ರೆಸಾರ್ಟ್‌ಗೆ ತೆರಳಿದ ರಾಣಿಬೆನ್ನೂರು ನಗರಸಭೆ ಸದಸ್ಯರು, ಜನವರಿ 28ರಂದು ಚುನಾವಣೆ

KannadaprabhaNewsNetwork |  
Published : Jan 22, 2025, 12:33 AM IST
ಫೋಟೊ ಶೀರ್ಷಿಕೆ: 21ಆರ್‌ಎನ್‌ಆರ್2ರಾಣಿಬೆನ್ನೂರು ನಗರಸಭೆ ಫೋಟೊ ಶೀರ್ಷಿಕೆ: 21ಆರ್‌ಎನ್‌ಆರ್2ಎರಾಣಿಬೆನ್ನೂರು ನಗರಸಭೆ ಕಾಂಗ್ರೆಸ್ ಪಕ್ಷದ ಸದಸ್ಯರು ರೆಸಾರ್ಟ್ಗೆ ತೆರಳುವ ಪೂರ್ವದಲ್ಲಿ ಚಿತ್ರದುರ್ಗ ಜಿಲ್ಲೆ ಭರಮಸಾಗರ ಬಳಿ ಡಾಬಾದಲ್ಲಿ ಊಟಕ್ಕೆ ಕುಳಿತಿರುವುದು  | Kannada Prabha

ಸಾರಾಂಶ

ಕಳೆದ ಹಲವಾರು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಸ್ಥಳೀಯ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಕೊನೆಗೂ ದಿನಾಂಕ ನಿಗದಿಯಾಗಿದ್ದು ಜ. 28ರಂದು ಆಯ್ಕೆ ಜರುಗಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಧಿಕಾರದ ಗದ್ದುಗೆ ಏರಲು ತೀವ್ರ ಜಿದ್ದಾಜಿದ್ದಿ ಇರುವ ಹಿನ್ನೆಲೆಯಲ್ಲಿ ಎರಡೂ ಪಕ್ಷ ಹಾಗೂ ಬೆಂಬಲಿತ ಸದಸ್ಯರು ರೆಸಾರ್ಟ್‌ಗೆ ತೆರಳುವ ಮೂಲಕ ತೀವ್ರ ಕುತೂಹಲ ಮೂಡಿಸಿದ್ದಾರೆ.

ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು ಕಳೆದ ಹಲವಾರು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಸ್ಥಳೀಯ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಕೊನೆಗೂ ದಿನಾಂಕ ನಿಗದಿಯಾಗಿದ್ದು ಜ. 28ರಂದು ಆಯ್ಕೆ ಜರುಗಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಧಿಕಾರದ ಗದ್ದುಗೆ ಏರಲು ತೀವ್ರ ಜಿದ್ದಾಜಿದ್ದಿ ಇರುವ ಹಿನ್ನೆಲೆಯಲ್ಲಿ ಎರಡೂ ಪಕ್ಷ ಹಾಗೂ ಬೆಂಬಲಿತ ಸದಸ್ಯರು ರೆಸಾರ್ಟ್‌ಗೆ ತೆರಳುವ ಮೂಲಕ ತೀವ್ರ ಕುತೂಹಲ ಮೂಡಿಸಿದ್ದಾರೆ.ಅಧ್ಯಕ್ಷ ಸ್ಥಾನವು ಹಿಂದುಳಿದ ‘ಅ’ ವರ್ಗದ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೊಟಿ: ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿರುವುದರಿಂದ ಬಿಜೆಪಿಯಲ್ಲಿ ಅ ಪ್ರವರ್ಗಕ್ಕೆ ಸೇರಿರುವ ರೂಪಾ ಚಿನ್ನಿಕಟ್ಟಿ, ಕವಿತಾ ಹೆದ್ದೇರಿ, ಹೊನ್ನವ್ವ ಕಾಟಿ, ತ್ರಿವೇಣಿ ಪವಾರ, ರತ್ನವ್ವ ಪೂಜಾರ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಜಯಶ್ರೀ ಪೀಸೆ ಹಾಗೂ ಆರ್.ಶಂಕರ್ ಬಣದ ಜತೆ ಗುರುತಿಸಿಕೊಂಡಿರುವ ಅರೀಪಾಖಾನಂ ಸೌದಾಗರ ಪೈಪೋಟಿ ನಡೆಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಈ ಬಾರಿ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ದೊರಕಿದ್ದು ಬಿಜೆಪಿಯಲ್ಲಿ ಮಲ್ಲಿಕಾರ್ಜುನ ಅಂಗಡಿ, ಪ್ರಕಾಶ ಬುರಡಿಕಟ್ಟಿ, ಗುರುರಾಜ ತಿಳವಳ್ಳಿ ಪೈಪೋಟಿ ನಡೆಸಿದ್ದಾರೆ. ಇದಲ್ಲದೆ ಸಾಮಾನ್ಯ ಕ್ಷೇತ್ರ ಹೊರತುಪಡಿಸಿ ಅನ್ಯ ಕ್ಷೇತ್ರದಿಂದ ಆಯ್ಕೆಯಾದವರು ಹಾಗೂ ಇತರೇ ಪ್ರವರ್ಗದ ಸದಸ್ಯರೂ ಸ್ಪರ್ಧಿಸಬಹುದಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಶೇಖಪ್ಪ ಹೊಸಗೌಡ್ರ, ಮೆಹಬೂಬ್ ಮುಲ್ಲಾ, ಇತರ ಪ್ರವರ್ಗದಿಂದ ಆಯ್ಕೆಯಾಗಿರುವ ಶಶಿಧರ ಬಸೆನಾಯ್ಕರ, ಪುಟ್ಟಪ್ಪ ಮರಿಯಮ್ಮನವರ ಕೂಡ ಸ್ಪರ್ಧಿಸುವ ಸಾಧ್ಯತೆಗಳಿವೆ. ಸದಸ್ಯರ ಬಲಾಬಲ:ನಗರಸಭೆಯ ಒಟ್ಟು 35 ಸ್ಥಾನಗಳ ಪೈಕಿ ಬಿಜೆಪಿ 15, ಕರ್ನಾಟಕ ಪ್ರಜಾಕೀಯ ಜನತಾ ಪಕ್ಷ (ಕೆಪಿಜೆಪಿ) 10, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 09 ಹಾಗೂ 01 ಪಕ್ಷೇತರ ಸದಸ್ಯರಿದ್ದಾರೆ. ಸದ್ಯ ಕೆಪಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದ 10 ಸದಸ್ಯರಲ್ಲಿ ನಾಗರಾಜ ಪವಾರ, ನಿಂಗಪ್ಪ ಕೋಡಿಹಳ್ಳಿ, ಹುಚ್ಚಪ್ಪ ಮೆಡ್ಲೇರಿ ಬಿಜೆಪಿ ಜತೆಗೆ ಗುರುತಿಸಿಕೊಂಡಿದ್ದಾರೆ. ಅರೀಪಾಖಾನಂ ಸೌದಾಗರ, ನೂರುಲ್ಲಾಖಾಜಿ, ಹಬಿಬುಲ್ಲಾ ಕಂಬಳಿ, ಗಫಾರಖಾನ ಐರಣಿ ಕಾಂಗ್ರೆಸ್ ಜತೆಗೆ ಗುರುತಿಸಿಕೊಂಡಿದ್ದಾರೆ. ಇನ್ನು ರಮೇಶ ಕರಡೇಣ್ಣನವರ, ಸಿದ್ದಪ್ಪ ಬಾಗಿಲರ, ಪ್ರಕಾಶ ಬುರುಡಿಕಟ್ಟಿ ತಟಸ್ಥವಾಗಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಸಂಸದ ಮತ್ತು ಶಾಸಕರಿಗೆ ಮತದಾನದ ಹಕ್ಕು ಇರುವುದರಿಂದ ಬಿಜೆಪಿಗೆ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಪ್ರಕಾಶ ಕೋಳಿವಾಡ ಮತ ಚಲಾಯಿಸಲು ಅವಕಾಶವಿದೆ. ಕಾಂಗ್ರೆಸ್ಸಿಗೆ ಹೆಚ್ಚಿನ ಅವಕಾಶ:ಕಾಂಗ್ರೆಸ್ ಪಕ್ಷ ನಗರಸಭೆಯಲ್ಲಿ ಕೇವಲ 09 ಸದಸ್ಯರನ್ನು ಹೊಂದಿದ್ದರೂ ಕೂಡ ಆರ್.ಶಂಕರ್ ಬಣದ ಹೆಚ್ಚಿನ ಸದಸ್ಯರ ಬೆಂಬಲ ಹಾಗೂ ಕೆಲವು ಬಿಜೆಪಿ ಸದಸ್ಯರು ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುವ ಸಾಧ್ಯತೆಯಿದೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿರುವುದು ಅದಕ್ಕೆ ಗೆಲ್ಲುವ ಅವಕಾಶ ಹೆಚ್ಚಾಗಿದೆ.ಬಿಜೆಪಿ ಕಸರತ್ತು:15 ಸದಸ್ಯರ ಬಲ ಹೊಂದಿರುವ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಉಂಟಾಗಿದ್ದು ಸರ್ವಸಮ್ಮತ ಅಭ್ಯರ್ಥಿಯನ್ನು ನಿಲ್ಲಿಸಲು ಕಸರತ್ತು ನಡೆಸಲಾಗುತ್ತಿದೆ. ರೆಸಾರ್ಟ್‌ಗೆ ತೆರಳಿದ ಕಾಂಗ್ರೆಸ್, ಬಿಜೆಪಿ ಸದಸ್ಯರು: ಅಧಿಕಾರ ಹಿಡಿಯಲು ಜಿದ್ದಾಜಿದ್ದಿಗೆ ಕಾಂಗ್ರೆಸ್ ಹಾಗೂ ಬಿಜೆಪಿಗಳು ತಮ್ಮ ಸದಸ್ಯರು ಕೈತಪ್ಪಿ ಹೋಗದಂತೆ ತಡೆಯುವ ಸಲುವಾಗಿ ರೆಸಾರ್ಟ್‌ಗಳಿಗೆ ಕರೆದುಕೊಂಡು ಹೋಗಿದ್ದಾರೆ. ನಮ್ಮ ಪಕ್ಷದಲ್ಲಿ ಹಲವಾರು ಆಕಾಂಕ್ಷಿಗಳಿದ್ದು, ಸರ್ವ ಸಮ್ಮತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಪ್ರಯತ್ನಿಸಲಾಗುತ್ತಿದೆ. ಈ ವಿಷಯವನ್ನು ಪಕ್ಷದ ಉನ್ನತ ನಾಯಕರ ಗಮನಕ್ಕೆ ತರಲಾಗಿದೆ. ಕೊನೆ ಕ್ಷಣದವರೆಗೂ ಏನೂ ಹೇಳಲಾಗದು ಎಂದು ಬಿಜೆಪಿ ಶಹರ ಘಟಕದ ಅಧ್ಯಕ್ಷ ರಮೇಶ ಗುತ್ತಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ಯ ನಿಷೇಧಕ್ಕೆ ಮಹಿಳಾ ಹೋರಾಟ ಅವಿವಾರ್ಯ
ಕಡೂರಿಗೆ 2ನೇ ಅಗ್ನಿಶಾಮಕ ಠಾಣೆ ಮಂಜೂರಾತಿಗೆ ಪ್ರಯತ್ನ: ಕೆ.ಎಸ್.ಆನಂದ್