)
ಕಾರ್ಕಳ: ಇಲ್ಲಿನ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 80 ವರ್ಷ ಪ್ರಾಯದ ಮಹಿಳಾ ರೋಗಿಯೊಬ್ಬರಿಗೆ ಬಲ ಕಣ್ಣಿನ ಕ್ಯಾನ್ಸರ್ (ಮೆಲನೋಮಾ) ಹಿನ್ನೆಲೆಯಲ್ಲಿ ಸಾಮಾನ್ಯ ಅರಿವಳಿಕೆಯಡಿ ನಡೆಸಲಾದ ಅತ್ಯಂತ ಸಂಕೀರ್ಣ ಮತ್ತು ಅಪಾಯಕರವಾದ ಬಲ ಕಣ್ಣಿನ ಇನ್ಯೂಕ್ಲಿಯೇಷನ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.ಈ ರೋಗಿಯು ಕಳೆದ ಕೆಲ ತಿಂಗಳಿಂದ ಬಲ ಕಣ್ಣಿನಲ್ಲಿ ತೀವ್ರ ನೋವು ಹಾಗೂ ದೃಷ್ಟಿ ಬಹಳ ಮಟ್ಟಿಗೆ ಕುಂದಿರುವ ಸಮಸ್ಯೆಯಿಂದ ಬಳಲುತ್ತಿದ್ದರು. ವಯೋ ಸಹಜ ಸಮಸ್ಯೆಗಳ ಜೊತೆಗೆ ಅಧಿಕ ರಕ್ತದೊತ್ತಡ, ಬೆನ್ನುಮೂಳೆಯ ತೀವ್ರ ವಕ್ರತೆ (ಕೈಫೋಸ್ಕೋಲಿಯೋಸಿಸ್), ಉಸಿರಾಟದ ತೊಂದರೆಗಳಿಂದ ಹೃದಯದ ಮೇಲಿನ ಒತ್ತಡ ಮತ್ತು ದೇಹದ ಸಾಮಾನ್ಯ ದುರ್ಬಲತೆ ಇದ್ದುದರಿಂದ ರೋಗಿಯನ್ನು ಹೈ ರಿಸ್ಕ್ ಪೇಷೆಂಟ್ ಎಂದು ಪರಿಗಣಿಸಲಾಗಿತ್ತು.
ಈ ಅಪರೂಪದ ಸವಾಲನ್ನು ಸ್ವೀಕರಿಸಿದ ನೇತ್ರ ವೈದ್ಯಕೀಯ ವಿಭಾಗದ ಡಾ. ಚಿದಾನಂದ ಕುಲಕರ್ಣಿ ಅವರ ತಂಡ ಮತ್ತು ಅನಸ್ತೀಶಿಯಾ ವಿಭಾಗದ ಸರ್ಜನ್ ಕಮಾಂಡರ್ ಡಾ. ಸುದರ್ಶನ್ ನಾಯಕ್ ಹಾಗೂ ಡಾ. ಅಶ್ವಿನಿ ಶೆಟ್ಟಿಗಾರ್ ಅವರ ತಂಡ ಅತ್ಯುತ್ತಮ ಸಮನ್ವಯ ಮತ್ತು ಸೂಕ್ಷ್ಮತೆಯಿಂದ ಶಸ್ತ್ರಚಿತ್ಸೆ ಯೋಜನೆ ರೂಪಿಸಿತು.ಶಸ್ತ್ರಚಿಕಿತ್ಸೆ ನಂತರ ರೋಗಿಗೆ ನಿಕಟ ನಿಗಾ, ಸಮರ್ಪಕ ನೋವು ನಿವಾರಣೆಯ ಚಿಕಿತ್ಸೆ ಹಾಗೂ ಅಗತ್ಯ ಸಹಾಯಕ ಆರೈಕೆಯನ್ನು ನೀಡಲಾಗಿದ್ದು, ಗಾಯ ಉತ್ತಮವಾಗಿ ಗುಣಮುಖವಾಗುತ್ತಿದ್ದು, ರೋಗಿಗೆ ಇದ್ದ ತೀವ್ರ ನೋವು ಗಮನಾರ್ಹವಾಗಿ ಕಡಿಮೆಯಾಗಿದೆ.ಕಾರ್ಕಳದಂತಹ ಪುಟ್ಟ ಪಟ್ಟಣದಲ್ಲಿ ಇಂತಹ ಅಪರೂಪದ ಮತ್ತು ಹೆಚ್ಚಿನ ಅಪಾಯದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿರುವುದು ನಮ್ಮ ವೈದ್ಯಕೀಯ ತಂಡದ ಶ್ರಮ, ಸಮರ್ಪಣೆ ಮತ್ತು ತಾಂತ್ರಿಕ ಸಾಮರ್ಥ್ಯದ ಫಲವಾಗಿದೆ. ಇದು ಆಸ್ಪತ್ರೆಯ ಮುಕುಟಕ್ಕೆ ಮತ್ತೊಂದು ಯಶಸ್ಸಿನ ಗರಿಯನ್ನು ಸೇರಿಸಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ ಹೇಳಿದ್ದಾರೆ.