ಗಾಂಜಾ ಹಾವಳಿ ತಡೆಗೆ ಕ್ಷಿಪ್ರ ಕಾರ್ಯಾಚರಣೆ: ಎಸ್ಪಿ ಜಿ.ಕೆ.ಮಿಥುನ್ ಕುಮಾರ್

KannadaprabhaNewsNetwork | Published : Jun 24, 2024 1:32 AM

ಸಾರಾಂಶ

ಶಿವಮೊಗ್ಗ ಜಿಲ್ಲೆಯಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ. ಇದರಿಂದ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ಇವುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲೆಯಲ್ಲಿ ವಿವಿಧ ಠಾಣಾ ಪೊಲೀಸರು ಗಾಂಜಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗವನ್ನು ಗಾಂಜಾ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದು, ಜೂ.1 ರಿಂದ 21ರವರೆಗೆ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಗಾಂಜಾ ಸೇವನೆ, ಮಾರಾಟ, ಹಸಿ ಗಾಂಜಾ ಬೆಳೆ ಸೇರಿದಂತೆ 61 ಪ್ರಕರಣ ದಾಖಲಾಗಿದ್ದು, ಒಟ್ಟು 79 ಆರೋಪಿಗಳಿಂದ 5,56,560 ಮೌಲ್ಯದ ಗಾಂಜಾ ವಶಕ್ಕೆ ಪಡೆಯ ಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ. ಇದರಿಂದ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ಇವುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲೆಯಲ್ಲಿ ವಿವಿಧ ಠಾಣಾ ಪೊಲೀಸರು ಗಾಂಜಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಜೂನ್‌ 21ರವರೆಗೆ ಜಿಲ್ಲೆಯಲ್ಲಿ ಒಟ್ಟು 54 ಗಾಂಜಾ ಸೇವನೆ ಪ್ರಕರಣಗಳು ದಾಖಲಾಗಿದ್ದು, 60 ಮಂದಿ ಆರೋಪಿಗಳನ್ನು ಬಂಧಿಸ ಲಾಗಿದೆ. ಇನ್ನು 6 ಗಾಂಜಾ ಮಾರಾಟ ಹಾಗೂ ಸಾಗಾಟ ಪ್ರಕರಣಗಳು ದಾಖಲಾಗಿದ್ದು ಒಟ್ಟು 18 ಆರೋಪಿಗಳಿಂದ 5 ಕೆಜಿ 839 ಗ್ರಾಂ ತೂಕದ ಒಣ ಗಾಂಜಾ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಒಟ್ಟು ಹಸಿ ಗಾಂಜಾ ಬೆಳೆದ ಪ್ರಕರಣ ದಾಖಲಾಗಿದ್ದು, 9 ಕೆಜಿ 524 ಗ್ರಾಂ ತೂಕದ ಹಸಿ ಗಾಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು,

ಈ ಎಲ್ಲಾ ಪ್ರಕರಣಗಳಲ್ಲಿ ಗಾಂಜಾವನ್ನು ಬೆಂಗಳೂರಿನಿಂದ ತರಲಾಗುತ್ತಿರುವುದು ಪತ್ತೆಯಾಗಿದೆ. ಸಾರ್ವಜನಿಕರು ತಮ್ಮ ಸುತ್ತಮುತ್ತ ಗಾಂಜಾ ಸೇವನೆ ಮಾರಾಟ ಕಂಡು ಬಂದರೆ, ವ್ಯಕ್ತಿಗಳು ಅನುಮಾನಸ್ಪದವಾಗಿ ಕಂಡು ಬಂದರೆ ತುರ್ತು ಸಹಾಯವಾಣಿ 112 ಕರೆ ಮಾಡುವ ಮೂಲಕ ಹತ್ತಿರುವ ಪೊಲೀಸ್‌ ಠಾಣೆಯಲ್ಲಿ ಮಾಹಿತಿ ತಿಳಿಸಬೇಕು ಎಂದು ಮನವಿ ಮಾಡಿದರು.

ಕಾಲೇಜಿನ ಸುತ್ತಮುತ್ತ ಗಾಂಜಾ ಜಾಗೃತಿ ಮೂಡಿಸಲಾಗುತ್ತಿದೆ. ಬೀಟ್ ಮೀಟಿಂಗ್ ಸಹ ಮಾಡಲಾಗುತ್ತಿದೆ. ಪಿಯು ಕಾಲೇಜುಗಳಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಲಾಗುತ್ತಿದೆ. 20ರಿಂದ 25 ರ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಗಾಂಜಾ ಸೇವನೆಗೆ ತುತ್ತಾಗುತ್ತಿದ್ದಾರೆ. ಕೂಲಿ ಕೆಲಸ ಮಾಡಿದವರು ಹೆಚ್ಚು ಸೇವನೆ ಮಾಡುತ್ತಿರುವುದು ಪತ್ತೆಯಾಗಿದೆ ಎಂದರು.

ಹೊಸಮನೆಯಲ್ಲಿ ಗಾಂಜಾ ಪ್ರಕರಣದಲ್ಲಿ ಗಾಂಜಾ ಸೇವನೆ ಮಾಡಿದ ಮಗನ ವಿರುದ್ಧವೇ ಪೋಷಕರು ಬಂದು ಗಮನಕ್ಕೆ ತಂದಿದ್ದರು. ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಈ ರೀತಿ ಪೋಷಕರು ತಮ್ಮ ಮಗನ ಬಗ್ಗೆ ಕಾಳಜಿ ವಹಿಸಿ ಬಂದರೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿಲ್‌ ಕುಮಾರ್‌ ಭೂಮರೆಡ್ಡಿ ಇದ್ದರು.

Share this article