ದೊಡ್ಡಬಳ್ಳಾಪುರ: ದೇಶದೆಲ್ಲೆಡೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮ ಮನೆಮಾಡಿದೆ. ಇದರ ಭಾಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ಬೃಹತ್ ರಾಮ ಮಂದಿರ ಮಾದರಿ ಸೆಟ್ ಗಮನ ಸೆಳೆಯುತ್ತಿದೆ. ಸುಮಾರು 50 ಅಡಿ ಎತ್ತರದ ಶ್ರೀರಾಮನ ಕಟೌಟ್ ಜನಾಕರ್ಷಣೆಯ ಕೇಂದ್ರವಾಗಿದ್ದು, ಬೀದಿ ಬೀದಿಗಳಲ್ಲಿ, ಮನೆಗಳಲ್ಲೂ ಸಂಭ್ರಮ ಮನೆ ಮಾಡಿದೆ.
ಸಿಂಗಾರಗೊಂಡ ರಸ್ತೆಗಳು:
ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರದಲ್ಲಿ ವಿಶೇಷವಾಗಿ ಸಂಭ್ರಮಿಸಲಾಗುತ್ತಿದ್ದು, ರಸ್ತೆಗಳನ್ನು ವಿದ್ಯುತ್ ದೀಪಗಳು, ಭಗವಾಧ್ವಜಗಳು, ಶ್ರೀರಾಮ-ಹನುಮ ಬಾವುಟಗಳಿಂದ ಸಿಂಗರಿಸಲಾಗಿದೆ. ತಳಿರು-ತೋರಣ ಚಪ್ಪರಗಳನ್ನು ಹಾಕಿ ಶ್ರೀರಾಮ ಪ್ರಭುವಿನ ಭಾವಚಿತ್ರಗಳನ್ನು ಪ್ರತಿಷ್ಠಾಪಿಸಿ ಪೂಜಿಸಲು ಸಿದ್ದತೆಗಳು ನಡೆದಿದೆ. ತಾಲೂಕು ಕಚೇರಿ ವೃತ್ತದಿಂದ ಬಸವ ಭವನ ವೃತ್ತದವರೆಗೆ ವಿಶೇಷವಾಗಿ ಸಿಂಗರಿಸಲಾಗಿದೆ. ಭಗತ್‌ಸಿಂಗ್ ಕ್ರೀಡಾಂಗಣ ಸುತ್ತಲೂ ಹಬ್ಬದ ವಾತಾವರಣ ಸೃಷ್ಠಿಯಾಗಿದೆ.ದೊಡ್ಡಪರದೆಯಲ್ಲಿ ನೇರಪ್ರಸಾರ:
7 ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ:
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಶ್ರೀರಾಮ ಉತ್ಸವ ಆಚರಣಾ ಸಮಿತಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ದೊಡ್ಡಬಳ್ಳಾಪುರ ನಗರದ ವಿವಿಧ ಭಾಗಗಳ ಐತಿಹಾಸಿಕ ರಾಮ ದೇವಾಲಯಗಳಿಂದ 7 ಉತ್ಸವ ಮೂರ್ತಿಗಳನ್ನು ಕರೆತಂದು ಪ್ರತಿಷ್ಠಾಪಿಸಲಾಗಿದೆ. ಶ್ರೀರಾಮ ಸೀತಾ ಲಕ್ಷ್ಮಣ ಹಾಗೂ ಹನುಮ ವಿಗ್ರಹಗಳನ್ನು ಒಳಗೊಂಡ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ನಡೆಯುತ್ತಿದೆ.ಮಕ್ಕಳ ವೇಷಭೂಷಣ ಸ್ಪರ್ಧೆ;
ಭಾನುವಾರ ಸಂಜೆ ಆಯೋಜಿಸಿದ್ದ ಮಕ್ಕಳ ವೇಷಭೂಷಣ ಸ್ಪರ್ಧೆಯಲ್ಲಿ ಹಲವಾರು ಮಕ್ಕಳು ಶ್ರೀರಾಮ ಲಕ್ಷ್ಮಣ, ಸೀತಾ ಮಾತೆ, ಆಂಜನೇಯನ ವೇಷಭೂಷಣಗಳನ್ನು ಧರಿಸಿ ಗಮನ ಸೆಳೆದರು. ನೆರೆದಿದ್ದ ಸಹಸ್ರಾರು ಜನರು ಮಕ್ಕಳ ವೇಷಭೂಷಣಗಳನ್ನು ಕಣ್ತುಂಬಿಕೊಂಡರು.ಕರಸೇವಕರಿಗೆ ಸನ್ಮಾನ:
1991ರಲ್ಲಿ ಅಯೋಧ್ಯೆಗೆ ತೆರಳಿ ಕರಸೇವೆಯಲ್ಲಿ ಪಾಲ್ಗೊಂಡಿದ್ದ ದೊಡ್ಡಬಳ್ಳಾಪುರದ ಹತ್ತಾರು ಕರಸೇವಕರಿಗೆ ಇದೇ ವೇಳೆ ಸನ್ಮಾನ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ಇಲ್ಲಿನ ಹಿಂದುಪರ ಸಂಘಟನೆಗಳ ಹಲವು ಕರಸೇವಕರು ಅಯೋಧ್ಯಾ ಕರಸೇವೆಯಲ್ಲಿ ಪಾಲ್ಗೊಂಡದ್ದು ಮಹತ್ವದ ಘಟನಾವಳಿಯಾಗಿದೆ.ಬಿಗಿ ಬಂದೋಬಸ್ತ್:
ಶ್ರೀರಾಮ ಉತ್ಸವ ಸಮಿತಿ ಆಯೋಜಿಸಿರುವ ಕಾರ್ಯಕ್ರಮ ಹಾಗೂ ನಗರದ ವಿವಿದೆಡೆ ನಡೆಯುತ್ತಿರುವ ವಿಶೇಷ ಕಾರ್ಯಕ್ರಮಗಳ ಹಿನ್ನಲೆಯಲ್ಲಿ ಪೊಲೀಸರು ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕಣ್ಗಾವಲು, ಪೊಲೀಸ್ ಪಡೆಗಳ ನಿಯೋಜನೆ ನಡೆದಿದೆ.ಬೆಂ.ಗ್ರಾ. ಜಿಲ್ಲಾದ್ಯಂತ ಸಂಭ್ರಮ:
ಅಯೋಧ್ಯಾ ರಾಮಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಇಡೀ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿದೆ. ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ತಾಲೂಕುಗಳ ವಿವಿಧೆಡೆ ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಎಲ್ಲೆಡೆ ತಾಲೂಕು ಕೇಂದ್ರಗಳಲ್ಲಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉಳಿದಂತೆ ಮುಜರಾಯಿ ಇಲಾಖೆ ವ್ಯಾಪ್ತಿಯ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ, ದೇವಾಲಯಗಳಲ್ಲಿ ಸಂಭ್ರಮ, ಮನೆಮನೆಗಳಲ್ಲಿ ದೀಪಾರತಿ ಉತ್ಸವಗಳನ್ನು ಹಮ್ಮಿಕೊಳ್ಳಲು ಸಿದ್ದತೆಗಳು ನಡೆದಿವೆ.ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ, ವೆಂಕಟರಮಣಸ್ವಾಮಿ ದೇವಾಲಯ, ತೂಬಗೆರೆ ವೆಂಕಟರಮಣ ಮಂದಿರ, ಶಿವಗಂಗೆ, ಹುಲುಕುಡಿ ಸೇರಿದಂತೆ ಪ್ರವಾಸಿ ತಾಣಗಳಲ್ಲೂ ವಿಶೇಷ ಪೂಜಾ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.ಕೋಟ್...................
ರಾಮಮಂದಿರ ಉದ್ಘಾಟನೆ ವೇಳೆ ನಾವು ಸಾಕ್ಷಿಯಾಗಿದ್ದೇವೆ ಎಂಬುದೇ ಪುಣ್ಯ. ದೊಡ್ಡಬಳ್ಳಾಪುರದಲ್ಲಿ ರಾಮ ಮಂದಿರ ಸೆಟ್ ನಿರ್ಮಿಸಿ ಧಾರ್ಮಿಕ ಪರಂಪರೆಯನ್ನು ಸೃಷ್ಟಿಸಲಾಗಿದೆ. ಪ್ರತಿವರ್ಷ ಜ.22ರಂದು ಶ್ರೀರಾಮ ಉತ್ಸವ ಆಯೋಜನೆ ಬಗ್ಗೆ ಚಿಂತನೆ ನಡೆಸಲಾಗಿದೆ. ಅಯೋಧ್ಯಾ ಸಂಭ್ರಮ ದೊಡ್ಡಬಳ್ಳಾಪುರದಲ್ಲಿ ಮನೆಮಾಡಿದೆ.- ಧೀರಜ್ ಮುನಿರಾಜ್, ಶಾಸಕರು, ದೊಡ್ಡಬಳ್ಳಾಪುರ
21ಕೆಡಿಬಿಪಿ1-ದೊಡ್ಡಬಳ್ಳಾಪುರದಲ್ಲಿ ಶ್ರೀರಾಮ ಉತ್ಸವ ಸಮಿತಿ ವತಿಯಿಂದ ಬೃಹತ್ ಅಯೋಧ್ಯಾ ರಾಮಮಂದಿರ ಸೆಟ್ ನಿರ್ಮಿಸಲಾಗಿದ್ದು, 50 ಅಡಿ ಎತ್ತರದ ಶ್ರೀರಾಮನ ಕಟೌಟ್ ಗಮನ ಸೆಳೆಯುತ್ತಿದೆ.21ಕೆಡಿಬಿಪಿ2- ರಾಮ-ಸೀತೆ-ಹನುಮನ ವೇಷದಲ್ಲಿ ಗಮನ ಸೆಳೆದ ಮಕ್ಕಳು.