ಜನಪದ ಕಲೆಗಳ ಹೂರಣವೇ ಮೂಡಲಪಾಯ ಬಯಲಾಟ

KannadaprabhaNewsNetwork | Published : Apr 14, 2025 1:29 AM

ಸಾರಾಂಶ

ಮನುಷ್ಯನಲ್ಲಿ ಹುಟ್ಟಿಕೊಂಡ ಮೊದಲ ಕಲೆ ಕುಣಿತ. ಕುಣಿತವೇ ಮಾನವನ ಮೊದಲ ಭಾಷೆ.

ಕನ್ನಡಪ್ರಭ ವಾರ್ತೆ ಮೈಸೂರು

ಸೋಮನ ಕುಣಿತ, ಕೋಲಾಟ ಸೇರಿದಂತೆ ವಿವಿಧ ಜನಪದ ಕಲೆಗಳ ಹೂರಣದಿಂದ ಮೂಡಲಪಾಯ ಬಯಲಾಟ ಬಂದಿದೆ ಎಂದು ಮಧುಗಿರಿ ತಾಲೂಕು ಹನುಮಂತಪುರದ ಡಾ. ನರಸೇಗೌಡ ಹೇಳಿದರು.

ನಗರದ ರಂಗಾಯಣದ ಭೂಮಿಗೀತದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿಯು ರಂಗಾಯಣ, ಮಹಾರಾಜ ಕಾಲೇಜು ಜಾನಪದ ವಿಭಾಗ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮೂಡಲಪಾಯ ಬಯಲಾಟ ಪರಂಪರೆ ಕುರಿತ ವಿಚಾರ ಸಂಕಿರಣದಲ್ಲಿ ಅವರು, ಮೂಡಲಪಾಯ ಬಯಲಾಟದಲ್ಲಿ ಕುಣಿತ ಮತ್ತು ಹಾಡುಗಾರಿಕೆ ಕುರಿತು ಮಾತನಾಡಿದರು.

ಮನುಷ್ಯನಲ್ಲಿ ಹುಟ್ಟಿಕೊಂಡ ಮೊದಲ ಕಲೆ ಕುಣಿತ. ಕುಣಿತವೇ ಮಾನವನ ಮೊದಲ ಭಾಷೆ. ಭಾಷೆಯು ಮನುಷ್ಯನ ಹಾವಾಭಾವ ಹಾಗೂ ಸಂಜ್ಞೆಗಳು ಭಾಷಾ ಉಗಮಕ್ಕೆ ಕಾರಣವಾಯಿತು. ಮಾನವನ ಬೌದ್ಧಿಕವಾಗಿ ಹಾಗೂ ಭಾವನಾತ್ಮಕವಾಗಿ ಬೆಳವಣಿಗೆ ಕಂಡಂತೆ ಹಾವಾಭಾವಗಳು ಹಾಗೂ ಸಂಜ್ಞೆಗಳು ಸುಧಾರಣೆಯಿಂದ ಮಾತುಗಳು ಹೊರ ಬಂದವು ಎಂದರು.

ಬಯಲಾಟವು ಮೂಲ ದೇಸಿ ಕಲೆಯಾಗಿದೆ. ಬಯಲಾಟದಿಂದ ಶಾಸ್ತ್ರೀಯವಾದ ಭರತನಾಟ್ಯಕ್ಕೆ ಹೆಜ್ಜೆಗಳು ಹೋಗಿರಬಹುದು. ಕಾರಣ ಮೊದಲು ಈ ಭರತನಾಟ್ಯ ಇರಲಿಲ್ಲ. ಮನುಷ್ಯ ಮೂಲತಃ ಮೌಖಿಕ ಪರಂಪರೆಯಿಂದ ಬಂದು ಕಾಡು- ಮೇಡುಗಳಲ್ಲಿ ಅಲೆಯುತ್ತ ಕುಣಿತವನ್ನು ಸುಧಾರಣೆ ಮಾಡಿಕೊಂಡ. ಬಯಲಾಟದಲ್ಲಿ ಬರುವ ಕುಣಿತಗಳು ಜನಪದ ರಂಗಭೂಮಿಯ ಒಂದು ಪ್ರಕಾರ. ಜನಪದ ಕಲೆಗಳು ಕುಣಿತಗಳಿಗೆ ಪುಷ್ಟಿಯನ್ನು ನೀಡುತ್ತದೆ ಎಂದು ಅವರು ಹೇಳಿದರು.

ಬಹುರೂಪಿ ಪ್ರಯೋಗ

ಮೂಡಲಪಾಯ ಬಯಲಾಟದಲ್ಲಿ ಪಾತ್ರಗಳು ಮತ್ತು ವೇಷಭೂಷಣ ಕುರಿತು ಸಿಂದನೂರಿನ ಡಾ.ಕೆ. ಖಾದಿರ್ ಪಾಶಾ ಮಾತನಾಡಿ, ನಮ್ಮ ನಾಡು ಕುಣಿತದಿಂದಲೇ ಕೂಡಿದೆ. ಬಯಲಾಟವನ್ನು ಸರ್ವಜನಾಂಗದವರು ಸೇರಿಕೊಂಡು ಮಾಡುವ ಪ್ರಯೋಗ ಅಥವಾ ಎಲ್ಲರೂ ಸೇರಿಕೊಂಡು ಮಾಡುವ ಬಹುರೂಪಿ ಪ್ರಯೋಗ. ಯಕ್ಷಗಾನಕ್ಕೆ ಇರುವ ಪ್ರಾಮುಖ್ಯ ಬಯಲಾಟಕ್ಕೆ ಇತ್ತೀಚೆಗೆ ಬರುತ್ತಿದೆ. ಇಂದು ಬಯಲಾಟ ವಿಸ್ತರಣೆಯಾಗುತ್ತಿದೆ ಎಂದು ತಿಳಿಸಿದರು.

ಮಹಾರಾಜ ಕಾಲೇಜು ಜಾನಪದ ವಿಭಾಗದ ಮುಖ್ಯಸ್ಥೆ ಪ್ರೊ.ಎಚ್.ಆರ್. ಚೇತನಾ, ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಮನಾಪುರ ಮೊದಲಾದಲರು ಇದ್ದರು.

Share this article