ರಾಂ ಅಜೆಕಾರು ಕಾರ್ಕಳ ಪಶ್ಚಿಮ ಘಟ್ಟದ ಜೀವವೈವಿಧ್ಯಕ್ಕೆ ಮತ್ತೊಂದು ಅಪೂರ್ವ ಸಸ್ಯ ಪ್ರಭೇದ ಸೇರ್ಪಡೆಯಾಗಿದೆ. ತಮಿಳುನಾಡಿನ ಮಧುರೈ ಕಾಲೇಜಿನ ಸಸ್ಯಶಾಸ್ತ್ರಜ್ಞರ ತಂಡವು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಎತ್ತರ ಪ್ರದೇಶದಲ್ಲಿ ಜಗತ್ತಿನಲ್ಲೇ ಅತ್ಯಂತ ಸಣ್ಣ ಹೂವುಳ್ಳ ಹೊಸ ಬಾಲ್ಸಮ್ (Impatiens) ಸಸ್ಯವನ್ನು ಪತ್ತೆಹಚ್ಚಿದೆ. ಈ ಸಸ್ಯಕ್ಕೆ ‘ಇಂಪೇಷಿಯನ್ಸ್ ಸೆಲ್ವಸಿಂಘಿ’ (Impatiens selvasinghii) ಎಂದು ಹೆಸರಿಸಲಾಗಿದೆ.ಕುದುರೆಮುಖದಲ್ಲಿ ಪತ್ತೆ:! ಸಂಶೋಧಕರ ತಂಡವು ಈ ಸಸ್ಯವನ್ನು ಕುದುರೆಮುಖದ ಶಿಖರ ಪ್ರದೇಶದಲ್ಲಿ, ಸಮುದ್ರಮಟ್ಟದಿಂದ ಸುಮಾರು 1,630 ಮೀಟರ್ ಎತ್ತರದ ಶೋಲಾ ಮತ್ತು ಹುಲ್ಲುಗಾವಲು ಪ್ರದೇಶದಲ್ಲಿ ಕಂಡುಹಿಡಿದಿದೆ. ಚಾರಣದ ದಾರಿಗೆ ಹತ್ತಿರದ ತೇವಾಂಶ ಹೆಚ್ಚಿರುವ ಸ್ಥಳದಲ್ಲಿ ಈ ಸಸ್ಯ ಸಣ್ಣ ಗಾತ್ರದ ನಾಜೂಕಾದ ಹೂಗಳನ್ನು ಹೊತ್ತು ಅರಳಿತ್ತು.
ಸಂರಕ್ಷಣೆಯ ಅವಶ್ಯಕತೆಈ ಸಸ್ಯ ಪತ್ತೆಯಾದ ಪ್ರದೇಶದಲ್ಲಿ ಪ್ರವಾಸಿಗರ ಸಂಚಾರ ಹೆಚ್ಚು ಇರುವುದರಿಂದ ಸಸ್ಯಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇದೆ. ಅದರ ವಿಸ್ತರಣೆ ಮತ್ತು ಸಂಖ್ಯೆಯ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲದ ಕಾರಣ, ಅಂತಾರಾಷ್ಟ್ರೀಯ ಪರಿಸರ ಸಂಸ್ಥೆ ಐಯುಸಿಎನ್ ಈ ಸಸ್ಯವನ್ನು ರೆಡ್ ಲಿಸ್ಟ್‌ನ ‘ಡೇಟಾ ಡಿಫಿಶಿಯೆಂಟ್ (DD)’ ವಿಭಾಗಕ್ಕೆ ಸೇರಿಸಿದೆ. ಅಂದರೆ, ಇದು ಅಪಾಯದಲ್ಲಿದೆಯೇ ಅಥವಾ ಸುರಕ್ಷಿತವಾಗಿದೆಯೇ ಎಂಬುದನ್ನು ನಿರ್ಧರಿಸಲು ಬೇಕಾದ ಮಾಹಿತಿ ಇನ್ನೂ ಪೂರ್ತಿಯಾಗಿಲ್ಲ.
ಪಶ್ಚಿಮ ಘಟ್ಟಕ್ಕೆ ಹೊಸ ಹೆಮ್ಮೆ
ಈ ಪತ್ತೆಯೊಂದಿಗೆ ಪಶ್ಚಿಮ ಘಟ್ಟದ ಸಸ್ಯ ವೈವಿಧ್ಯ ಇನ್ನಷ್ಟು ಶ್ರೀಮಂತಗೊಂಡಿದ್ದು, ಮುಂದಿನ ಸಂಶೋಧನೆಗೆ ಇದು ಹೊಸ ಮಾರ್ಗ ತೆರೆದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.