ರಮೇಶ್‌ ಬಂಡಿಸಿದ್ದೇಗೌಡ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು

KannadaprabhaNewsNetwork |  
Published : Jun 25, 2025, 11:47 PM IST
25ಕೆಡಿವಿಜಿ1, 2-ಶ್ರೀರಂಗಪಟ್ಟಣದ ಶಾಸಕ ರಮೇಶ ಬಂಡಿಸಿದ್ದೇಗೌಡರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ದಾವಣಗೆರೆಯಲ್ಲಿ ಬುಧವಾರ ಎಸ್‌ಡಿಪಿಐ ಪ್ರತಿಭಟಿಸಿತು. | Kannada Prabha

ಸಾರಾಂಶ

ಮುಸ್ಲಿಮರಿಗೆ ಸರ್ಕಾರಿ ಜಮೀನು ಮಂಜೂರು ಮಾಡಿದರೆ ಅಧಿಕಾರಿಗಳನ್ನು ನೇಣಿಗೆ ಹಾಕುತ್ತೇವೆಂಬ ವಿವಾದಿತ ಹೇಳಿಕೆ ನೀಡಿದ ಶ್ರೀರಂಗಪಟ್ಟಣ ಕ್ಷೇತ್ರ ಶಾಸಕರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ಒತ್ತಾಯಿಸಿ ಎಸ್‌ಡಿಪಿಐ ಜಿಲ್ಲಾ ಘಟಕದಿಂದ ನಗರದಲ್ಲಿ ಬುಧವಾರ ಪ್ರತಿಭಟಿಸಲಾಯಿತು.

- ಎಸ್‌ಡಿಪಿಐ ಪ್ರತಿಭಟನೆಯಲ್ಲಿ ರಜ್ವಿ ರಿಯಾಜ್ ಅಹಮ್ಮದ್‌ ಒತ್ತಾಯ

- - -

- ಮುಸ್ಲಿಂರಿಗೆ ಭೂಮಿ ನೀಡುವ ಅಧಿಕಾರಿಗಳಿಗೆ ನೇಣಿಗೇರಿಸುವ ಹೇಳಿಕೆಗೆ ಆಕ್ರೋಶ- ಸಂಘ ಪರಿವಾರಕ್ಕೂ ಪೈಪೋಟಿ ನೀಡುವಂತಿರುವ ಶಾಸಕರ ಮನಸ್ಥಿತಿ: ಆರೋಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮುಸ್ಲಿಮರಿಗೆ ಸರ್ಕಾರಿ ಜಮೀನು ಮಂಜೂರು ಮಾಡಿದರೆ ಅಧಿಕಾರಿಗಳನ್ನು ನೇಣಿಗೆ ಹಾಕುತ್ತೇವೆಂಬ ವಿವಾದಿತ ಹೇಳಿಕೆ ನೀಡಿದ ಶ್ರೀರಂಗಪಟ್ಟಣ ಕ್ಷೇತ್ರ ಶಾಸಕರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ಒತ್ತಾಯಿಸಿ ಎಸ್‌ಡಿಪಿಐ ಜಿಲ್ಲಾ ಘಟಕದಿಂದ ನಗರದಲ್ಲಿ ಬುಧವಾರ ಪ್ರತಿಭಟಿಸಲಾಯಿತು.

ನಗರದ ಎಸ್‌ಡಿಪಿಐ ಕಚೇರಿಯಿಂದ ಅಹಮ್ಮದ್ ನಗರದ ಮದೀನಾ ಆಟೋ ನಿಲ್ದಾಣದವರೆಗೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯುದ್ದಕ್ಕೂ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ವಿರುದ್ಧ ಘೋಷಣೆ ಕೂಗಲಾಯಿತು.

ಜಿಲ್ಲಾ ಉಪಾಧ್ಯಕ್ಷ ರಜ್ವಿ ರಿಯಾಜ್ ಅಹಮ್ಮದ್‌ ಮಾತನಾಡಿ, ಶ್ರೀರಂಗಪಟ್ಟಣ ಕ್ಷೇತ್ರ ಕಾಂಗ್ರೆಸ್ ಶಾಸಕ ರಮೇಶ ಬಂಡಿಸಿದ್ದೇಗೌಡ ಬಗರ್‌ಹುಕುಂ ಮುಸ್ಲಿಂ ರೈತರಿಗೆ ಸರ್ಕಾರಿ ಜಮೀನು ಮಂಜೂರು ಮಾಡಿದರೆ ಅಧಿಕಾರಿಗಳನ್ನು ನೇಣಿಗೆ ಹಾಕುತ್ತೇವೆಂದು ಬೆದರಿಕೆ ಹಾಕಿ, ವಿವಾದಾತ್ಮಕ ಹೇಳಿಕೆ ನೀಡಿರುವುದು ಖಂಡನೀಯ ಎಂದರು.

ಈ ಹಿಂದೆ ಭಟ್ಕಳದ ಕಾಂಗ್ರೆಸ್ ಶಾಸಕ ಮಂಕಾಳು ವೈದ್ಯ ಗೋವುಗಳ ಸಾಗಾಟ ಮಾಡುವ ಮುಸ್ಲಿಮರಿಗೆ ಸರ್ಕಲ್‌ನಲ್ಲಿ ನಿಲ್ಲಿಸಿ, ಗುಂಡು ಹೊಡೆಯಬೇಕು ಎಂದು ಹೇಳಿ, ತಮ್ಮೊಳಗಿನ ಮುಸ್ಲಿಂ ದ್ವೇಷ ಹೊರಹಾಕಿದ್ದರು. ಮುಸ್ಲಿಮರ ಮತ ಪಡೆದು, ಆಯ್ಕೆಯಾದ ರಾಜ್ಯದ ಕಾಂಗ್ರೆಸ್ ನಾಯಕರ ಮುಸ್ಲಿಂ ದ್ವೇಷವು ಸಂಘ ಪರಿವಾರದ ನಾಯಕರ ಮುಸ್ಲಿಂ ದ್ವೇಷವನ್ನು ಓವರ್ ಟೇಕ್ ಮಾಡಲು ಪೈಪೋಟಿ ಮಾಡುವಂತಿದೆ. ಶಾಸಕ ರಮೇಶ ಬಂಡಿಸಿದ್ದೇಗೌಡ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಎ.ಆರ್‌. ತಾಹೀರ್ ಮಾತನಾಡಿ, ಕೆಲ ಕಾಂಗ್ರೆಸ್ ಶಾಸಕರ ಮನಸ್ಥಿತಿ ಇಂದು ನಿಜಕ್ಕೂ ಎಚ್ಚರಿಕೆ ಮತ್ತು ಚಿಂತಿಸಬೇಕಾದ ವಿಷಯವಾಗಿದೆ. ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ ಬಂಡಿಸಿದ್ದೇಗೌಡ ತಮ್ಮ ಕ್ಷೇತ್ರದ ಮುಸ್ಲಿಂ ರೈತರು ಬಗರ್‌ಹುಕುಂ ಭೂಮಿಗಾಗಿ ಸಲ್ಲಿಸಿರುವ ಅರ್ಜಿಗೆ ಸ್ಪಂದಿಸಿದ ಅಧಿಕಾರಿಗಳಿಗೆ ಬೆದರಿಕೆಯ ಮಾತುಗಳಾಡಿರುವುದು ಖಂಡನೀಯ. ಇದು ಸಂವಿಧಾನ ವಿರುದ್ಧದ ಅಭಿಪ್ರಾಯ ಎಂದು ಆರೋಪಿಸಿದರು.

ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಸ್ ಪೀರ್‌, ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಜಾಜ್ ಅಹಮ್ಮದ್, ಸಹ ಕಾರ್ಯದರ್ಶಿ ಮೊಹಮ್ಮದ್ ಕುಬೈಬ್‌, ಸಮಿತಿ ಸದಸ್ಯರಾದ ಆರೀಫ್‌, ಆದಿಲ್, ಅಮೀರ್‌, ವಿವಿಧ ಘಟಕಗಳ ಪದಾಧಿಕಾರಿಗಳು, ಸದಸ್ಯರು, ಬೆಂಬಲಿಗರು, ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.

- - - -25ಕೆಡಿವಿಜಿ1, 2:

ಶ್ರೀರಂಗಪಟ್ಟಣ ಶಾಸಕರ ವಜಾಕ್ಕೆ ಒತ್ತಾಯಿಸಿ ದಾವಣಗೆರೆಯಲ್ಲಿ ಬುಧವಾರ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌