ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ: ಪ್ರಮುಖ ಆರೋಪಿ ಸೆರೆ

KannadaprabhaNewsNetwork |  
Published : Jul 10, 2026, 01:00 AM IST
ಬುದ್ದಿಮಾಂದ್ಯೆ ಮೇಲೆ ಅತ್ಯಾಚಾರ ಎಸಗಿದ ಅರಹುಣಸಿ- ಹಿರೇಮಣ್ಣೂರು ಮಧ್ಯೆ ಇರುವ ಹಿರೇಹಳ್ಳದ ಜಾಲಿಕಂಟೆ ಸ್ಥಳ. | Kannada Prabha

ಸಾರಾಂಶ

ಬಂಧಿತ ಆರೋಪಿ ಅದೇ ಗ್ರಾಮದ 56 ವಯಸ್ಸಿನ ನಾಗನಗೌಡ ಕರಕನಗೌಡ್ರ. ಇದರಿಂದ ಬಂಧಿತರ ಸಂಖ್ಯೆ ಎರಡಕ್ಕೆ ಏರಿದಂತಾಗಿದೆ. ನಿನ್ನೆ ದುರಗಪ್ಪ ಮಾದರ ಎಂಬಾತನನ್ನು ಬಂಧಿಸಲಾಗಿದೆ.

ರೋಣ: ತೀವ್ರ ಸಂಚಲನ ಮೂಡಿಸಿರುವ ತಾಲೂಕಿನ ಅರಹುಣಸಿ ಗ್ರಾಮದಲ್ಲಿ 19 ವಯಸ್ಸಿನ ಬುದ್ಧಿಮಾಂದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಪ್ರಮುಖ ಆರೊಪಿಯನ್ನು ಗುರುವಾರ ಬಂಧಿಸುವಲ್ಲಿ ರೋಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ಅದೇ ಗ್ರಾಮದ 56 ವಯಸ್ಸಿನ ನಾಗನಗೌಡ ಕರಕನಗೌಡ್ರ. ಇದರಿಂದ ಬಂಧಿತರ ಸಂಖ್ಯೆ ಎರಡಕ್ಕೆ ಏರಿದಂತಾಗಿದೆ. ನಿನ್ನೆ ದುರಗಪ್ಪ ಮಾದರ ಎಂಬಾತನನ್ನು ಬಂಧಿಸಲಾಗಿದೆ.

ಈ ಆರೋಪಿ ನಾಗನಗೌಡ ಕರಕನಗೌಡ್ರಗೆ ಮದುವೆಯಾದ ಮಕ್ಕಳು ಇದ್ದಾರೆ. ಈತ ಸಂತ್ರಸ್ತೆಯನ್ನು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ಯುತ್ತಿದ್ದ ವಿಡಿಯೋ ವೈರಲ್‌ ಆಗಿತ್ತು. ಆ ವಿಡಿಯೋ ಆಧರಿಸಿ ಪೊಲೀಸರು ಈತನನ್ನು ಈಗ ಬಂಧಿಸಿದ್ದಾರೆ. ಆರೋಪಿ ಕೂಡ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಸಂತ್ರಸ್ತೆಯ ತಾಯಿ ನಿಡಿದ ದೂರಿನಲ್ಲಿ ಅದೇ ಗ್ರಾಮದ ದುರ್ಗಪ್ಪ ಮಾದರ ಎಂಬವನ ಹೆಸರು ಮಾತ್ರ ಇತ್ತು. ಹಾಗಾಗಿ ಪೊಲೀಸರು ಉಳಿದವರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಕನ್ನಡಪ್ರಭ "ವೈರಲ್‌ ಆದ ವಿಡಿಯೊ, ರೇಪ್‌ ಪ್ರಕರಣ ಬೆಳಕಿಗೆ " ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ದಾಳಿಗಿಳಿದು ಆರೋಪಿ ನಾಗನಗೌಡ ಕರಕನಗೌಡ್ರನನ್ನು ಹೆಡೆಮುರಿ ಕಟ್ಟಿದ್ದಾರೆ. ಜೊತೆಗೆ ನಿನ್ನೆಯ ಎಫ್‌ಐಆರ್‌ ಪರಿಷ್ಕರಿಸಿ, ಅತ್ಯಾಚಾರ ಮತ್ತು ಜಾತಿನಿಂದನೆ ಪ್ರಕರಣವನ್ನು ಈತನ ಮೇಲೆ ದಾಖಲಿಸಿದ್ದಾರೆ.

ಏ. 22ರಂದೇ ಅತ್ಯಾಚಾರ: ಏ. 22ರಂದು ಮಧ್ಯಾಹ್ನ 3 ಗಂಟೆಗೆ ಅರಹುಣಸಿ- ಹಿರೇಮಣ್ಣೂರು ಒಳರಸ್ತೆಯ ಹಿರೇಹಳ್ಳದಲ್ಲಿ ಬುದ್ಧಿಮಾಂದ್ಯೆಯನ್ನು ಪುಸಲಾಯಿಸಿ ನಾಗನಗೌಡ ಕರಕನಗೌಡ್ರ ಅತ್ಯಾಚಾರ ಎಸಗಿದ್ದಾನೆ. ಈ ಕುರಿತು ಪೊಲೀಸರಿಗೆ ಸಿಕ್ಕ ವಿಡಿಯೋ ಸಾಕ್ಷಿಯಾಗಿದೆ. ಈ ವಿಡಿಯೋ ಕ್ಲಿಪ್ ಕಳೆದ ಎರಡೂವರೆ ತಿಂಗಳಿನಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದು, ವಿಡಿಯೋ ನೋಡಿದವರು ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎನ್ನುತ್ತಿದ್ದರೆ ಹೊರತು, ಈವರೆಗೂ ಯಾರೊಬ್ಬರೂ ಈ ಬಗ್ಗೆ ಪೊಲೀಸರಿಗೆ ಲಿಖಿತ ದೂರು ನೀಡಿರಲಿಲ್ಲ. ಈ ಮಧ್ಯೆ ಅನೇಕ ನಾಟಕೀಯ ಬೆಳವಣಿಗೆಗಳು ನಡೆಯುತ್ತಾ ಬಂದಿದ್ದವು.ದಿನೇ ದಿನೇ ಬುದ್ಧಿಮಾಂದ್ಯೆ ದೇಹದಲ್ಲಿ ಬದಲಾವಣೆ ಕಂಡು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗರ್ಭಿಣಿ ಎಂದು ತಿಳಿಯುತ್ತಿದಂತೆ ಪ್ರಕರಣ ತನ್ನ ದಿಕ್ಕನ್ನೆ ಬದಲಿಸಿ, ಇಬ್ಬರು ದುಷ್ಕರ್ಮಿಗಳ ಬಂಧನವಾಯಿತು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಸಮೇತ ಗುರುವಾರ ಘಟನಾ ಸ್ಥಳಕ್ಕೆ ತೆರಳಿ ಪಂಚನಾಮೆ ಮಾಡಿದ್ದಾರೆ. ಅತ್ಯಾಚಾರ ಪ್ರಕರಣವನ್ನು ಇನ್ನಷ್ಟು ಭೇದಿಸಿದರೆ ಮತ್ತಷ್ಟು ಕುತೂಹಲಕಾರಿ ವಿಷಯಗಳು, ದುಷ್ಕರ್ಮಿಗಳ ಬಣ್ಣ ಬಯಲಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇನ್ನಷ್ಟು ಬಂಧನ ಸಾಧ್ಯತೆ: ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಆಳಕ್ಕಿಳಿದ ರೋಣ ಪೊಲೀಸರಿಗೆ ದಿನಕ್ಕೊಂದು ಕುತೂಹಲಕಾರಿ ಮಾಹಿತಿ ಸಿಗುತ್ತಿವೆ.

ವೈರಲ್ ಆಗಿರುವ ವಿಡಿಯೋ ಜಾಡು ಹಿಡಿದು ಹೊರಟು, ವಿಡಿಯೋ ಮಾಡಿದ ವ್ಯಕ್ತಿಯನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಮತ್ತೊಂದು ದುಷ್ಕೃತ್ಯ ಹೊರಬಿದ್ದಿದೆ. ವಿಡಿಯೋ ಚಿತ್ರಿಕರಣ ಮಾಡಲಾದ ಮೊಬೈಲ್ ವಶಪಡಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದು, ಇನ್ನಷ್ಟು ಬಂಧನವಾಗುವ ಸಾಧ್ಯತೆ ಇದೆ.

ಜಾಲತಾಣದಲ್ಲಿ ಆಂದೋಲನ: ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ ಎಸಗಿ 6 ತಿಂಗಳ ಗರ್ಭಿಣಿ ಮಾಡಿರುವ ದುಷ್ಕರ್ಮಿಗಳಿಗೆ ಕಾನೂನಿನಡಿ ಉಗ್ರ ಶಿಕ್ಷೆಯಾಗಬೇಕು. ಇಂತಹ ಘಟನೆ ಮತ್ತೆಂದೂ ನಡೆಯದಂತೆ ಕಾಮಾಂಧರಿಗೆ ಇದೊಂದು ಪ್ರಕರಣ ಎಚ್ಚರಿಕೆ ಗಂಟೆಯಾಗಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅರಹುಣಸಿ ಸೇರಿದಂತೆ ಸುತ್ತಲಿನ ಗ್ರಾಮಗಳ ಯುವಕರು ಆಂದೋಲನ ಆರಂಭಿಸಿದ್ದಾರೆ.

ಬಂಧಿತ ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ಮತ್ತು ಇನ್ನುಳಿದ ಆರೋಪಿಗಳನ್ನು ಬಂಧನ ಮಾಡುವಂತೆಯೂ ಒತ್ತಾಯಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಟ್ಟಳ್ಳಿ ಶಾಲೆಯ ವಿದ್ಯಾರ್ಥಿಗಳಿಂದ ಗದ್ದೆಯಲ್ಲಿ ಭತ್ತ ನಾಟಿ
12ರಂದು ಕರಾವಳಿ ಪ್ರತಿಬಿಂಬ ಕಾರ್ಯಕ್ರಮ