ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿದ ಹಿನ್ನೆಲೆಯಲ್ಲಿ ರಾಣಿಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಸಂಚಾರಿ ಪೊಲೀಸರು 500 ರು. ದಂಡ ವಿಧಿಸಿದ್ದಾರೆ.
ರಾಣಿಬೆನ್ನೂರು: ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿದ ಹಿನ್ನೆಲೆಯಲ್ಲಿ ರಾಣಿಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಸಂಚಾರಿ ಪೊಲೀಸರು 500 ರು. ದಂಡ ವಿಧಿಸಿದ್ದಾರೆ.
ಆ. 25ರಂದು ಬೈಕ್ ರ್‍ಯಾಲಿಯೊಂದರಲ್ಲಿ ಶಾಸಕ ಪ್ರಕಾಶ ಕೋಳಿವಾಡ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಜನಸಾಮಾನ್ಯರಿಗೆ ದಂಡ ಹಾಕುವ ಪೊಲೀಸರು ಶಾಸಕರಿಗೆ ದಂಡ ಹಾಕುತ್ತಾರೆಯೇ ಎಂದೂ ಪೋಸ್ಟ್ ಮಾಡಿದ್ದರು. ಇದು ಸಂಚಾರ ಪೊಲೀಸರ ಗಮನಕ್ಕೆ ಬಂದಿದ್ದು, ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 500 ರು. ದಂಡದ ನೋಟಿಸ್ ಜಾರಿಗೊಳಿಸಿದ್ದರು. ಅಲ್ಲದೆ ನೋಟಿಸ್ ಶಾಸಕರ ಮನೆ ಬಾಗಿಲಿಗೆ ತಲುಪಿದ್ದು, ಬಳಿಕ ಅವರು ದಂಡದ ಮೊತ್ತ ಪಾವತಿಸಿದ್ದಾರೆ.
ನೋಟಿಸ್ ನೀಡಿರುವ ವಿಚಾರವನ್ನು ಶಾಸಕ ಪ್ರಕಾಶ ಕೋಳಿವಾಡ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸರ್ಕಾರಿ ಪ್ರೌಢಶಾಲೆಗಳಿಗೆ ಕಂಪ್ಯೂಟರ್ ಲ್ಯಾಬ್ ನೀಡುವ ನಿಟ್ಟಿನಲ್ಲಿ ಆಯೋಜಿಸಿದ್ದ ಬೈಕ್ ರ್‍ಯಾಲಿಯಲ್ಲಿ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದು ತಪ್ಪು. ತಪ್ಪನ್ನು ಒಪ್ಪಿಕೊಂಡಿದ್ದೇನೆ. ದಂಡವನ್ನೂ ಪಾವತಿಸಿದ್ದೇನೆ. ಶಾಸಕ ಸೇವಕನೇ ಹೊರತು ರಾಜನಲ್ಲ. ಪೊಲೀಸರು ನೋಟಿಸ್ ನೀಡಿದ್ದಾರೆ. ಅವರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಅವರನ್ನು ಗೌರವಿಸುತ್ತೇನೆ ಎಂದು ಶಾಸಕರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸಿದ ಜನಪ್ರತಿನಿಧಿಗೂ ನಿಯಮಾನುಸಾರ ದಂಡ ವಿಧಿಸಿರುವ ಪೊಲೀಸರ ಕ್ರಮ ಇದೀಗ ಗಮನ ಸೆಳೆದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.