ಶಿವಮೊಗ್ಗದಲ್ಲಿ ಇಂದಿನಿಂದ ರಂಗದಸರಾ

KannadaprabhaNewsNetwork |  
Published : Sep 24, 2025, 01:00 AM IST
ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಲಾವಿದರ ಒಕ್ಕೂಟದ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಮಾತನಾಡಿದರು. | Kannada Prabha

ಸಾರಾಂಶ

ಮಹಾನಗರ ಪಾಲಿಕೆಯ ಆಶ್ರಯದಲ್ಲಿ ನಡೆಯುತ್ತಿರುವ ರಂಗದಸರಾ ಕಾರ್ಯಕ್ರಮವನ್ನು ಅತ್ಯಂತ ವಿಭಿನ್ನವಾಗಿ ಆಚರಿಸಲಾಗುತ್ತಿದ್ದು, ಈ ರಂಗದಸರಾ ಕಾರ್ಯಕ್ರಮದಲ್ಲಿ ಒಟ್ಟು 30 ನಾಟಕ ತಂಡಗಳು 43 ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದು ಕಲಾವಿದರ ಒಕ್ಕೂಟದ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಹೇಳಿದರು.

ಶಿವಮೊಗ್ಗ: ಮಹಾನಗರ ಪಾಲಿಕೆಯ ಆಶ್ರಯದಲ್ಲಿ ನಡೆಯುತ್ತಿರುವ ರಂಗದಸರಾ ಕಾರ್ಯಕ್ರಮವನ್ನು ಅತ್ಯಂತ ವಿಭಿನ್ನವಾಗಿ ಆಚರಿಸಲಾಗುತ್ತಿದ್ದು, ಈ ರಂಗದಸರಾ ಕಾರ್ಯಕ್ರಮದಲ್ಲಿ ಒಟ್ಟು 30 ನಾಟಕ ತಂಡಗಳು 43 ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದು ಕಲಾವಿದರ ಒಕ್ಕೂಟದ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹವ್ಯಾಸಿ ರಂಗತಂಡಗಳ ಕಲಾವಿದರು ಶಿವಮೊಗ್ಗ ರಂಗಾಯಣ, ಮಹಾನಗರ ಪಾಲಿಕೆಯ ಜೊತೆಗೂಡಿಕೊಂಡು ರಂಗದಸರಾವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಗಿದೆ. ಜೊತೆಗೆ ರಂಗಗೀತೆ ಹಾಗೂ ಉಪನ್ಯಾಸ ಸೇರಿ 52ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸುಮಾರು 300 ಕಲಾವಿದರು ಈ ನಾಟಕಗಳಲ್ಲಿ ಅಭಿನಯಿಸಲಿದ್ದಾರೆ. ಸುಮಾರು 5.5 ಲಕ್ಷ ರು. ಬಜೆಟ್‌ನಲ್ಲಿ ರಂಗ ದಸರಾ ನಡೆಯಲಿದೆ ಎಂದು ಮಾಹಿತಿ ನೀಡಿದರು.ಕಾಲೇಜು ವಿದ್ಯಾರ್ಥಿಗಳು, ಕುಟುಂಬಗಳು, ಸಮುದಾಯಗಳು ಇದರಲ್ಲಿ ಭಾಗವಹಿಸುತ್ತಿವೆ. ಕುಟುಂಬ ರಂಗ ಎಂಬ ಕಾರ್ಯಕ್ರಮವನ್ನು ಈ ಬಾರಿಯೂ ಮುಂದುವರಿಸಲಾಗಿದೆ. 15 ಕುಟುಂಬಗಳ ಮನೆಗಳ ಬಳಿಯೇ ನಾಟಕ ಪ್ರದರ್ಶನವಿರುತ್ತದೆ. ಇವುಗಳಲ್ಲಿ ಆಯ್ಕೆಮಾಡಿದ ನಾಲ್ಕು ನಾಟಕಗಳನ್ನು ಕುಟುಂಬ ರಂಗಮಂದಿರದಲ್ಲಿ ಪ್ರದರ್ಶಿಸಲಾಗುವುದು ಎಂದು ವಿವರಿಸಿದರು.ಶಾಲಾ ಶಿಕ್ಷಕರಿಗೆ ಪ್ರಸಾದನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಕರ್ತವ್ಯರಂಗ ಎಂಬ ನೂತನ ಕಾರ್ಯಕ್ರಮವನ್ನು ಈ ಬಾರಿ ಸೇರಿಸಲಾಗಿದೆ. ವಾಹನ ಮಾರುಕಟ್ಟೆ, ರಿಪೇರಿ ಕ್ಷೇತ್ರ, ಶಿಕ್ಷಕರು, ಅಲೆಮಾರಿ ಸಮುದಾಯಗಳಿಗೆ ಒಂದು ಕಿರುನಾಟಕ ಕಲಿಸಲಾಗುತ್ತದೆ ಎಂದರು.ಸೆ.24ರಂದು ಬೆಳಗ್ಗೆ 10.30ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ಖ್ಯಾತ ರಂಗನಿರ್ದೇಶಕ ಗಣೇಶ್ ಮಂದಾರ್ತಿ ರಂಗದಸರಾ ಉದ್ಘಾಟಿಸುವರು. ನಂತರ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸುವ ಮೂರು ನಾಟಕಗಳು ಪ್ರದರ್ಶನವಾಗುತ್ತವೆ. ಇದರಲ್ಲಿ ಬಾಪೂಜಿ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ತಂಡವು ಬಾನುಮುಷ್ತಾಕ್ ರಚನೆಯ ಎದೆಯ ಹಣತೆ ನಾಟಕವನ್ನು ಪ್ರದರ್ಶನ ಮಾಡುವರು ಎಂದು ತಿಳಿಸಿದರು.ಸೆ.25ರಂದು ನಗರದ ವಿವಿಧ ಸ್ಥಳಗಳಲ್ಲಿ ಬೀದಿ ನಾಟಕಗಳಿರುತ್ತವೆ. ಸಂಜೆ 6ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ಕರ್ತವ್ಯರಂಗ ಕಾರ್ಯಕ್ರಮವಿರುತ್ತದೆ. ಸಂಜೆ 6.30ಕ್ಕೆ ಪೊಲೀಸ್ ಸಮುದಾಯ ಭವನದಲ್ಲಿ ರಂಗಗೀತೆ ಕಾರ್ಯಕ್ರಮವಿದ್ದು, ಎಸ್‌ಪಿ ಮಿಥುನ್‌ಕುಮಾರ್ ಅದನ್ನು ಉದ್ಘಾಟಿಸುವರು ಎಂದರು.ಸೆ.26ರಂದು ಬೆಳಿಗ್ಗೆ ಶಿವಮೊಗ್ಗದ ವಿವಿಧೆಡೆಗಳಲ್ಲಿ ಬೀದಿ ನಾಟಕಗಳ ಪ್ರದರ್ಶನವಿರುತ್ತದೆ. ಸಂಜೆ ಕುವೆಂಪು ರಂಗಮಂದಿರದಲ್ಲಿ ರಂಗಪರಿಕರಗಳ ಪ್ರದರ್ಶನ, ನಾಟಕ ಪ್ರದರ್ಶನ ಇರುತ್ತದೆ. 27ರಂದು ಕೂಡ ನಗರದ ವಿವಿಧೆಡೆಗಳಲ್ಲಿ ಬೀದಿ ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಅಂದು ಸಂಜೆ 7ಕ್ಕೆ ಕುವೆಂಪು ರಂಗಮಂದಿರದಲ್ಲಿ ಆರ್.ಎಸ್.ಹಾಲಸ್ವಾಮಿ ನಿರ್ದೇಶನದ ನೇಟಿವ್ ಥೇಟರ್ ಕಲಾವಿದರ ಅಭಿನಯದ ಜೋಗಿ ರಚಿಸಿದ ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏಕೆ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ಸೆ.28ರಂದು ಸಂಜೆ ಕಾಂತೇಶ್ ಕದರಮಂಡಲಗಿ ನಿರ್ದೇಶನದ ರಾವೀ ನದಿ ದಂಡೆಯಲ್ಲಿ ನಾಟಕ ಪ್ರದರ್ಶನ ಇರುತ್ತದೆ ಎಂದು ಹೇಳಿದರು.ರಂಗ ನಿರ್ದೇಶಕ ಕಾಂತೇಶ್ ಕದರಮಂಡಲಗಿ ಮಾತನಾಡಿ, ರಂಗದಸರಾ ಸಮಾರೋಪ ಸಮಾರಂಭ ಸೆ.೩೦ರಂದು ನಡೆಯಲಿದ್ದು, ಹಿರಿಯ ಕಲಾವಿದ ಪ್ರಕಾಶ್‌ರಾವ್ ಸಮಾರೋಪ ಭಾಷಣ ಮಾಡುವರು. ಅಂದು ಕೂಡ ಡಾ.ಚಂದ್ರಶೇಖರ್ ಕಂಬಾರ ಅವರ ಡಾ.ಜೋಕುಮಾರಸ್ವಾಮಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಡಾ.ಸಾಸ್ವೆಹಳ್ಳಿ ಸತೀಶ್, ಬಿ.ಆರ್.ರೇಣುಕಪ್ಪ, ಎ.ಸಿ.ಮಂಜುನಾಥ್, ಎನ್.ಚಂದನ್ , ಬಿ.ಎಸ್. ಚಂದ್ರಶೇಖರ್, ಹರಿಗೆ ಗೋಪಾಲಸ್ವಾಮಿ, ಉಮೇಶ್, ಕೆ. ಶಂಕರ್, ಜಿ.ಆರ್. ಲವ, ಡಾ.ಅಣ್ಣಪ್ಪ ಅರಳೀಮಠ್, ಪಿ.ಮಹಾದೇವನ್, ಮಾನಸಾ ಸಂತೋಷ್, ಶ್ರೀನಿವಾಸ ವೈದ್ಯ, ವಿಜಯ್ ನೀನಾಸಂ ಸೇರಿದಂತೆ ಹಲವು ನಿರ್ದೇಶಕರು, ನಾಟಕ ರಚನಾಕಾರರು, ತಂತ್ರಜ್ಞರು, ಕಲಾವಿದರುಗಳು ಭಾಗವಹಿಸುತ್ತಾರೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆಯ ಕಿರಿಯ ಅಭಿಯಂತರ ಹಾಗೂ ರಂಗದಸರಾ ಸಮಿತಿಯ ಸದಸ್ಯ ಕಾರ್ಯದರ್ಶಿ ಎನ್. ಮಧುನಾಯಕ್, ನಿರ್ದೇಶಕ ಆರ್.ಎಸ್.ಹಾಲಸ್ವಾಮಿ, ಸುರೇಶ್, ಮಂಜುನಾಥ್, ಅಭಿ, ಚಂದನ್ ಸೇರಿದಂತೆ ಹಲವರಿದ್ದರು.

PREV

Recommended Stories

ಪರ್ವ ಅಂತ್ಯ - ಎಸ್.ಎಲ್. ಭೈರಪ್ಪ ನಿಧನ । ಬೆಂಗಳೂರಲ್ಲಿ ಮಧ್ಯಾಹ್ನವರೆಗೆ ಅಂತಿಮ ದರ್ಶನ
ಬ್ಯಾಂಕರ್‌ಗಳು ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಿ