಗಜವಾಹನ, ಚಂದ್ರಮಂಡಲವಾಹನ, ಸೂರ್ಯ ಮಂಡಲವಾಹನ ನೆರವೇರಲಿದೆ.

ಮೇ 7 ರಂದು ರಾತ್ರಿ 7ಕ್ಕೆ ಬಂಗಾರದ ಪುಷ್ಪಪಲ್ಲಕ್ಕಿ ಉತ್ಸವ, ಮೇ 8 ರಂದು ರಾತ್ರಿ 7.30 ಕ್ಕೆ ಗೋವಿಂದರಾಜಮುಡಿ ಕಿರೀಟಧಾರಣ ಮಹೋತ್ಸವ ನಡೆಯಲಿದೆ, ಮೇ 11 ರಂದು ಬೆಳಿಗ್ಗೆ 9 ಗಂಟೆಗೆ ರಥಾರೋಹಣ, ಪೂಜಾ ಕೈಂಕರ್ಯ ಮುಕ್ತಾಯವಾದ ನಂತರ 10 ಗಂಟೆಗೆ ಮಹಾರಥೋತ್ಸವ ಚತುರ್ವೀಧಿಗಳಲ್ಲಿ ನೆರವೇರಲಿದೆ.

ಪ್ರಮುಖ ದಿನವಾದ ಮೇ 12 ರ ರಾಮಾನುಜರ ಜಯಂತ್ಯುತ್ಸವದಂದು ಬೆಳಿಗ್ಗೆ 7 ಗಂಟೆಗೆ ಮಂಟಪ ವಾಹನೋತ್ಸವ, 8 ಗಂಟೆಗೆ ಕಲ್ಯಾಣಿಯಿಂದ ಅಭಿಷೇಕ ತೀರ್ಥಮೆರವಣಿಗೆ, 10ಗಂಟೆಗೆ ದ್ವಾದಶಾರಾಧನೆಯೊಂದಿಗೆ ಅಭಿಷೇಕ ಮಹಾಶಾತ್ತುಮೊರೈ, ಸಂಜೆ ರಾಮಾನುಜರಿಗೆ ಶ್ರೀಗಂಧದ ಅಲಂಕಾರದಲ್ಲಿ ಬೆಳ್ಳಿಯ ಪಲ್ಲಕ್ಕಿಯಲ್ಲಿ ಉತ್ಸವ, ರಾತ್ರಿ 10ಗಂಟೆಗೆ ಚೆಲುವನಾರಾಯಣಸ್ವಾಮಿಗೆ ದಶಾವತಾರ ಉತ್ಸವ ನಡೆಯಲಿದೆ.

ರಾಮಾನುಜರಿಗೆ ಸ್ಥಾನಿಕರ ಭಿಕ್ಷಾ ಕೈಂಕರ್ಯ :

ರಾಮಾನುಜರು ಮೇಲುಕೋಟೆಯಲ್ಲಿ ನೆಲೆಸಿದ್ದ ವೇಳೆ ತಮ್ಮ ನಾಲ್ಕುಮಂದಿ ಆಪ್ತ ಶಿಷ್ಯರಾದ ಸ್ಥಾನಿಕರಿಂದ ಮಾತ್ರ ಸರದಿಯಂತೆ ಭಿಕ್ಷೆ ಸ್ವೀಕರಿಸುತ್ತಿದ್ದರು. ಈ ಐತಿಹಾಸಿಕ ವಿಶೇಷದ ಪ್ರತೀಕವಾಗಿ ಸ್ಥಾನಿಕರ ಗುರುಪೀಠಗಳು ತಿರುನಕ್ಷತ್ರದ ವೇಳೆ ಇಂದಿಗೂ ಭಿಕ್ಷಾಕೈಂಕರ್ಯ ಸಮರ್ಪಿಸುತ್ತಿವೆ.

ಮೇ 9 ರ ರಾತ್ರಿ ಪ್ರಥಮ ಸ್ಥಾನಿಕ ಕರಗಂ ರಾಮಪ್ರಿಯ, ಮೇ 10 ರಂದು ಮೂರನೇ ಸ್ಥಾನಿಕರು ಮಹಾರಥೋತ್ಸವದಂದು ರಾತ್ರಿ ಯತಿರಾಜದಾಸರ್, ನಾಲ್ಕನೇ ಸ್ಥಾನಿಕ ಶ್ರೀನಿವಾಸನರಸಿಂಹನ್ ಗುರೂಜಿ ಗುರುಪೀಠಗಳು ಭಿಕ್ಷಾ ಕೈಂಕರ್ಯಸೇವೆ ಸಮರ್ಪಿಸಲಿವೆ. ತಿರುನಕ್ಷತ್ರದಂದು ಎರಡನೇ ಸ್ಥಾನಿಕರ ಸೇವೆಯಿದೆ.

PREV

Recommended Stories

ವಿಕ್ಟೋರಿಯಾ ಆಸ್ಪತ್ರೆಗೆ ಸಿದ್ದರಾಮಯ್ಯ ದಿಢೀರ್ ಭೇಟಿ
ಇಂದು ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ : ಇಲ್ಲೆಲ್ಲಾ ವಾಹನಗಳಿಗೆ ನಿಷೇಧ