ಕೌನ್ ಬನೇಗಾ ಕರೋಡ್ ಪತಿಯಲ್ಲಿ ರಮ್ಜಾನ್ ಲಾಖ್‌ಪತಿ

KannadaprabhaNewsNetwork |  
Published : Jan 13, 2025, 12:45 AM IST
ಕೌನ್ ಬನೇಗಾ ಕರೋಡ್ ಪತಿಯಲ್ಲಿ  50 ಲಕ್ಷಗಳ ನಗದು ಪುರಸ್ಕಾರ ಪಡೆದ ಮಹಾಲಿಂಗಪುರದ ಯುವಕ ರಮ್ಜಾನ್. | Kannada Prabha

ಸಾರಾಂಶ

ಈ ನನ್ನ ಸಾಧನೆಗೆ ನಿರೂಪಕರಾದ ಹಿಂದಿ ಚಿತ್ರ ರಂಗದ ಹಿರಿಯ ನಟ ಅಮಿತಾಭ್ ಸರ್, ಕೆಬಿಸಿ ತಂಡ ಮತ್ತು ಪರೋಕ್ಷ, ಅಪರೋಕ್ಷ ಸಹಾಯ ಸಹಕಾರ ನೀಡಿದ ಮಹನೀಯರಿಗೆ ರಮ್ಜಾನ್ ಮಲೀಕಸಾಬ ಪೀರಜಾದೆ ಕೃತಜ್ಞತೆ ಅರ್ಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಲಿವುಡ್ ಖ್ಯಾತ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಸೋನಿ ವಾಹಿನಿ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಯುವಕ ರಮ್ಜಾನ್ ಮಲಿಕಸಾಬ ಪೀರಜಾದೆ ಭಾಗವಹಿಸಿ ₹50 ಲಕ್ಷಗಳ ನಗದು ಪುರಸ್ಕಾರ ಪಡೆದು ಮಹಾಲಿಂಗಪುರ ಪಟ್ಟಣದ ಹೆಸರು ರಾಷ್ಟ್ರಮಟ್ಟದಲ್ಲಿ ಬೆಳಗುವಂತೆ ಮಾಡಿದ್ದಾನೆ.

ಪ್ರಸಿದ್ಧ ಕೆಬಿಸಿ ಕ್ವಿಜ್ ಸ್ಪರ್ಧೆಯಲ್ಲಿ ಕರೋಡ್ ಪತಿ ಪ್ರಶಸ್ತಿ ಪಡೆದು ಮಹಾಲಿಂಗಪುರ ಪಟ್ಟಣದ ಹೆಸರು ನಾಡಿನಾದ್ಯಂತ ಬೆಳಗಲಿ ಎನ್ನುವ ಕಾರಣಕ್ಕೆ ಸತತ ಪ್ರಯತ್ನ ಪಡುತ್ತಾ ಒಂದು, ಎರಡು ಅಲ್ಲ ಮೂರು ಬಾರಿ ಭಾಗವಹಿಸಿ, ಕೊನೆಯದಾಗಿ ಹಿಂದಿ ಚಿತ್ರ ನಟ ಭೀಷ್ಮ ಅಮಿತಾಬ್ ಬಚ್ಚನ್ ಎದುರಿಗೆ ಹಾಟ್ ಶೀಟ್ ಅಲಂಕರಿಸುವ ಸೌಭಾಗ್ಯ ಪಡೆದುಕೊಂಡಿದ್ದಾನೆ.

ಈ ಸಂದರ್ಭದಲ್ಲಿ 14 ಜಟೀಲ ಪ್ರಶ್ನೆಗಳಿಗೆ ಉತ್ತರಿಸಿ 15ನೇ ಪ್ರಶ್ನೆಗೆ ಜಾಣ್ಮೆಯ ಕ್ವಿಟ್ ಪಡೆದು ಅಗ್ರ ಶ್ರೇಯಾಂಕದ ಕೋಟಿ ಅವಾರ್ಡ್‌ ಧಕ್ಕದೆ ಹೋದರೂ ₹50 ಲಕ್ಷ ಮೊತ್ತದ ಚೆಕ್ ತನ್ನದಾಗಿಸಿಕ್ಕೊಂಡಿದ್ದಾನೆ. ಈ ಸಂದರ್ಭದಲ್ಲಿ ಹಿರಿಯ ನಟ ಬಚ್ಚನ್‌ ಅವರು ರಮ್ಜಾನ್‌ಗೆ ಶುಭ ಹಾರೈಸಿ ಕೆಬಿಸಿ ನೀಡಿರುವ ಈ ಹಣ ಸುಭದ್ರ ಬದುಕು ಕಟ್ಟಿಕೊಳ್ಳಲು ವಿನಿಯೋಗಿಸಿ ಎಂದು ಸಲಹೆ ನೀದಿದ್ದಾರೆ.

ಬಡ ಕುಟುಂಬದಲ್ಲಿ ರಮ್ಜಾನ್ ಜನಿಸಿದ್ದು, ತಾಯಿ ಮುನೇರಾ ತಮ್ಮ ಮನೆಯ ಕೆಲಸದಲ್ಲಿ ನಿರತರು. ತಂದೆ ಮಲಿಕ್ ಸಾಬ್ ಗ್ಯಾಸ್ ವೆಲ್ಡರ್, ಬಂದ ಅಲ್ಪ ಸ್ವಲ್ಪ ಆದಾಯದಲ್ಲಿ ಮಕ್ಕಳ ಶಿಕ್ಷಣ ಮತ್ತು ಮನೆ ನಿರ್ವಹಣೆ ನಡೆಯುತ್ತಿದೆ. ರಮ್ಜಾನ್ ಹೋಟೆಲ್ ಒಂದರಲ್ಲಿ 5 ಗಂಟೆಗಳ ಕಾಲ ಮತ್ತು ಟೆನಿಸ್ ಕೋರ್ಟ್‌ ವಾಚಮನ್ ಆಗಿ ಕೆಲಸ ಮಾಡಿ ಬರುವ ಆದಾಯದಲ್ಲಿ ಶಾಲಾ ಮತ್ತು ಸ್ವಂತ ಖರ್ಚು ನಿಭಾಯಿಸಿಕೊಂಡು ಓದು ಮುಂದುವರೆಸಿದ್ದಾನೆ.

ಮಹಾಲಿಂಗಪುರದ ಎಸ್‌ಸಿಪಿ ಸಂಸ್ಥೆಯ ಕೆಎಲ್‌ಇ ಕಾಲೇಜಿನಲ್ಲಿ ಬಿಎ ಪದವಿ ಪೂರೈಸಿ, ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮುಂದುವರಿಸಿದ್ದಾನೆ. ಈ ಸಾಧಕನನ್ನು ಸತ್ಕರಿಸಲು ಮಹಾಲಿಂಗಪುರ ಪಟ್ಟಣ ಕಾತುರದಿಂದ ಕಾಯ್ದಿದೆ. ಈ ಸರಣಿ ಕಾರ್ಯಕ್ರಮ ಜ.13ರಂದು ಸೋಮವಾರ ರಾತ್ರಿ ಸೋನಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ