ಕಡೂರುನಾಲ್ಕು ಜಿಲ್ಲೆಗಳ ಗಡಿಭಾಗವಾಗಿರುವ ಪಂಚನಹಳ್ಳಿಗೆ ಜನಸಂಖ್ಯೆ ಹಾಗೂ ವಿಸ್ತೀರ್ಣಕ್ಕೆ ಅನುಗುಣವಾಗಿ 2ನೇ ಅಗ್ನಿಶಾಮಕ ಠಾಣೆ ಮಂಜೂರಾತಿಗೆ ಪ್ರಯತ್ನ ನಡೆಸಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಕಡೂರು: ನೂತನ ಅಗ್ನಿಶಾಮಕ ವಾಹನ ಲೋಕಾರ್ಪಣೆಕನ್ನಡಪ್ರಭ ವಾರ್ತೆ, ಕಡೂರು
ನಾಲ್ಕು ಜಿಲ್ಲೆಗಳ ಗಡಿಭಾಗವಾಗಿರುವ ಪಂಚನಹಳ್ಳಿಗೆ ಜನಸಂಖ್ಯೆ ಹಾಗೂ ವಿಸ್ತೀರ್ಣಕ್ಕೆ ಅನುಗುಣವಾಗಿ 2ನೇ ಅಗ್ನಿಶಾಮಕ ಠಾಣೆ ಮಂಜೂರಾತಿಗೆ ಪ್ರಯತ್ನ ನಡೆಸಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.ಸೋಮವಾರ ಪಟ್ಟಣದ ಶಾಸಕರ ಕಚೇರಿ ಮುಂಭಾಗದಲ್ಲಿ ಕಡೂರು ಅಗ್ನಿಶಾಮಕ ಠಾಣೆಗೆ ಮಂಜೂರಾಗಿ ಬಂದ ಅಗ್ನಿಶಾಮಕ ವಾಹನದ ಸೇವೆಗೆ ಹಸಿರು ನಿಶಾನೆ ತೋರಿ ಮಾತನಾಡಿದರು. ಬಯಲು ಸೀಮೆಯ ಭಾಗವಾಗಿರುವ ಕಡೂರು ತಾಲೂಕಿನಲ್ಲಿ ವಾರ್ಷಿಕ ಸರಾಸರಿ 150ಕ್ಕೂ ಹೆಚ್ಚು ಅಗ್ನಿ ಅವಘಡಗಳು ಸಂಭವಿಸಿವೆ. ಕಡೂರು ಅಗ್ನಿಶಾಮಕ ಠಾಣೆಯಲ್ಲಿ ಇದ್ದ 2 ವಾಹನಗಳಲ್ಲಿ ಒಂದು ವಾಹನ ಹಳೆಯದಾಗಿದ್ದು ಅದನ್ನು ಇಲಾಖೆ ವಾಪಸ್ ಪಡೆದಿತ್ತು. ಇದ್ದ ವಾಹನವೂ ಹಳೆಯದಾಗಿದ್ದು ಅದರ ಸಾಮರ್ಥ್ಯ ಕಡಿಮೆ ಇತ್ತು. ಈ ವಿಷಯವಾಗಿ ಸದನದಲ್ಲಿ ಪ್ರಸ್ತಾಪಿಸಿ ಗೃಹ ಸಚಿವರಲ್ಲಿ ಮನವಿ ಮಾಡಲಾಗಿದೆ. ಕೋರಿಕೆಗೆ ಸ್ಪಂದಿಸಿರುವ ಸರ್ಕಾರ ಹೊಸದಾಗಿ ಖರೀದಿಸಿದ್ದ 15 ವಾಹನ ಗಳಲ್ಲಿ ಒಂದು ವಾಹನವನ್ನು ತಾಲೂಕಿಗೆ ಮಂಜೂರು ಮಾಡಲಾಗಿದೆ. ಈ ಹೊಸ ವಾಹನದ ಸಾಮರ್ಥ್ಯ 6.5 ಸಾವಿರ ಲೀ. ಇದ್ದು ತಾಲೂಕಿನ ಜನರಿಗೆ ನೆರವಾಗಲಿದೆ ಎಂದು ಹೇಳಿದರು.
ಕಡೂರು-ಬೀರೂರು ಪಟ್ಟಣಗಳೂ ಸೇರಿ ತಾಲೂಕಿನಲ್ಲಿ ಪೆಟ್ರೋಲ್ ಬಂಕುಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ ಅಲ್ಲದೆ ಶಿವಮೊಗ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯೂ ಹಾದು ಹೋಗಿದೆ. ತಾಲೂಕಿನಲ್ಲಿ ಹಿಂದೆ ಪೆಟ್ರೋಲ್ ಟ್ಯಾಂಕರ್ ಉರುಳಿ ಅಗ್ನಿ ಅವಘಡವೂ ಸಂಭವಿಸಿದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಎಎಫ್ಎಫ್ಎಫ್ ( ಅಕ್ವೀಯಸ್ ಫಿಲ್ಮ್ ಫಾರ್ಮಿಂಗ್ ಫೋಮ್) ವಾಹನ ನಿಯೋಜಿಸುವ ಪ್ರಯತ್ನ ನಡೆಸಲಾಗುವುದು. ಮಂಜೂರಾದ ಎರಡು ವಾಹನಗಳನ್ನು ಬೆಂಗಳೂರು, ಬೆಳಗಾವಿಯಲ್ಲಿ ನಿಯೋಜಿಸಲಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಬೇಸಿಗೆ ಸಮೀಪಿಸುತ್ತಿದ್ದು ಸಾರ್ವಜನಿಕರು, ಗೃಹಿಣಿಯರು, ಕಚೇರಿ, ಕಲ್ಯಾಣ ಮಂಟಪಗಳು, ಚಿತ್ರಮಂದಿರಗಳು, ಉದ್ಯಮ ಗಳು ವಿದ್ಯುತ್, ಅಥವಾ ಸಿಲಿಂಡರ್ ಮೊದಲಾದವುಗಳಿಂದ ಸಂಭವಿಸಬಹುದಾದ ಅಗ್ನಿ ಅನಾಹುತಗಳ ಬಗ್ಗೆ ಮುಂಜಾಗ್ರತೆ ವಹಿಸಬೇಕು. ಸರ್ಕಾರದ ನಿರ್ದೇಶನದಂತೆ ಮಕ್ಕಳ ಸುರಕ್ಷತೆಗೆ ಶಾಲೆಗಳಲ್ಲಿ ಕಡ್ಡಾಯವಾಗಿ ಅಗ್ನಿ ನಿಯಂತ್ರಣ ವ್ಯವಸ್ಥೆ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು. ಅಗ್ನಿಶಾಮಕ ಠಾಣಾಧಿಕಾರಿ ಶಿವಾನಂದಯ್ಯ ಎಂ.ಆರ್, ಸಿ.ಸೋಮಶೇಖರ್, ರಾಕೇಶ್ ಯು.ಎ, ಎನ್.ಹರೀಶ್, ವೈ.ಎಲ್.ಚೇತನ್, ಆಕಾಶ್, ಶಿವಾನಂದ, ಚಾಲಕ ಸುಹೇಲ್, ವಸಂತ ಮತ್ತು ನಾಗರಿಕರು ಇದ್ದರು. 29ಕಕೆಡಿಯು1.ಕಡೂರು ಪಟ್ಟಣದ ಶಾಸಕರ ಕಚೇರಿ ಮುಂಭಾಗದಲ್ಲಿ ಸೋಮವಾರ ತಾಲೂಕಿಗೆ ಮಂಜೂರಾದ ನೂತನ ಅಗ್ನಿಶಾಮಕ ವಾಹನಕ್ಕೆ ಶಾಸಕ ಕೆ.ಎಸ್.ಆನಂದ್ ಹಸಿರು ನಿಶಾನೆ ತೋರಿಸಿದರು. ಅಗ್ನಿಶಾಮಕ ಠಾಣಾಧಿಕಾರಿ ಶಿವಾನಂದಯ್ಯ ಮತ್ತು ಸಿಬ್ಬಂದಿ ಹಾಗೂ ನಾಗರಿಕರು ಇದ್ದರು.