ಹೊಸಪೇಟೆ: ರಸ್ತೆ ಬದಿಯಲ್ಲಿ ಕಸ ಹಾಕುವ ಜಾಗದಲ್ಲಿ ರಂಗೋಲಿ ಬಿಡಿಸಿ, ಜನ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಹಾಗೂ ಹೂವಿನ ಗಿಡಗಳನ್ನು ಇಟ್ಟರೆ ಹೇಗೆ? ಕಸ ಹಾಕುವವರು ಸ್ವಚ್ಛ ಜಾಗ ನೋಡಿ ಖುಷಿಯಾಗಿ, ಕಸ ಹಾಕುವುದನ್ನು ಬಿಟ್ಟು ಬಿಡುತ್ತಾರೆ. ಇಂಥದೊಂದು ಐಡಿಯಾ ಮಾಡಿರುವ ಹೊಸಪೇಟೆ ನಗರಸಭೆ ಸಿಬ್ಬಂದಿ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ ರಂಗೋಲಿ ಬಿಡಿಸುತ್ತಿದ್ದಾರೆ.
ನಗರದ ಪಟೇಲ್‌ನಗರ, ಹಂಪಿ ರಸ್ತೆಯ ಥಿಯೋಸಾಫಿಕಲ್ ಕಾಲೇಜು ಮುಂಭಾಗದಲ್ಲಿ, ರಾಣಿಪೇಟೆ ಅಶೋಕ್ ಬುಕ್ ಸ್ಟಾಲ್ ಸಮೀಪ, ಸಂಡೂರು ರಸ್ತೆ, ಅಶ್ವಿನಿ ಕಣ್ಣಿನ ಆಸ್ಪತ್ರೆ ಸಮೀಪ, ಬಲ್ಡೋಟ ಕಾಲೋನಿ ಸೇರಿದಂತೆ ವಿವಿಧ ಕಡೆಗಳಲ್ಲಿ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ, ರಂಗೋಲಿ ಬಿಡಿಸಿ, ಜನ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಹಾಗೂ ಹೂವಿನ ಗಿಡಗಳನ್ನು ಇಡುತ್ತಿದ್ದಾರೆ. ನಗರದಲ್ಲಿ ಜನ ಕಸ ಹಾಕುತ್ತಿದ್ದಾರೆ ಎಂಬುದು ಗೊತ್ತಾದ ತಕ್ಷಣವೇ ಅಲ್ಲಿಗೆ ನಗರಸಭೆ ಸಿಬ್ಬಂದಿ ತಂಡ ತೆರಳಿ ಜಾಗೃತಿ ಮೂಡಿಸುತ್ತಿದೆ. ಬರೀ ಜಾಗೃತಿ ಮೂಡಿಸುವುದಲ್ಲ, ನೆಲ ಸಾರಿಸಿ, ನೀರು ಹಾಕಿ, ರಂಗೋಲಿ ಬಿಡಿಸಿ, ಕಸ ಚೆಲ್ಲುವ ಜಾಗವನ್ನು ಸುಂದರಗೊಳಿಸುತ್ತಿದ್ದಾರೆ. ನಗರದ 35 ವಾರ್ಡ್‌ಗಳಲ್ಲೂ ಮನೆ ಮನೆ ಕಸ ಸಂಗ್ರಹ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಇದಕ್ಕಾಗಿ 50ಕ್ಕೂ ಅಧಿಕ ವಾಹನಗಳಿವೆ. ಕಸ ಸಂಗ್ರಹಿಸಲು ಮತ್ತು ಜಾಗೃತಿ ಮೂಡಿಸಲು ಪ್ರತ್ಯೇಕ ಸಿಬ್ಬಂದಿ ಕೂಡ ನಿಯೋಜನೆ ಮಾಡಲಾಗಿದೆ. ಪ್ರಮುಖ ಪ್ರವಾಸಿ ತಾಣ ಹಂಪಿ ಪಕ್ಕದಲ್ಲೇ ಇರುವ ನಗರದಲ್ಲಿ ಸ್ವಚ್ಛತೆ ಮಾಯವಾಗದಂತೆ ನೋಡಿಕೊಳ್ಳಲು ಮುಂದಾಗಿದೆ.
ನಗರದ ಸುಂದರೀಕರಣಕ್ಕೆ ಒತ್ತು ನೀಡಲಾಗಿದೆ. ನಾವು ಪ್ರತ್ಯೇಕ ಸಿಬ್ಬಂದಿ ನಿಯೋಜನೆ ಮಾಡಿಕೊಂಡು ಜಾಗೃತಿ ಮೂಡಿಸುತ್ತಿದ್ದೇವೆ. ನಗರದ ಎಲ್ಲ ವಾರ್ಡ್‌ಗಳಲ್ಲೂ ಮನೆ, ಮನೆಗೆ ತೆರಳಿ ಕಸ ಸಂಗ್ರಹ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ ನಗರಸಭೆ ಪೌರಾಯುಕ್ತ ಎರಗುಡಿ ಶಿವಕುಮಾರ.ನಗರದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಕುವುದನ್ನು ಬ್ಲಾಕ್ ಸ್ಪಾಟ್ ಎಂದು ಗುರುತಿಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಈ ಜಾಗದಲ್ಲಿ ರಂಗೋಲಿ ಬಿಡಿಸಿ, ಜನ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಹಾಗೂ ಹೂವಿನ ಗಿಡಗಳನ್ನು ಇಡಲಾಗುತ್ತಿದೆ. ಇಂತಹ ಬ್ಲಾಕ್ ಸ್ಪಾಟ್‌ಗಳನ್ನು ಸುಂದರ ಜಾಗವನ್ನಾಗಿಸಲಾಗುತ್ತಿದೆ ಎನ್ನುತ್ತಾರೆ ಹೊಸಪೇಟೆ ನಗರಸಭೆ ಅಧ್ಯಕ್ಷ ಎನ್. ರೂಪೇಶ್‌ಕುಮಾರ.