ಬಾಳೆಹೊನ್ನೂರು, ಜೀವನೋಪಾಯಕ್ಕಾಗಿ ಬಡವರು ಮಾಡಿರುವ ಒತ್ತುವರಿ ಭೂಮಿ ತೆರವುಗೊಳಿಸುತ್ತಿರುವ ಅರಣ್ಯ ಇಲಾಖೆ ಕ್ರಮ ಸರಿಯಾಗಿಲ್ಲ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಜೀವನೋಪಾಯಕ್ಕಾಗಿ ಬಡವರು ಮಾಡಿರುವ ಒತ್ತುವರಿ ಭೂಮಿ ತೆರವುಗೊಳಿಸುತ್ತಿರುವ ಅರಣ್ಯ ಇಲಾಖೆ ಕ್ರಮ ಸರಿಯಾಗಿಲ್ಲ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಒತ್ತುವರಿ ಸಮಸ್ಯೆ ಕುರಿತು ರಂಭಾಪುರಿ ಪೀಠದ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ವಿಚಾರದಲ್ಲಿ ಯಾರದೂ ವಿರೋಧವಿಲ್ಲ. ಆದರೆ ಒತ್ತುವರಿ ತೆರವು ನೆಪದಲ್ಲಿ ಬಡವರ ಭೂಮಿ ತೆರವುಗೊಳಿಸುತ್ತಿರುವುದು ಒಳ್ಳೆಯ ಬೆಳವಣಿಗಯಲ್ಲ ಎಂದರು.ಮಲೆನಾಡಿನಲ್ಲಿ ಸಣ್ಣ ಸಣ್ಣ ಬಡ ಕುಟುಂಬಗಳು ಬದುಕುತ್ತಿವೆ. 1-2 ಎಕರೆ ಭೂಮಿ ಸಾಗುವಳಿ ಮಾಡಿ ಬದುಕು ಕಟ್ಟಿಕೊಂಡವರುಂಟು. ಅವರಿಗೆ ಯಾವುದೇ ತಿಳುವಳಿಕೆ ನೀಡದೆ ಕಾಫಿ ಗಿಡಗಳನ್ನು ಅರಣ್ಯ ಇಲಾಖೆ ಕತ್ತರಿಸಿ ಹಾಕುತ್ತಿರುವುದು ನೋವಿನ ಸಂಗತಿ. ಇದರಿಂದ ಸಹಸ್ರಾರು ಬಡ ಕುಟುಂಬಗಳು ಬೀದಿಗೆ ಬರಲಿವೆ. ಸರ್ಕಾರ ಎಚ್ಚತ್ತುಕೊಂಡು ಬಡವರ ಭೂಮಿ ತೆರವುಗೊಳಿಸುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು. ಬಡವರು ಒತ್ತುವರಿ ಮಾಡಿದ ಭೂಮಿ ಅರಣ್ಯ ವ್ಯಾಪ್ತಿಗೆ ಬರುವುದಾದರೆ ಅದನ್ನು ಅರಣ್ಯ ಹಕ್ಕು ಕಾಯ್ದೆ ಅಡಿ ಒತ್ತುವರಿ ಮಾಡಿರುವ ರೈತರಿಗೆ ಸಕ್ರಮ ಮಾಡಿಕೊಡಲಿ. ಸಾವಿರಾರು ಎಕರೆ ಒತ್ತುವರಿ ಮಾಡಿರುವ ಭೂ ಮಾಲೀಕರು, ಕಾರ್ಪೋರೇಟ್ ಕಂಪನಿಗಳು ಮತ್ತು ಗಣಿಗಾರಿಕೆ ಮಾಡುತ್ತಿರುವವರ ಬಗೆಗೆ ಯಾವುದೇ ಕ್ರಮ ಕೈಗೊಳ್ಳದೆ ಕೇವಲ ಬಡವರು ಒತ್ತುವರಿ ಮಾಡಿರುವ ಭೂಮಿ ಮೇಲೆ ಇಂಥ ಕಠಿಣ ಕ್ರಮ ಒಳ್ಳೆಯದಲ್ಲ. ಅರಣ್ಯ ಮತ್ತು ಕಂದಾಯ ಇಲಾಖೆಯವರು ವಿಷಯವನ್ನು ಸರಿಯಾಗಿ ಪರಾಂಬರಿಸಿ ಬಡವರ ಒತ್ತುವರಿ ಕೈ ಬಿಡಬೇಕೆಂದು ಆಗ್ರಹಿಸಿದ್ದಾರೆ. ಸರ್ಕಾರ ಹಠಮಾರಿತನ ಮುಂದುವರಿಸಿದರೆ ಮಲೆನಾಡಿನಲ್ಲಿ ಉಗ್ರ ಹೋರಾಟ ನಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಸರ್ಕಾರ ಉದಾರ ನೀತಿಯನ್ನು ತಾಳಿ ಬಡವರ ಒತ್ತುವರಿ ಭೂಮಿ ತೆರವುಗೊಳಿಸುವುದನ್ನು ಸ್ಥಗಿತಗೊಳಿಸಬೇಕೆಂದು ಶ್ರೀ ರಂಭಾಪುರಿ ಜಗದ್ಗುರು ಮತ್ತೊಮ್ಮೆ ಸರ್ಕಾರಕ್ಕೆ ಎಚ್ಚರಿಸಿದರು.೧೫ಬಿಹೆಚ್‌ಆರ್ ೫: ರಂಭಾಪುರಿ ಶ್ರೀ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.