- ಪಾದಯಾತ್ರೆ ಕೈಗೊಂಡ 8 ಸ್ವಾಮೀಜಿಗಳನ್ನು ಸ್ವಾಗತಿಸಿದ ಭಕ್ತರು
ಶ್ರೀ ಜಗದ್ಗುರು ರಂಭಾಪುರಿ ವೀರ ಸಿಂಹಾಸನ ಮಹಾಸಂಸ್ಥಾನ ಪೀಠ ಪವಿತ್ರ ಪರಂಪರೆಯಲ್ಲಿ ಶ್ರೀ ರಂಭಾಪುರಿ ಶಿವಾನಂದ ಜಗದ್ಗುರು 118 ನೇ ಪೀಠಾಧೀಶರಾಗಿ ವೀರಶೈವ ಧರ್ಮ ಸಂಸ್ಕೃತಿಗೆ ಅಮೂಲ್ಯ ಕೊಡುಗೆ ಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಶಿಕಾರಿಪುರ ತಾಲೂಕಿನ ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿ ತಿಳಿಸಿದರು.
ಮಂಗಳವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದವರೆಗೆ ಕೈಗೊಂಡ 171 ಕಿ.ಮೀ. ಪಾದಯಾತ್ರೆ ಅಂಗವಾಗಿ ಎನ್.ಆರ್.ಪುರಕ್ಕೆ ತಲುಪಿದ ಸಂದರ್ಭದಲ್ಲಿ ಶ್ರೀರಾಮ ದೇವಸ್ಥಾನದಲ್ಲಿ ಪೂಜಾ ಪ್ರಸಾದ ವಿಶ್ರಾಂತಿಗೆ ಆಗಮಿಸಿದ ಸಂದರ್ಭ ದಲ್ಲಿ ಭಕ್ತರೊಂದಿಗೆ ಮಾತನಾಡಿ, ಮಾನಸಿಕ ನೆಮ್ಮದಿಗಳ ಪರಿಕಲ್ಪವೇ ಮಠ ಮಂದಿರ. ಮಾನಸಿಕ ನೆಮ್ಮದಿ ಬೇಕೆಂದರೆ ಮಠ, ಮಂದಿರಗಳಿಗೆ ಹೋಗಬೇಕು. ಧರ್ಮೋಪದೇಶ ಕೇಳಬೇಕು. ಗುರುಗಳ ಆಶಿರ್ವಾದ ಪಡೆಯಬೇಕು. ಗುರುಬಲ ಪ್ರಾಪ್ತಿಗೆ ಮನೋವಾಂಚಿತ ಫಲ ಸಿದ್ಧಿಗೆ171 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದೇವೆ. ಬಾಳೆಹೊನ್ನೂರಿನ ರಂಭಾಪುರಿ ಪೀಠದ 118 ನೇ ಜಗದ್ಗುರು ನ.27 ರಂದು 100 ವರ್ಷ ಸಲ್ಲುತ್ತದೆ. ಅವರ ಪೀಠಾರೋಹಣದ ಶತಮಾ ನೋತ್ಸವ ಅಂಗವಾಗಿ ಬಹಳ ವರ್ಷಗಳ ನಂತರ ಪಂಚ ಪೀಠಾಧಿಪತಿಗಳ ಸಮ್ಮಿಲನವಾಗಲಿದೆ. ಪಂಚ ಪೀಠಾಧೀಶ್ವರರು ಒಗ್ಗೂಡಿ ಶತಮನೋತ್ಸವ ಆಚರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಇಂತಹ ಶತಮಾನೋತ್ಸವದಲ್ಲಿ ಪಾಲ್ಗೊಳ್ಳಲು, ದರ್ಶನಾಶೀರ್ವಾದ ಪಡೆಯಲು ಹಾಗೂ ಧರ್ಮ ಜಾಗೃತಿಗೆ ಶಿಕಾರಿಪುರ ತಾಲೂಕಿನಿಂದ ಪಾದಯಾತ್ರೆ ಕೈಗೊಂಡಿದ್ದೇವೆ. ಪಾದಯಾತ್ರೆ, ಧರ್ಮ ಜಾಗೃತಿ ಕಾರ್ಯ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿದೆ ಜನತೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸಂಸ್ಕಾರವಿಲ್ಲದ ಜೀವನದಿಂದ ಏನೂ ಪ್ರಯೋಜವಿಲ್ಲ. ಪ್ರತಿಯೊಬ್ಬರೂ ಧರ್ಮ, ಸಂಸ್ಕಾರವಂತರಾಗಿ ಬಾಳುವ ಅವಶ್ಯಕತೆ ಇದೆ. ವೀರಶೈವ ಧರ್ಮ ಸಂಸ್ಥಾಪಕ ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊಲ್ಲಿಪಾಕಿ ಸುಕ್ಷೇತ್ರದಲ್ಲಿ 18 ಮತದ ಜನತೆಗೆ 18 ಮಠಗಳನ್ನು ಸಂಸ್ಥಾಪಿಸಿದ್ದಾರೆ. ವೀರಶೈವ ಧರ್ಮ ಸರ್ವ ಜನಾಂಗದ ಜನತೆ ಅಭ್ಯುದಯ ಬಯಸುತ್ತಾ ಬಂದಿದೆ. ಬುಧವಾರದಂದು ಬಾಳೆಹೊನ್ನೂರು ಸಮೀಪದ ಮುದುಗುಣಿ ಗ್ರಾಮದ ದೇವಸ್ಥಾನದಲ್ಲಿ ತಂಗಲಿದ್ದು ಅಲ್ಲಿಂದ ಬಾಳೆ ಹೊನ್ನೂರಿಗೆ 9 ಕಿ.ಮೀ ಬಾಕಿ ಇರುತ್ತದೆ. ಈ ಎಲ್ಲಾ ಮಠಗಳ ಸುಮಾರು 500 ಕ್ಕೂ ಅಧಿಕ ಭಕ್ತಾಧಿಗಳು ಬಂದು ಜೊತೆಗೂಡಲಿದ್ದಾರೆ. ಗುರುವಾರ ಬೆಳಿಗ್ಗೆ ಎಲ್ಲರೂ ಸೇರಿ 9 ಕಿ. ಮೀ ದೂರದ ಶ್ರೀಪೀಠಕ್ಕೆ ಪಾದಯಾತ್ರೆ ಮಾಡಲಿದ್ದೇವೆ. ಅಲ್ಲಿ ಪಂಚಪೀಠಾಧೀಶ್ವರರ ಕೃಪಾಶೀರ್ವಾದ ಪಡೆದು ಪಾದಯಾತ್ರೆ ಮುಕ್ತಾಯವಾಗಲಿದೆ. ಶಿಕಾರಿಪುರ ತಾಲೂಕಿನಿಂದ ಸಂಸದ ಬಿ.ವೈ.ರಾಘವೇಂದ್ರ ನಮ್ಮೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಬೀಳ್ಕೊಟ್ಟರು ಎಂದರು. ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮಿ ಮಾತನಾಡಿ ಈ ಪಾದಯಾತ್ರೆ ಮೂಲಕ ಲಿಂ. ಶ್ರೀ ರಂಭಾ ಪುರಿ ಶಿವಾನಂದ ಜಗದ್ಗುರುಗಳ ಪೀಠಾರೋಹಣದ ಶತಮಾನೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಪಂಚಪೀಠಗಳ ಇತಿಹಾಸದಲ್ಲಿ ಯಾವುದೇ ಜಗದ್ಗುರುಗಳ ಪೀಠಾರೋಹಣ ಶತಮಾನೋತ್ಸವ ಜರುಗಿದ ದಾಖಲೆಗಳಿಲ್ಲ. ಗದಗದ ಕದಾಂಪುರ ವೀರೇಶ್ವರ ಸ್ವಾಮಿ ಮಾತನಾಡಿ, ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬ ಇತ್ತೀಚಿನ ಕೂಗು ತಮಗೆ ನೋವನ್ನುಂಟು ಮಾಡಿದೆ. ಸಮಾಜ ಒಂದಾಗಿ ಹೆಜ್ಜೆ ಹಾಕಬೇಕಾದ ಅವಶ್ಯಕತೆ ಇದೆ ಎಂದರು.ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ನಾಗವಂದದ ಶಿವಯೋಗಿ ಶಿವಾನಂದ ಶಿವಾಚಾರ್ಯರು, ಗದಗದ ಗುಳಗುಳಿ ಋಷಿಕುಮಾರ ಸ್ವಾಮಿಗಳು, ಹೊನ್ನಾಳಿ ತಾಲ್ಲೂಕಿನ ಗೋವಿನಕೋವಿ ಸದ್ಗುರು ಶಿವಯೋಗಿ ಮಹಾಲಿಂಗ ಹಾಲ ಸ್ವಾಮಿಗಳು, ಭದ್ರಾವತಿ ತಾಲೂಕು ಅರಕೆರೆ ವಿರಕ್ತಮಠದ ಸ್ವಾಮಿಗಳು ಹಾಗೂ 80 ಕ್ಕೂ ಅಧಿಕ ಭಕ್ತಾಧಿಗಳಿದ್ದರು. ಪಾದಯಾತ್ರೆ ಮೂಲಕ ತಾಲೂಕಿಗೆ ಆಗಮಿಸಿದ ರಂಭಾಪುರಿ ಪೀಠದ ವಿವಿಧ ಶಾಖಾ ಮಠಗಳ ಸ್ವಾಮೀಜಿಗಳು ಹಾಗೂ ಪಾದಯಾತ್ರಿಕರನ್ನು ವೀರಶೈವ ಮುಖಂಡರಾದ ವೈ.ಎಸ್.ರವಿ, ಎಚ್.ಎನ್.ರವಿಶಂಕರ್,ಎನ್.ಎಂ.ಕಾರ್ತಿಕ್, ಎಂ.ಸಿ.ಗುರುಶಾಂತಪ್ಪ ಮತ್ತಿತರರು ಆತ್ಮೀಯವಾಗಿ ಬರ ಮಾಡಿಕೊಂಡರು.