ರಾಣಿಬೆನ್ನೂರು ನಗರಸಭೆ ಬಜೆಟ್‌ ಮಂಡನೆ, ರಸ್ತೆ, ಚರಂಡಿ, ಸ್ಮಶಾನ ಅಭಿವೃದ್ಧಿಗೆ ಆದ್ಯತೆ

KannadaprabhaNewsNetwork | Published : Feb 21, 2025 12:45 AM

ಸಾರಾಂಶ

ಬಜೆಟ್ ಮಂಡನೆ ನಂತರ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಪ್ರಸಕ್ತ ಸಾಲಿನ ನಗರಸಭೆ ಬಜೆಟ್ ಉತ್ತಮ ಅಂಶಗಳನ್ನು ಒಳಗೊಂಡಿದ್ದು ನಗರದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

ರಾಣಿಬೆನ್ನೂರು: ನಗರದ ವಿವಿಧ ವಾರ್ಡ್‌ಗಳಲ್ಲಿನ ರಸ್ತೆಗಳು, ಚರಂಡಿಗಳ ನಿರ್ಮಾಣ, ಎಲ್ಲ ನಾಗರಿಕರಿಗೂ ಸಮರ್ಪಕ ಕುಡಿಯುವ ನೀರು ಪೂರೈಕೆ, ವಿವಿಧ ಬಡಾವಣೆಗಳಲ್ಲಿ ಬೀದಿದೀಪಗಳ ವ್ಯವಸ್ಥೆ, ನಗರದ ವಿವಿಧ ಸ್ಥಳಗಳಲ್ಲಿ ಶೌಚಾಲಯಗಳ ನಿರ್ಮಾಣ, ಸ್ಮಶಾನಗಳ ಅಭಿವೃದ್ಧಿ, ನಗರದ ವಿವಿಧ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮುಂತಾದ ಪ್ರಮುಖ ಅಂಶಗಳನ್ನು ಒಳಗೊಂಡ ₹174.25 ಲಕ್ಷ ಉಳಿತಾಯ ಬಜೆಟ್‌ನ್ನು ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಮಂಡಿಸಿದರು. ಗುರುವಾರ ಇಲ್ಲಿನ ನಗರಸಭೆ ಸರ್ ಎಂ. ವಿಶ್ವೇಶರಯ್ಯ ಸಭಾಭವನದಲ್ಲಿ 2025- 26ನೇ ಸಾಲಿನ ಬಜೆಟ್ ಮಂಡಿಸಿ ಮಾತನಾಡಿದ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ, ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರಬಿಂದುವಾದ ನಗರವು ರಾಜ್ಯದಲ್ಲಿಯೇ ವೇಗವಾಗಿ ಬೆಳೆಯುತ್ತಿದ್ದು, ದಿನೇ ದಿನೇ ವ್ಯವಹಾರ- ಉದ್ಯೋಗ, ಶಿಕ್ಷಣ ಇತ್ಯಾದಿ ಕಾರಣಗಳಿಂದ ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ವಲಸೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ನಗರದ ಜನತೆಗೆ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವ ಪ್ರಾಥಮಿಕ ಗುರಿಯನ್ನು ಹೊಂದಲಾಗಿದೆ. ಅದಕ್ಕಾಗಿ ನಗರಸಭೆ ಸ್ವಂತ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಕರ, ಅಭಿವೃದ್ಧಿ ಕರ, ಮಳಿಗೆ ಬಾಡಿಗೆ, ಉದ್ದಿಮೆ ಪರವಾನಗಿ ಕಟ್ಟಡ ಪರವಾನಗಿ ಇತ್ಯಾದಿಗಳಿಂದ ಒಟ್ಟು ₹2149.35 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ಇದಲ್ಲದೆ ಸರ್ಕಾರದಿಂದ ಎಸ್‌ಎಫ್‌ಸಿ ಮುಕ್ತ ನಿಧಿಯ ₹175 ಲಕ್ಷ, ಎಸ್‌ಎಫ್‌ಸಿ ವಿದ್ಯುತ್ ಅನುದಾನ ₹1000 ಲಕ್ಷ, ಎಸ್‌ಎಫ್‌ಸಿ ವೇತನ ಅನುದಾನ ₹600 ಲಕ್ಷ, ಶಾಸಕರ ಅನುದಾನದಿಂದ ₹200 ಲಕ್ಷ, ಕೇಂದ್ರ ಸರ್ಕಾರ 15ನೇ ಹಣಕಾಸು ಯೋಜನೆಯಡಿ ₹650 ಲಕ್ಷ, ಎಸ್‌ಎಫ್‌ಸಿ ಕುಡಿಯುವ ನೀರಿನ ಯೋಜನೆಗಾಗಿ ₹5 ಲಕ್ಷ, ಎಸ್‌ಎಫ್‌ಸಿ ವಿಶೇಷ ಅನುದಾನದ ₹500 ಲಕ್ಷ ಸೇರಿ ಒಟ್ಟು ₹2830 ಲಕ್ಷ ಅನುದಾನ ನಿರೀಕ್ಷಿಸಲಾಗಿದೆ. ಇವುಗಳಿಂದ ಪಡೆದ ಅನುದಾನದಲ್ಲಿ ರಸ್ತೆಗಳು, ರಸ್ತೆ ದಿ ಚರಂಡಿ ದುರಸ್ತಿ ಹಾಗೂ ನಿರ್ಮಾಣಕ್ಕಾಗಿ ₹707 ಲಕ್ಷ ಮೀಸಲಿರಿಸಲಾಗಿದೆ. ಪ್ರತಿ ವಾರ್ಡ್‌ನಲ್ಲಿ ರಸ್ತೆ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಲಾಗಿದೆ. ಕುಡಿಯುವ ನೀರಿನ ನಿರ್ವಹಣೆಗಾಗಿ ₹395 ಲಕ್ಷ, ಬೀದಿದೀಪಗಳನ್ನು ಕಲ್ಪಿಸಲು ಹಾಗೂ ನಿರ್ವಹಣೆಗಾಗಿ ₹145 ಲಕ್ಷ, ಸಾರ್ವಜನಿಕ ಶೌಚಾಲಯ ನಿರ್ಮಾಣ, ದುರಸ್ತಿಗೆ ₹20 ಲಕ್ಷ, ಘನತ್ಯಾಜ್ಯ ನಿರ್ವಹಣೆಗಾಗಿ ಲ್ಯಾಂಡ್‌ಫೀಲ್ ಸೈಟ್ ಅಭಿವೃದ್ಧಿಗೆ ₹195 ಲಕ್ಷ, ಉದ್ಯಾನಗಳ ಅಭಿವೃದ್ಧಿಗೆ ₹300 ಲಕ್ಷ, ರಾಜಕಾಲುವೆಗಳ ಅಭಿವೃದ್ಧಿಗೆ ₹75 ಲಕ್ಷ, ಮಳೆ ನೀರು ಚರಂಡಿ ನಿರ್ಮಾಣ ಹಾಗೂ ದುರಸ್ತಿಗೆ ₹80 ಲಕ್ಷ, ನಗರಸಭಾ ಹೈಸ್ಕೂಲ್ ಅಭಿವೃದ್ಧಿಗೆ ₹10 ಲಕ್ಷ, ಗುಡ್ಡದ ಸ್ಮಾರಕ ಭವನ ಆಭಿವೃದ್ಧಿಗೆ ₹10 ಲಕ್ಷ ಸೇರಿದಂತೆ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ಗುರಿಯನ್ನು ಪ್ರಸಕ್ತ ಸಾಲಿನ ಬಜೆಟ್ ಒಳಗೊಂಡಿದೆ ಎಂದರು.ಬಜೆಟ್ ಮಂಡನೆ ನಂತರ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಪ್ರಸಕ್ತ ಸಾಲಿನ ನಗರಸಭೆ ಬಜೆಟ್ ಉತ್ತಮ ಅಂಶಗಳನ್ನು ಒಳಗೊಂಡಿದ್ದು ನಗರದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ನಗರದಲ್ಲಿನ ಘನತ್ಯಾಜ್ಯ ನಿರ್ವಹಣೆ ವಿಷಯ ಕುರಿತು ರಾಜ್ಯದ ಬಜೆಟ್ ಅಧಿವೇಶನದಲ್ಲಿ ಧ್ವನಿ ಎತ್ತಲಿದ್ದೇನೆ. ಘನತ್ಯಾಜ್ಯ ಘಟಕದಿಂದ ನೀರು ಶುದ್ಧೀಕರಿಸಿ ಮುಂದಕ್ಕೆ ಹರಿದುಹೋಗುವಂತೆ ಮಾಡಲು ನನ್ನ ಅನುದಾನದಲ್ಲಿ ಹಣ ನೀಡುತ್ತೇನೆ ಎಂದರು.

ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ಪ್ರಕಾಶ ಪೂಜಾರ, ಪುಟ್ಟಪ್ಪ ಮರಿಯಮ್ಮನವರ, ನಿಂಗರಾಜ ಕೋಡಿಹಳ್ಳಿ, ಗಂಗಮ್ಮ ಹಾವನೂರ ಬಜೆಟ್ ಕುರಿತು ಮಾತನಾಡಿ ಕೆಲವೊಂದು ಸಲಹೆಗಳನ್ನು ನೀಡಿದರು. ನಗರಸಭೆ ಉಪಾಧ್ಯಕ್ಷ ನಾಗರಾಜ ಪವಾರ, ಪೌರಾಯುಕ್ತ ಎಫ್.ಐ. ಇಂಗಳಗಿ, ಲೆಕ್ಕ ಅಧೀಕ್ಷಕಿ ವಾಣಿಶ್ರೀ ಉಪಸ್ಥಿತರಿದ್ದರು.

ಆಯವ್ಯಯದ ಸ್ಥೂಲ ಚಿತ್ರಣ: (ಲಕ್ಷ ರು. ಗಳಲ್ಲಿ)

ಬಜೆಟ್‌ನ ಪ್ರಾರಂಭಿಕ ಶಿಲ್ಕು 605.17

ನಿರೀಕ್ಷಿತ ರಾಜಸ್ವ ಜಮೆ 3925.35ನಿರೀಕ್ಷಿತ ಬಂಡವಾಳ ಜಮೆ 1141.12

ನಿರೀಕ್ಷಿತ ಅಸಾಮಾನ್ಯ ಜಮೆ 1455.50

ಪ್ರಾರಂಭಿಕ ಶುಲ್ಕ ಸೇರಿ ಒಟ್ಟು ಜಮೆ 7127.14

ನಿರೀಕ್ಷಿತ ರಾಜಸ್ವ ಪಾವತಿ 2937.04ನಿರೀಕ್ಷಿತ ಬಂಡವಾಳ ಪಾವತಿ 2142.24

ನಿರೀಕ್ಷಿತ ಅಸಾಮಾನ್ಯ ಪಾವತಿ 1873.61

ಒಟ್ಟು ನಿರೀಕ್ಷಿತ ಪಾವತಿ 6952.89

ಒಟ್ಟು ಉಳಿತಾಯ 174.25

Share this article