ಅವ್ಯವಸ್ಥೆಯ ಆಗರವಾಗಿರುವ ರಾಣಿಬೆನ್ನೂರು ನಗರಸಭೆ ಕ್ರೀಡಾಂಗಣ

KannadaprabhaNewsNetwork |  
Published : Oct 12, 2026, 02:15 AM IST
ರಾಣಿಬೆನ್ನೂರು ನಗರಸಭೆ ಕ್ರೀಡಾಂಗಣದ ಬಾಹ್ಯ ನೋಟ . . . . . . . . . . . ಕ್ರೀಡಾಂಗಣದಲ್ಲಿ ಅಭ್ಯಾಸನಿರತ ಕ್ರೀಡಾಪಟುಗಳು . . . . . . . . . . . ಮಳೆಗಾಲದ ಸಮಯದಲ್ಲಿ ಕ್ರೀಡಾಂಗಣದ ಮಧ್ಯಭಾಗದಲ್ಲಿ ನೀರು ನಿಂತಿರುವುದು (ಸಂಗ್ರಹ ಚಿತ್ರ)   | Kannada Prabha

ಸಾರಾಂಶ

ಜಿಲ್ಲೆಯಲ್ಲಿಯೇ ಅತಿ ದೊಡ್ಡ ನಗರವೆಂಬ ಹೆಗ್ಗಳಿಕೆ ಹೊಂದಿರುವ ನಗರಸಭೆ ಕ್ರೀಡಾಂಗಣ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ನಡುವಿನ ಹಗ್ಗಜಗ್ಗಾಟದಿಂದ ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿದೆ. ಇದರಿಂದ ಸ್ಥಳೀಯ ಕ್ರೀಡಾಪಟುಗಳು ಪರದಾಡುವಂತಾಗಿದೆ.

ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಜಿಲ್ಲೆಯಲ್ಲಿಯೇ ಅತಿ ದೊಡ್ಡ ನಗರವೆಂಬ ಹೆಗ್ಗಳಿಕೆ ಹೊಂದಿರುವ ನಗರಸಭೆ ಕ್ರೀಡಾಂಗಣ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ನಡುವಿನ ಹಗ್ಗಜಗ್ಗಾಟದಿಂದ ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿದೆ. ಇದರಿಂದ ಸ್ಥಳೀಯ ಕ್ರೀಡಾಪಟುಗಳು ಪರದಾಡುವಂತಾಗಿದೆ.

ಮಳೆಗಾಲದ ಸಮಯದಲ್ಲಿ ಕ್ರೀಡಾಂಗಣದಲ್ಲಿನ ನೀರು ಹೊರಕ್ಕೆ ಹರಿದು ಹೋಗಲು ಸರಿಯಾದ ವ್ಯವಸ್ಥೆಯಿಲ್ಲದ ಕಾರಣ ಮೈದಾನದಲ್ಲಿ ಅಪಾರ ಪ್ರಮಾಣದ ನೀರು ನಿಲ್ಲುತ್ತದೆ. ಇದರಿಂದ ಯಾವುದೇ ಕ್ರೀಡಾ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ.

ಕ್ರೀಡಾಂಗಣ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲವಾದರೂ ಅದನ್ನು ಅನ್ಯ ಚಟುವಟಿಕೆಗಳಿಗೆ ನೀಡುತ್ತಿರುವುದು ಕ್ರೀಡಾಪಟುಗಳಿಗೆ ಬೇಸರ ಮೂಡಿಸಿದೆ. ಸರ್ಕಾರ ತ್ವರಿತವಾಗಿ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಿಸಿ ಸ್ಥಳೀಯ ಕ್ರೀಡಾಪಟುಗಳ ಪ್ರತಿಭೆ ಅನಾವರಣಕ್ಕೆ ಅವಕಾಶ ಒದಗಿಸಿಕೊಡಬೇಕಾಗಿದೆ.

ಸೌಲಭ್ಯಗಳ ಕೊರತೆ: ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್‌ಗಳಿಗೆ ಪ್ರಮುಖವಾಗಿ ಸುಸ್ಸಜ್ಜಿತವಾದ 400 ಮೀಟರ್ ಟ್ರ್ಯಾಕ್ (ಅಂಗಣ) ಇರಬೇಕು. ಇದಲ್ಲದೆ ಹೈಜಂಪ್, ಲಾಂಗ್ ಜಂಪ್, ತ್ರಿಪಲ್ ಜಂಪ್ ಮುಂತಾದವುಗಳನ್ನು ಅಭ್ಯಾಸ ಮಾಡಲು ಮರಳಿನಿಂದ ಕೂಡಿದ ಪಿಟ್ (ಅಂಗಣ) ಬೇಕು. ಆದರೆ ಇಲ್ಲಿನ ಕ್ರೀಡಾಂಗಣದಲ್ಲಿ ಇಂತಹ ಯಾವುದೇ ಸೌಲಭ್ಯಗಳಿಲ್ಲವಾಗಿದೆ. ಇದರಿಂದ ಅನೇಕ ಕ್ರೀಡಾಪಟುಗಳು ನಗರದ ಖಾಸಗಿ ಕಾಲೇಜುಗಳ ಕ್ರೀಡಾಂಗಣಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆಯಿದೆ.

ಕ್ರೀಡಾಂಗಣಕ್ಕೆ ಸೂಕ್ತ ಭದ್ರತಾ ವ್ಯವಸ್ಥೆಯಿಲ್ಲದ ಕಾರಣ ರಾತ್ರಿ ವೇಳೆ ಇದು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕ್ರೀಡಾಂಗಣಕ್ಕೆ ದೊಡ್ಡದಾದ ಗೇಟ್ ಅಳವಡಿಸಿ ಬಾಗಿಲು ಹಾಕಲಾಗಿದ್ದರೂ ಸಣ್ಣ ಗೇಟಿನಿಂದ ಒಳಕ್ಕೆ ಪ್ರವೇಶಿಸಬಹುದಾಗಿದೆ. ಹೀಗಾಗಿ ಯಾರೂ ಬೇಕಾದರೂ ಕ್ರೀಡಾಂಗಣದ ಒಳಗೆ ಪ್ರವೇಶಿಸಬಹುದಾಗಿದೆ.

ಕ್ರೀಡಾಂಗಣ ಇದುವರೆಗೂ ನಗರಸಭೆ ಹೆಸರಿನಲ್ಲಿದ್ದ ಕಾರಣ ಅಭಿವೃದ್ಧಿ ಕೈಗೊಳ್ಳಲು ಹಿನ್ನಡೆಯಾಗಿತ್ತು. ಇದೀಗ ನಗರಸಭೆಯಿಂದ ನಮ್ಮ ಇಲಾಖೆಗೆ ಹಸ್ತಾಂತರ ಮಾಡಿಕೊಳ್ಳಲು ಎಲ್ಲ ಪ್ರಕ್ರಿಯೆ ಮಾಡಿಕೊಂಡಿದ್ದು ಶೀಘ್ರದಲ್ಲಿಯೇ ಅದು ಪೂರ್ಣಗೊಳ್ಳಲಿದೆ. ಇದೀಗ ₹2 ಕೋಟಿ ಹಣ ಕೂಡ ಬಿಡುಗಡೆಯಾಗಿದ್ದು ಕ್ರೀಡಾಂಗಣ ಅಭಿವೃದ್ಧಿಗೆ ಅತ್ಯಗತ್ಯವಾಗಿರುವ ಡ್ರೈನೆಜ್, ಹೊಸ ಕಂಪೌಂಡ್, ಗೇಟ್, 400 ಮೀ.ಟ್ರಾಕ್ ಸೇರಿದಂತೆ ಅಗತ್ಯ ಕೆಲಸಗಳನ್ನು ಕೈಗೊಳ್ಳುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹಾವೇರಿ ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಲತಾ ಬಿ.ಎಚ್. ಹೇಳಿದರು.

ಕ್ರೀಡಾಂಗಣ ಹಸ್ತಾಂತರದ ಹಗ್ಗಜಗ್ಗಾಟದಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಇಲ್ಲಿ 400 ಮೀಟರ್ ಟ್ರ್ಯಾಕ್, ಹೈ ಜಂಪ್, ಲಾಂಗ್ ಜಂಪ್, ತ್ರಿಪಲ್ ಜಂಪ್‌ಗೆ ಅಗತ್ಯವಾದ ಅಂಗಣವಿಲ್ಲವಾಗಿದ್ದು ಇವುಗಳನ್ನೆಲ್ಲಾ ನಿರ್ಮಿಸಬೇಕು ಎಂದು ರಾಣಿಬೆನ್ನೂರು ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಹಾಗೂ ಕ್ರೀಡಾ ತರಬೇತುದಾರ ಅಭಿಷೇಕ ಅಡ್ಡಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಕಾವ್ಯಕ್ಕೆ ಹೊಸ ಹೊಳಪು ತಂದ ಕವಿ ಬೇಂದ್ರೆ: ಡಾ. ಶಿವಪ್ಪ
ದಸರಾ ಉತ್ಸವ: ದುರ್ಗಾದೌಡ ಕಾರ್ಯಕ್ರಮಕ್ಕೆ ಚಾಲನೆ