ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾದ ಪಿಎಸ್ಐ ಲೋಕೇಶ್ ಅವರಿಗೆ ಡಿಜಿ, ಐಜಿಪಿ ಪ್ರಶಂಸಾ ಪದಕವನ್ನು ಹಿರಿಯ ಅಧಿಕಾರಿಗಳಾದ ಅಲೋಕ್ ಮೋಹನ್ ನೀಡಿ ಗೌರವಿಸಿದರು.ಬೆಂಗಳೂರಿನ ಪೆರೇಡ್ ಗ್ರೌಂಡ್‌ನಲ್ಲಿ ನಡೆದ 2025ನೇ ರಾಜ್ಯಮಟ್ಟದ ಪ್ರಶಸ್ತಿ ಸ್ವೀಕಾರ ಕಾರ್ಯಕ್ರಮದಲ್ಲಿ ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ದಕ್ಷ ಪ್ರಾಮಾಣಿಕತೆ ಮೆಚ್ಚಿ ಡಿಜಿ, ಐಜಿಪಿ ಪ್ರಶಸ್ತಿ ಪದಕ ನೀಡಿ ಗೌರವಿಸಲಾಯಿತು. ರಾಮಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ಕಳೆದ ಒಂದುವರೆ ವರ್ಷಗಳಲ್ಲಿ ಚಾಮರಾಜನಗರ ಎಸ್ಪಿ ಕೆ.ಟಿ.ಕವಿತಾ ಹಾಗೂ ಉಪ ವಿಭಾಗ ಡಿವೈಎಸ್ಪಿ ಧರ್ಮೇಂದರ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ಠಾಣಾಸರಹದ್ದಿನಲ್ಲಿ ನಡೆಯುತ್ತಿದ್ದ ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಹಲವರನ್ನು ಪತ್ತೆ ಹಚ್ಚಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.ಕಾಡು ಪ್ರಾಣಿಗಳನ್ನು ಬೇಟೆಯಾಡಲು ಅಕ್ರಮವಾಗಿ ಅಡಗಿಸಿಟ್ಟಿದ್ದ ನಾಡ ಬಂದೂಕು ಪತ್ತೆ ಕಾರ್ಯ ಹಾಗೂ ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ಹಲವರ ಬಂಧನ, ತಮಿಳುನಾಡಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಜಾನುವಾರುಗಳಿಗೆ ಸಿಡಿಮದ್ದು ಇಟ್ಟು ಹತ್ಯೆ ಮಾಡುತ್ತಿದ್ದ ಕಿರಾತಕರ ತಂಡ ಪತ್ತೆ ಕಾರ್ಯ ಹಾಗೂ ಶ್ರೀ ಕ್ಷೇತ್ರಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮದ್ಯ ಪತ್ತೆ ಹಾಗೂ ಆನೆಯ ದಂತ ಸಾಗಣೆ ಮಾಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಜೈಲುಗಟ್ಟಿದ ಹಿನ್ನೆಲೆ ರಾಜ್ಯಮಟ್ಟದ ಪ್ರಶಸ್ತಿಗೆ ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ಭಾಜನರಾಗಿದ್ದಾರೆ.
ಹಿರಿಯ ಅಧಿಕಾರಿಗಳ ಪ್ರಸಂಶೆ:ರಾಮಾಪುರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಒಂದುವರೆ ವರ್ಷಗಳಲ್ಲಿ ಉತ್ತಮ ಸೇವೆ ಸಲ್ಲಿಸಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳನ್ನು ಪತ್ತೆಹಚ್ಚಿ ಜೈಲಿಗಟ್ಟಿದ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾದ ಸಬ್ಇನ್ಸ್‌ಪೆಕ್ಟರ್ ಲೋಕೇಶ್‌ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ ಹಾಗೂ ಹಿರಿಯ ಅಧಿಕಾರಿಗಳು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.