ಕನ್ನಡಪ್ರಭ ವಾರ್ತೆ ಭದ್ರಾವತಿ
ಕೊನೆಯ ಅಂತಿಮ ಪಂದ್ಯದಲ್ಲಿ ಕಾರ್ತಿಕ್ ಕಾಟೆ ಮಹಾರಾಷ್ಟ್ರದ ಕುಸ್ತಿಪಟು ಫೈಲ್ವಾನ್ ಸುದೇಶ್ ಠಾಕೂರ್ ಅವರನ್ನು ಪರಾಭವಗೊಳಿಸಿ ಮೊದಲ ಬಹುಮಾನ ೧ ಲಕ್ಷ ರು. ನಗದು ಹಾಗು ಬೆಳ್ಳಿಗದೆ ಪಡೆದರು. ನಗರಸಭೆ ಆಡಳಿತ ಈ ಬೆಳ್ಳಿಗದೆ ದಾನಿಯಾಗಿದ್ದು, ಉಳಿದಂತೆ ದಾವಣಗೆರೆ ಕುಸ್ತಿಪಟು ಫೈಲ್ವಾನ್ ಬಸವರಾಜ್ ಪಾಟೀಲ್ ಮಹಾರಾಷ್ಟ್ರದ ಕುಸ್ತಿಪಟು ಫೈಲ್ವಾನ್ ಶೈಲೇಶ್ ಅವರನ್ನು ಪರಾಭವಗೊಳಿಸಿ ಎರಡನೇ ಬಹುಮಾನ ೫೦ ಸಾವಿರ ರು. ನಗದು ಪಡೆದರು.
ಮಹಾರಾಷ್ಟ್ರದ ಕುಸ್ತಿಪಟು ಫೈಲ್ವಾನ್ ಪ್ರದೀಪ್ ಠಾಕೂರ್ ಅವರು ಬೆಳಗಾವಿ ಕುಸ್ತಿಪಟು ಪ್ರಕಾಶ್ ಪಾಟೀಲ್ ಅವರನ್ನು ಪರಾಭವಗೊಳಿಸಿ ೩ನೇ ಬಹುಮಾನ ೪೦ ಸಾವಿರ ರು. ನಗದು ಹಾಗು ಬೆಳ್ಳಿಗದೆ ತಮ್ಮದಾಗಿಸಿಕೊಂಡರು. ನಗರಸಭೆ ಸದಸ್ಯೆ ಶಶಿಕಲಾ ನಾರಾಯಣಪ್ಪ ಈ ಬೆಳ್ಳಿಗದೆ ದಾನಿಗಳಾಗಿದ್ದಾರೆ.ಪಂದ್ಯಾವಳಿಯಲ್ಲಿ ಒಟ್ಟು ೧೮೨ ಕುಸ್ತಿಗಳನ್ನು ಆಡಿಸಲಾಯಿತು. ರಾಜ್ಯದ ಬೆಳಗಾವಿ. ಬಿಜಾಪುರ. ಗದಗ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಹರಿಹರ, ಶಿವಮೊಗ್ಗ, ಬೆಂಗಳೂರು, ಚಿತ್ರದುರ್ಗ ಮತ್ತು ಮಹಾರಾಷ್ಟ್ರದ ಸಾಂಗ್ಲಿ. ಕೊಲ್ಲಾಪುರ ಮತ್ತು ಮಧ್ಯ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಕುಸ್ತಿಪಟುಗಳು ಆಗಮಿಸಿದ್ದರು.
ಕಳೆದ ಮೂರು ದಿನಗಳಿಂದ ನಡೆದ ಕುಸ್ತಿ ಪಂದ್ಯಾವಳಿ ಯಶಸ್ವಿಯಾಗಲು ಕಾರಣಕರ್ತರಾದ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ಸಮಾಜ ಸೇವಕ ಸಿ. ಮಹೇಶ್ ಕುಮಾರ್, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಯುವ ಮುಖಂಡ ಮಂಗೋಟೆ ರುದ್ರೇಶ್, ನಗರಸಭೆ ಸದಸ್ಯರು, ಸಿಬ್ಬಂದಿಗೆ, ವಿವಿಧ ಸಂಘ-ಸಂಸ್ಥೆಗಳಿಗೆ, ರಾಜಕೀಯ ಪಕ್ಷಗಳಿಗೆ ಸರ್ಕಾರದ ವಿವಿಧ ಇಲಾಖೆಗಳಿಗೆ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.