ರಾಣಿಬೆನ್ನೂರಿಗೆ ಎಸಿ ಕಚೇರಿ ಭಾಗ್ಯ ದೊರಕಿತೆ?

KannadaprabhaNewsNetwork |  
Published : Jun 15, 2024, 01:05 AM IST
ಫೋಟೊ ಶೀರ್ಷಿಕೆ: 14ಆರ್‌ಎನ್‌ಆರ್1ರಾಣಿಬೆನ್ನೂರಿನ ವಿಶ್ವಬಂಧು ನಗರದಲ್ಲಿ ಎಸಿ ಕಛೇರಿಗಾಗಿ ಗುರುತಿಸಿರುವ ತಾತ್ಕಾಲಿಕ ಕಟ್ಟಡ | Kannada Prabha

ಸಾರಾಂಶ

ಹಾವೇರಿ ಜಿಲ್ಲೆ ಅಸ್ತಿತ್ವಕ್ಕೆ ಬಂದು 27 ವರ್ಷಗಳು ಗತಿಸಿದರೂ ಜಿಲ್ಲೆಯಲ್ಲಿಯೇ ಅತಿ ದೊಡ್ಡ ನಗರವಾಗಿರುವ ರಾಣಿಬೆನ್ನೂರಿನಲ್ಲಿ ಇದುವರೆಗೂ ಎಸಿ (ಉಪ ವಿಭಾಗಾಧಿಕಾರಿ) ಕಚೇರಿ ಇಲ್ಲದಿರುವುದು ಜನರಿಗೆ ಬಹುವಾಗಿ ಕಾಡುತ್ತಿದೆ.

ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು ಹಾವೇರಿ ಜಿಲ್ಲೆ ಅಸ್ತಿತ್ವಕ್ಕೆ ಬಂದು 27 ವರ್ಷಗಳು ಗತಿಸಿದರೂ ಜಿಲ್ಲೆಯಲ್ಲಿಯೇ ಅತಿ ದೊಡ್ಡ ನಗರವಾಗಿರುವ ರಾಣಿಬೆನ್ನೂರಿನಲ್ಲಿ ಇದುವರೆಗೂ ಎಸಿ (ಉಪ ವಿಭಾಗಾಧಿಕಾರಿ) ಕಚೇರಿ ಇಲ್ಲದಿರುವುದು ಜನರಿಗೆ ಬಹುವಾಗಿ ಕಾಡುತ್ತಿದೆ. ಈ ಹಿಂದೆ ನಗರದಲ್ಲಿ ಎಸಿ ಹಾಗೂ ಎಆರ್‌ಟಿಒ ಕಚೇರಿ ಪ್ರಾರಂಭಿಸಲು ಸರ್ಕಾರದಿಂದ ಮಂಜೂರಾತಿ ದೊರಕಿತ್ತು. ಆ ಪೈಕಿ ಈಗಾಗಲೇ ಎಆರ್‌ಟಿಒ ಕಚೇರಿ ಪ್ರಾರಂಭವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಅದೇಕೋ ಎಸಿ ಕಚೇರಿ ಭಾಗ್ಯ ಲಭಿಸದಿರುವುದು ಅಚ್ಚರಿಗೆ ಕಾರಣವಾಗಿದೆ. ಸಂಭಾವ್ಯ ಎಸಿ ಕಚೇರಿ ವ್ಯಾಪ್ತಿಗೆ ಒಳಪಡುವ ತಾಲೂಕುಗಳು: ಎಸಿ ಕಚೇರಿಯು ರಾಣಿಬೆನ್ನೂರು, ಬ್ಯಾಡಗಿ, ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕುಗಳನ್ನು ಒಳಗೊಳ್ಳಲಿದೆ. ಇದರಿಂದ ಈ ನಾಲ್ಕು ತಾಲೂಕುಗಳ ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ಪದೇ ಪದೆ ಜಿಲ್ಲಾ ಕೇಂದ್ರ ಹಾವೇರಿಗೆ ಅಲೆಯುವುದು ತಪ್ಪುತ್ತದೆ. ಅನುಕೂಲಗಳು: ಸದ್ಯ ಹಾವೇರಿ ಜಿಲ್ಲೆ ಹಾವೇರಿ ಉಪವಿಭಾಗದಲ್ಲಿ ರಾಣಿಬೆನ್ನೂರು, ಹಿರೇಕೆರೂರ, ರಟ್ಟೀಹಳ್ಳಿ, ಬ್ಯಾಡಗಿ ಹಾಗೂ ಹಾವೇರಿ ಸೇರಿದಂತೆ ಐದು ತಾಲೂಕುಗಳಿವೆ. ಹೀಗಾಗಿ ಹೆಚ್ಚಿನ ಕಾರ್ಯಬಾಹುಳ್ಯದಿಂದಾಗಿ ಅಲ್ಲಿ ಪ್ರಕರಣಗಳು ಬೇಗ ಇತ್ಯರ್ಥವಾಗದೆ ವೃಥಾ ಸಮಯ ಹಾಳಾಗುತ್ತಿದೆ. ಆದ್ದರಿಂದ ಉಪವಿಭಾಗವನ್ನು ವಿಭಜಿಸಿ ರಾಣಿಬೆನ್ನೂರಿಗೆ ಪ್ರತ್ಯೇಕ ವಿಭಾಗ ಮಾಡುವುದರಿಂದ ಸಾಕಷ್ಟು ಅನುಕೂಲವಾಗಲಿದೆ. ರೈತರ ಜಮೀನುಗಳ ವ್ಯಾಜ್ಯಗಳಿಗೆ ಸಂಬಂಸಿದಂತೆ ಮೇಲ್ಮನವಿ ಸಲ್ಲಿಸಲು ಹಾವೇರಿಗೆ ತೆರಳಬೇಕಾಗುತ್ತಿತ್ತು. ಇದೀಗ ಇಲ್ಲಿಯೇ ಎಸಿ ಕಚೇರಿ ಪ್ರಾರಂಭವಾಗುವುದರಿಂದ ರೈತರು ಅಲ್ಲಿಗೆ ಅಲೆಯುವುದು ತಪ್ಪಲಿದೆ. ಎಲ್ಲಕ್ಕಿಂತ ಪ್ರಾಮುಖ್ಯವಾದುದು ಭೂಸ್ವಾಧೀನ ಪ್ರಕರಣಗಳು (ತುಂಗಾ ಮೇಲ್ದಂಡೆ ಯೋಜನೆ ಹೊರತುಪಡಿಸಿ) ಸ್ಥಳೀಯವಾಗಿಯೇ ಇತ್ಯರ್ಥ್ಯಗೊಳ್ಳಲಿವೆ. ಇದಲ್ಲದೆ ಇನಾಮು ಜಮೀನಿಗೆ ಸಂಬಂಸಿದ ಪ್ರಕರಣಗಳಿಗೆ ಕೂಡ ಇಲ್ಲಿಯೇ ಪರಿಹಾರ ದೊರಕುತ್ತದೆ. ಭೂ ನ್ಯಾಯ ಮಂಡಳಿಗೆ ಎಸಿ ಅಧ್ಯಕ್ಷರಾಗಿರುವುದರಿಂದ ಅದಕ್ಕೆ ಸಂಬಂಧಿಸಿದ ವ್ಯಾಜ್ಯಗಳು ಕೂಡ ಇಲ್ಲಿಯೇ ಇತ್ಯರ್ಥಗೊಳ್ಳಲಿವೆ. ಇದರಿಂದ ಜನರ ಸಮಯ ಹಾಗೂ ಖರ್ಚಿನಲ್ಲಿ ಉಳಿತಾಯವಾಗಲಿದೆ. ಕಚೇರಿ ಸ್ಥಾಪನೆ ಕುರಿತು ಈಗಾಗಲೇ ಹಲವಾರು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಕಳುಹಿಸಲಾಗಿದೆ. ಜಾಗೆ ಗುರುತಿಸಲಾಗಿದೆ: ಎಸಿ ಕಚೇರಿ ಸ್ಥಾಪಿಸಲು ಈಗಾಗಲೇ ಇಲ್ಲಿನ ವಿಶ್ವಬಂಧು ನಗರದಲ್ಲಿ ಸ್ಥಳೀಯ ನಗರಸಭೆಗೆ ಸೇರಿದ ಸಿಎ ಜಾಗೆಯಲ್ಲಿರುವ ನಗರಸಭೆಯ ಒಂದು ಕಟ್ಟಡವನ್ನು ಕೂಡ ಗುರುತಿಸಲಾಗಿದೆ. 3 ತಾಲೂಕು ಜನತೆಗೂ ಅನುಕೂಲ:ಇಲ್ಲಿ ಎಸಿ ಕಚೇರಿ ಸ್ಥಾಪನೆಯಾಗುವುದರಿಂದ ಕೇವಲ ರಾಣಿಬೆನ್ನೂರು ತಾಲೂಕಿನ ಜನತೆಗೆ ಮಾತ್ರವಲ್ಲದೇ ಹಿರೇಕೆರೂರ, ರಟ್ಟೀಹಳ್ಳಿ ಹಾಗೂ ಬ್ಯಾಡಗಿ ತಾಲೂಕಿನ ಜನತೆಗೂ ಕೂಡ ಸಾಕಷ್ಟು ಪ್ರಯೋಜನವಾಗಲಿದೆ. ಏಕೆಂದರೆ ಹಿರೇಕೆರೂರ ಮತ್ತು ರಟ್ಟೀಹಳ್ಳಿ ತಾಲೂಕಿನ ಕೆಲವು ಹಳ್ಳಿಗಳು ಶಿವಮೊಗ್ಗ ಜಿಲ್ಲೆಯ ಗಡಿಗೆ ಹೊಂದಿಕೊಂಡಿದ್ದು ಅಲ್ಲಿಂದ ಹಾವೇರಿಗೆ ಸಾಕಷ್ಟು ದೂರವಾಗುತ್ತದೆ. ಅಲ್ಲಿನ ಜನತೆಗೆ ಕಚೇರಿ ಕೆಲಸಗಳಿಗಾಗಿ ಅಲ್ಲಿಗೆ ಹೋಗಿ ಬರಲು ಸಾಕಷ್ಟು ಸಮಯ ಹಾಗೂ ಹಣ ಎರಡೂ ಖರ್ಚಾಗುತ್ತದೆ. ಇದೇ ರೀತಿ ಬ್ಯಾಡಗಿ ತಾಲೂಕಿನ ಜನತೆಗೂ ಕೂಡ ರಾಣಿಬೆನ್ನೂರು ಹಾವೇರಿಗಿಂತ ಸಾಕಷ್ಟು ಹತ್ತಿರವಾಗುತ್ತದೆ.

ರಾಣಿಬೆನ್ನೂರಿನಲ್ಲಿ ಎಸಿ ಕಚೇರಿ ಸ್ಥಾಪಿಸುವುದರಿಂದ ತಾಲೂಕಿನ ರೈತಾಪಿ ಜನರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಜಮೀನಿನ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಹಾವೇರಿಗೆ ಅಲೆಯುವುದು ತಪ್ಪುತ್ತದೆ. ಇದರಿಂದ ಸಮಯ ಹಾಗೂ ಹಣ ಉಳಿತಾಯವಾಗುತ್ತದೆ. ಸರ್ಕಾರ ಆದಷ್ಟು ಶೀಘ್ರ ಕಚೇರಿ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ರಾಣಿಬೆನ್ನೂರು ರೈತ ಮುಖಂಡ ಹನುಮಂತಪ್ಪ ಕಬ್ಬಾರ ಹೇಳಿದರು.

ರಾಣಿಬೆನ್ನೂರು ನಗರದಲ್ಲಿ ಎಸಿ ಕಚೇರಿ ಪ್ರಾರಂಭಿಸುವ ಕುರಿತು ಸರ್ಕಾರದಿಂದ ಕೆಲವು ಮಾಹಿತಿ ಕೇಳಿದ್ದು ಅದನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಕಚೇರಿ ಸಲುವಾಗಿ ತಾತ್ಕಾಲಿಕವಾಗಿ ಒಂದು ಕಟ್ಟಡವನ್ನು ಗುರುತಿಸಲಾಗಿದೆ. ಸರ್ಕಾರದಿಂದ ಅನುಮೋದನೆ ಸಿಕ್ಕ ತಕ್ಷಣ ಕಚೇರಿ ಪ್ರಾರಂಭವಾಗಲಿದೆ ಎಂದು ತಹಸೀಲ್ದಾರ್‌

ಸುರೇಶಕುಮಾರ ಟಿ. ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ