ವಿಶೇಷ ವರದಿ
ಚಾಲುಕ್ಯರ ಕಾಲದಲ್ಲಿ ಠಂಕಸಾಲೆ (ನಾಣ್ಯಗಳ ಮುದ್ರಣ) ಮತ್ತು ಅತ್ತಿಮಬ್ಬೆ ಕಾಲದಲ್ಲಿ ದೇಶದಲ್ಲೆ ಹೆಸರಾಂತ ನಾಡಾಗಿದ್ದ ಜಿಲ್ಲೆಯ ಲಕ್ಕುಂಡಿ ಪ್ರವಾಸೋದ್ಯಮ ಕ್ಷೇತ್ರವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಲು ಬೇಕಾದ ಎಲ್ಲ ಅರ್ಹತೆಗಳನ್ನು ಹೊಂದಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಪ್ರತಿಪಾದನೆ ಮಾಡುತ್ತಲೇ ಬಂದಿದ್ದಾರೆ. ಈಗ ದೊರೆತ ಚಿನ್ನದ ನಿಧಿ ಮತ್ತೊಮ್ಮೆ ಲಕ್ಕುಂಡಿಯತ್ತ ಸಂಶೋಧಕರು ಕಣ್ಣರಳಿಸಿ ನೋಡುವಂತಾಗಿದೆ. ಅಲ್ಲದೇ ಸಚಿವರ ಪ್ರತಿಪಾದನೆಗೆ ಪುಷ್ಟಿ ನೀಡಿದೆ.
ಘಟನೆ ವಿವರ: ಗ್ರಾಮದ ನಿವಾಸಿ ಅತ್ಯಂತ ಬಡ ಕುಟುಂಬವಾಗಿರುವ ಗಂಗವ್ವ ಬಸವರಾಜ ರಿತ್ತಿ ಎಂಬವರ ಮನೆಗೆ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಒಂದು ತಾಮ್ರದ ಚಿಕ್ಕ ಬಿಂದಿಗೆ ಸಿಕ್ಕಿದೆ. ಅದನ್ನು ಪರಿಶೀಲಿಸಿದಾಗ ಅದರಲ್ಲಿ ಚಿನ್ನಾಭರಣಗಳು ಇರುವುದು ಕಂಡುಬಂದಿದೆ. ಇದರಲ್ಲಿ ಅರ್ಧ ಕೆಜಿಗೂ ಅಧಿಕ ತೂಕದ ಚಿನ್ನಾಭರಣಗಳು (ನಿಧಿ) ಇರಬಹುದು ಎನ್ನಲಾಗಿದೆ.ಉತ್ತರ ಕರ್ನಾಟಕ ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಅಪರೂಪದ ಬಂಗಾರದ ಆಭರಣಗಳು ಸಿಕ್ಕಿವೆ ಎನ್ನಲಾಗಿದೆ. ದೊರೆತ ಚಿನ್ನಾಭರಣಗಳು ಯಾರ ಕಾಲದ್ದು? ಅವುಗಳ ಮೇಲೆ ಏನೆಲ್ಲ ಬರೆಯಲಾಗಿದೆ ಎನ್ನುವುದು ತಜ್ಞರ ಪರಿಶೀಲನೆಯಿಂದಲೇ ತಿಳಿದು ಬರಬೇಕಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಲಕ್ಕುಂಡಿ ಪ್ರಾಧಿಕಾರದ ಸದಸ್ಯರು ಮತ್ತು ಪುರಾತತ್ವ ಇಲಾಖೆ ಸಿಬ್ಬಂದಿ, ಅಪರ ಜಿಲ್ಲಾಧಿಕಾರಿ ದುರಗೇಶ, ಎಸ್ಪಿ ರೋಹನ್ ಜಗದೀಶ ಇತರರು ಭೇಟಿ ನೀಡಿ ಪರಿಶೀಲಿಸಿದರು.
ಲಕ್ಕುಂಡಿಯಲ್ಲಿನ ಸಾಕಷ್ಟು ಶ್ರೀಮಂತ ಪರಂಪರೆ ಇದೆ. ಇಲ್ಲಿನ ಮಣ್ಣಿನಲ್ಲಿ ಚಿನ್ನವಿದೆ ಎನ್ನುವ ಹಿರಿಯ ಮಾತಿಗೆ ಪೂರಕ ಸಾಕ್ಷಿ ಎನ್ನುವಂತೆ ಶನಿವಾರ ಅಪರೂಪದ ಬಂಗಾರದ ಆಭರಣಗಳು ದೊರೆತಿವೆ. ಪ್ರಸ್ತುತ ನಿಧಿ ಸಿಕ್ಕಿರುವುದು ಉತ್ಖನನ ಕಾರ್ಯಕ್ಕೆ ಮತ್ತಷ್ಟು ಉತ್ಸಾಹ ತುಂಬಲಿದೆ ಎಂದು ಲಕ್ಕುಂಡಿ ಪ್ರಾಧಿಕಾರ ಸದಸ್ಯ ಸಿದ್ದು ಪಾಟೀಲ ಹೇಳುತ್ತಾರೆ.