ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರುಗಳಿಂದ ರಾಜ್ಯದ ವಿವಿಧೆಡೆ ಪ್ರವಾಸ: ಸಿ.ಎಚ್.ಬಾಳನಗೌಡ್ರ

KannadaprabhaNewsNetwork | Published : Jan 2, 2025 12:30 AM

ಸಾರಾಂಶ

ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಜನವರಿ ತಿಂಗಳಿನಲ್ಲಿ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಶ್ರೀಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ತಿಳಿಸಿದ್ದಾರೆ.

ಜನವರಿಯಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿ । ತೆಲಂಗಾಣದಲ್ಲಿ 7ಕ್ಕೆ ಶ್ರೀಗಳ ಜನ್ಮದಿನ

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಜನವರಿ ತಿಂಗಳಿನಲ್ಲಿ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಶ್ರೀಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜ.3ರಿಂದ 7ರವರೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಅವತರಿಸಿದ ತೆಲಂಗಾಣ ರಾಜ್ಯದ ಕೊಲನುಪಾಕ ಶ್ರೀ ಸ್ವಯಂಭು ಸೋಮೇಶ್ವರ ಸ್ವಾಮಿಗೆ ವಿಶೇಷ ಪೂಜೆ ಹಾಗೂ 7ರಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ 69ನೇ ವರ್ಷದ ಜನ್ಮ ದಿನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸುವರು.

8ರಂದು ಭಾಲ್ಕಿ ತಾಲೂಕಿನ ಹಲಬರ್ಗಾದಲ್ಲಿ ಶಿವನಿ ಶ್ರೀಗಳ ಪಟ್ಟಾಧಿಕಾರ ವರ್ಧಂತಿ ಸಮಾರಂಭ, 9ರಂದು ಮಹಾರಾಷ್ಟ್ರ ರಾಜ್ಯದ ಆಲೂರಿನಲ್ಲಿ ಮಹಾಂತಯ್ಯ ಹಿರೇಮಠ ಅವರ ಷಷ್ಠ್ಯಬ್ಧಿ ಸಮಾರಂಭ, 10ರಂದು ಸವದತ್ತಿ ತಾಲೂಕಿನ ಬೆಟಸೂರು ಗ್ರಾಮದಲ್ಲಿ ಪಂಚಾಕ್ಷರಿ ಮಠದ ಗೋಪುರ ಕಳಸಾರೋಹಣ, 11ರಂದು ಅಜ್ಜಂಪುರ ತಾಲೂಕಿನ ಬುಕ್ಕಾಂಬುಧಿಯಲ್ಲಿ ಕವಲೇದುರ್ಗ ಶ್ರೀಗಳವರ ಮೌನ ಅನುಷ್ಠಾನ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸುವರು.

13ರಂದು ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಪೌರ್ಣಿಮೆ ಅಂಗವಾಗಿ ವಾಸ್ತವ್ಯವಿದ್ದು ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡುವರು. 17ರಂದು ಬುಕ್ಕಾಂಬುಧಿಯಲ್ಲಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಲಿಂಗಾಂಗ ಸಾಮರಸ್ಯದ ಪುಣ್ಯ ಸ್ಮರಣೋತ್ಸವ ಸಮಾರಂಭ, 19ರಂದು ಲಕ್ಷ್ಮೇ ಶ್ವರದಲ್ಲಿ ಶ್ರೀ ಪಾರ್ವತಿ ಮಕ್ಕಳ ಬಳಗದ ಅಮೃತ ಮಹೋತ್ಸವ ಸಮಾರಂಭ, 20, 21ರಂದು ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಶತರುದ್ರ ರುದ್ರಾಭಿಷೇಕ, 22ರಂದು ಶಿವಮೊಗ್ಗ ಜಿಲ್ಲೆ ರಿಪ್ಪನ್‌ಪೇಟೆ ಶಿವಮಂದಿರದಲ್ಲಿ ಧರ್ಮ ಸಮಾರಂಭ, 23ರಂದು ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಆದಿಶೇಷ ಹಿರೇಮಠದ ಜಾತ್ರಾ ಮಹೋತ್ಸವ ಧರ್ಮ ಸಮಾರಂಭ, 25ರಂದು ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ಲಿಂ. ಶ್ರೀ ರುದ್ರಮುನಿ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವ ಸಮಾರಂಭ, 27ರಂದು ದೇವದುರ್ಗ ತಾಲೂಕಿನ ನೀಲುಗಲ್ಲ ಡಾ.ಪಂಚಾಕ್ಷರ ಶಿವಾಚಾರ್ಯರ ಜನ್ಮ ಅಮೃತ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸುವರು.

28, 29ರಂದು ಮುಂಡಗೋಡ ತಾಲೂಕಿನ ಕೌತೂರು ಗ್ರಾಮದಲ್ಲಿ ಧರ್ಮ ಸಮಾರಂಭ ಹಾಗೂ ಇಷ್ಟಲಿಂಗ ಮಹಾಪೂಜಾ, 30ರಂದು ಕಲಘಟಗಿ ತಾಲೂಕಿನ ತಾವರೆಗೇರಾದಲ್ಲಿ ಜನ ಜಾಗೃತಿ ಧರ್ಮ ಸಮಾರಂಭ, 31ರ ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಪೇಟೆ ಶ್ರೀ ವೀರಭದ್ರೇಶ್ವರ ನೂತನ ದೇವಾಲಯದ ಉದ್ಘಾಟನಾ ಸಮಾರಂಭ ಹಾಗೂ ಸಂಜೆ 5 ಗಂಟೆಗೆ ಶಿಕಾರಿಪುರ ತಾಲೂಕಿನ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಗುರು ಪರಂಪರಾ ಜಾತ್ರಾ ಮಹೋತ್ಸವ ಹಾಗೂ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

7ಕ್ಕೆ ರಂಭಾಪುರಿ ಶ್ರೀಗಳ ಜನ್ಮದಿನ

ತೆಲಂಗಾಣ ರಾಜ್ಯದ ಯಾದಾದ್ರಿ ಭುವನಗಿರಿ ಜಿಲ್ಲೆಯ ಅಲೇರುಮಂಡಲ ಕೊಲನುಪಾಕ ಶ್ರೀ ಚಂಡಿಕಾಂಬಾ ಸಮೇತ ಸ್ವಯಂಭೂ ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜ.7ರಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ 69ನೇ ಜನ್ಮ ದಿನೋತ್ಸವ ಹಾಗೂ ವೀರಶೈವ ಸಂಸ್ಕೃತಿ ಸಂವರ್ಧನಾ ಸಮಾರಂಭ ನಡೆಯಲಿದೆ.

ಜ.3ರಿಂದ 7ರವರೆಗೆ ಪ್ರತಿ ದಿನ ಪ್ರಾತಃಕಾಲ ಶ್ರೀ ಜಗದ್ಗುರು ರೇಣುಕಾಚಾರ್ಯರು ಅವತರಿಸಿದ ಶ್ರೀ ಸ್ವಯಂಭು ಸೋಮೇಶ್ವರ ಮಹಾಲಿಂಗಕ್ಕೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ, ಸಹಸ್ರ ಪುಷ್ಪಾರ್ಚನೆ ಹಾಗೂ ಶ್ರೀ ಚಂಡಿಕಾಂಬಾ ದೇವಿಗೆ ಕುಂಕುಮಾರ್ಚನೆ ಹಾಗೂ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ.

ಐದೂ ದಿನಗಳ ಸಮಾರಂಭಗಳಲ್ಲಿ ಕರ್ನಾಟಕ ಮತ್ತು ತೆಲಂಗಾಣ ರಾಜ್ಯದ ಸಚಿವರು ಗಣ್ಯರು, ವಿವಿಧ ಮಠಾಧೀಶರು ಹಾಗೂ ಶ್ರೀ ಕೊಲ್ಲಿಪಾಕಿ ಸೋಮೇಶ್ವರ ಜಗದ್ಗುರು ರೇಣುಕಾಚಾರ್ಯ ಡೆವೆಲಪಮೆಂಟ್ ಮತ್ತು ಚಾರಿಟೇಬಲ್ ಟ್ರಸ್ಟಿನ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

Share this article