ಕಂಪ್ಲಿ: ತಾಲೂಕಿನ ಗೋನಾಳ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ಅವಧಿಗೆ ಸೇರಿದ ಮಹತ್ವದ ಶಾಸನವೊಂದು ಪತ್ತೆಯಾಗಿದೆ. ಈ ಪ್ರದೇಶದ ಇತಿಹಾಸ, ಸಾಂಸ್ಕೃತಿಕ ಪರಂಪರೆಯ ಅಧ್ಯಯನಕ್ಕೆ ಹೊಸ ಬೆಳಕು ಚೆಲ್ಲಿದೆ.
ಸುಮಾರು ಎಂಟು ಅಡಿ ಉದ್ದ, ಎರಡೂವರೆ ಅಡಿ ಅಗಲದ ಕಲ್ಲಿನ ಮೇಲೆ ಕೆತ್ತಲಾಗಿರುವ ಈ ಶಾಸನವು ಆರು ಸಾಲುಗಳ ಬರಹವನ್ನು ಹೊಂದಿದೆ. ಪ್ರಾಚೀನ ಕನ್ನಡ ಲಿಪಿಯಲ್ಲಿ ಕೆತ್ತಲಾದ ಈ ಶಾಸನವು 16ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇರಿದೆ. ಆ ಕಾಲದ ಆಡಳಿತ, ಧಾರ್ಮಿಕ ನಂಬಿಕೆ, ದಾನ ಧರ್ಮದ ವ್ಯವಸ್ಥೆಗಳ ಕುರಿತು ಮಹತ್ವದ ಮಾಹಿತಿ ಒಳಗೊಂಡಿದೆ.
ಶಾಸನದ ಮೇಲ್ಭಾಗದಲ್ಲಿ ತ್ರಿಶೂಲ, ಈಶ್ವರ, ನಂದಿ, ಸೂರ್ಯ, ಚಂದ್ರರ ಆಕೃತಿಗಳನ್ನು ಕೆತ್ತಲಾಗಿದೆ. ಇವು ವಿಜಯನಗರ ಕಾಲದ ಧಾರ್ಮಿಕ ಸಂಕೇತಗಳಾಗಿವೆ. ದೇವಾಲಯಗಳಿಗೆ ಸಂಬಂಧಿಸಿದ ದಾನ ಶಾಸನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶಗಳಾಗಿವೆ. ಶಾಸನದ ಕೆಳಭಾಗದಲ್ಲಿ ಗೋವಿನ ಚಿತ್ರವನ್ನು ಕೆತ್ತಲಾಗಿದ್ದು, ಕಾಲದ ಹೊಡೆತಕ್ಕೆ ಸಿಲುಕಿ ಆ ಚಿತ್ರ ಬಹುತೇಕ ಅಳಿಸಿಹೋಗಿದೆ.ಇತಿಹಾಸ ಉಪನ್ಯಾಸಕ ಜೀರಿಗನೂರಿನ ಕೆ. ಆಂಜಿನೇಯ್ಯ ಮಾಹಿತಿ ನೀಡಿ, ಈ ಶಾಸನವು ಈಗಾಗಲೇ ಪುರಾತತ್ವ ಇಲಾಖೆಯ ದಾಖಲೆಗಳಲ್ಲಿ ಪ್ರಕಟಿತಗೊಂಡಿರುವುದಾಗಿ ತಿಳಿಸಿದ್ದಾರೆ. 1997ರಲ್ಲಿ ಮೈಸೂರಿನ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯಗಳ ನಿರ್ದೇಶನಾಲಯ ಪ್ರಕಟಿಸಿದ ಇನ್‌ಸ್ಕ್ರಿಪ್ಷನ್ಸ್ ಆಫ್ ಬಳ್ಳಾರಿ ಡಿಸ್ಟ್ರಿಕ್ಟ್ ಕೃತಿಯಲ್ಲಿ ಈ ಶಾಸನದ ಪಠ್ಯ ದಾಖಲೆಯಾಗಿದೆ ಎಂದರು.
ಗಂಗಾವತಿಯ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಮಾತನಾಡಿ, ಗೊನಹಾಳ ಗ್ರಾಮವನ್ನು ಹಂಪಿಯ ವಿರೂಪಾಕ್ಷ ದೇವರಿಗೆ ದಾನವಾಗಿ ನೀಡಿರುವುದನ್ನು ದಾಖಲಿಸುವ ಉದ್ದೇಶದಿಂದ ಈ ಶಾಸನವನ್ನು ಸ್ಥಾಪಿಸಲಾಗಿತ್ತು ಎಂದು ತಿಳಿಸಿದ್ದಾರೆ. ಇದು ಒಂದು ರೀತಿಯ ನಾಮಫಲಕ ಅಥವಾ ಗಡಿ ಗುರುತು ಶಾಸನವಾಗಿದ್ದು, ದೇವಾಲಯದ ಆಸ್ತಿಯ ರಕ್ಷಣೆಗೆ ಸಂಬಂಧಿಸಿದ ಮಹತ್ವದ ದಾಖಲೆ ಎಂದು ಹೇಳಿದ್ದಾರೆ.