ಗದುಗಿನಲ್ಲಿ ಅಪರೂಪದ ಚೌಕಾಕಾರದ ಚುಕ್ಕೆಯ ಹಲ್ಲಿ ಪತ್ತೆ

KannadaprabhaNewsNetwork |  
Published : Apr 08, 2026, 03:30 AM IST
ಅಪರೂಪದ ಹಲ್ಲಿಯ ಜಾತಿ ಪತ್ತೆಯಾಗಿರುವುದು.  | Kannada Prabha

ಸಾರಾಂಶ

ಗ್ರೇಸ್‌ಫುಲ್ ಲೀಫ್-ಟೋಡ್ ಗೆಕ್ಕೋ (Hemidactylus gracilis) ಗೆಕ್ಕೋನಿಡೇ ಕುಟುಂಬಕ್ಕೆ ಸೇರಿದೆ. ಇದು ಭಾರತಕ್ಕೆ ಮಾತ್ರ ಸೀಮಿತವಾಗಿರುವ ಸಣ್ಣ ಹಾಗೂ ಹುಲ್ಲುಗಾವಲಿನ ಪರಿಸರ ವ್ಯವಸ್ಥೆಯಲ್ಲಿ ವಾಸಿಸುವ ಹಲ್ಲಿ.

ವಿಶೇಷ ವರದಿ

ಗದಗ: ಸಮೀಪದ ಹುಯಿಲಗೋಳ ಗ್ರಾಮದ ದಂತ ವೈದ್ಯ ಡಾ. ಪ್ರದೀಪ ಉಗಲಾಟ ನಿರ್ಮಿಸಿರುವ 11 ಎಕರೆ ವ್ಯಾಪ್ತಿಯ ಮಿನಿ ಅರಣ್ಯದಲ್ಲಿ ಅಪರೂಪದ ಚೌಕಾಕಾರದ ಚುಕ್ಕೆಯ ಹಲ್ಲಿ ಪತ್ತೆಯಾಗಿದೆ.

ಈ ಅರಣ್ಯದಲ್ಲಿ ಸಹಜ ಹುಲ್ಲುಗಾವಲು ಪರಿಸರವಿದ್ದು, ಇದರಲ್ಲಿ ಹುಳಗಳು, ಮ್ಯಾಂಟಿಸ್, ಜೇಡಗಳು, ಹಾವುಗಳು ಮತ್ತು ಹಲವಾರು ಹಲ್ಲಿ ಪ್ರಭೇದಗಳು ವಾಸಿಸುತ್ತವೆ. ಹರ್ಪ್ಸ್ (ಸರಿಸೃಪ) ಕಪ್ಪೆಗಳ ಸಮೀಕ್ಷೆ ಸಿದ್ಧಪಡಿಸುವ ಸಂದರ್ಭದಲ್ಲಿ ಜೀವವೈವಿಧ್ಯ ಸಂಶೋಧಕರಾದ ಮಂಜುನಾಥ್ ಎಸ್. ನಾಯಕ ಹಾಗೂ ಡಾ. ಪ್ರದೀಪ್ ಉಗಲಾಟ ಅವರು ಈ ನೆಲದಲ್ಲಿ ವಾಸಿಸುವ ಹಲ್ಲಿಯನ್ನು ಪತ್ತೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ಈ ಪ್ರಜಾತಿ ಹಲ್ಲಿಯು ಈ ವರೆಗೂ ದಾಖಲಾಗಿಲ್ಲ. ಈ ಸುಂದರವಾದ ಗ್ರೇಸ್‌ಫುಲ್ ಲೀಫ್- ಟೋಡ್ ಗೆಕ್ಕೋ ಅಥವಾ ಚೌಕಾಕಾರದ ಚುಕ್ಕೆಗಳಿರುವ ಹಲ್ಲಿಯನ್ನು 2023ರಲ್ಲಿ ಹುಬ್ಬಳ್ಳಿ ಹುಲ್ಲುಗಾವಲು ಪ್ರದೇಶದಿಂದ ವಿಜ್ಞಾನಿ ಇಶಾನ್ ಅಗರ್ವಾಲ್(ಥಾಕರೆ ವೈಲ್ಡ್‌ಲೈಫ್ ಫೌಂಡೇಶನ್, ಮುಂಬೈ) ಮತ್ತು ಅವರ ತಂಡ ಕರ್ನಾಟಕದಲ್ಲಿ ಪ್ರಥಮ ಬಾರಿ ಪತ್ತೆ ಮಾಡಿ ವಿವರಿಸಿದ್ದನ್ನು ಸ್ಮರಿಸಬಹುದು.

ಗ್ರೇಸ್‌ಫುಲ್ ಲೀಫ್-ಟೋಡ್ ಗೆಕ್ಕೋ (Hemidactylus gracilis) ಗೆಕ್ಕೋನಿಡೇ ಕುಟುಂಬಕ್ಕೆ ಸೇರಿದೆ. ಇದು ಭಾರತಕ್ಕೆ ಮಾತ್ರ ಸೀಮಿತವಾಗಿರುವ ಸಣ್ಣ ಹಾಗೂ ಹುಲ್ಲುಗಾವಲಿನ ಪರಿಸರ ವ್ಯವಸ್ಥೆಯಲ್ಲಿ ವಾಸಿಸುವ ಹಲ್ಲಿ. ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ, ಆಂಧ್ರಪ್ರದೇಶ ಹಾಗೂ ಇತ್ತೀಚೆಗೆ ಉತ್ತರ ಕರ್ನಾಟಕದ ಹುಬ್ಬಳ್ಳಿ ಪ್ರದೇಶಗಳಲ್ಲಿ ಕಂಡುಬರುತ್ತದೆ.

ವಿಶೇಷತೆ: ಈ ಗೆಕ್ಕೋ ನಿಶಾಚರಿಯಾಗಿದ್ದು, ಕೀಟಾಹಾರಿಯಾಗಿದ್ದು, ಹುಲ್ಲುಗಾವಲು, ಗಿಡಗಂಟಿ ಪ್ರದೇಶಗಳು ಹಾಗೂ ಒಣ ಅರಣ್ಯಗಳಲ್ಲಿ ಸಾಮಾನ್ಯವಾಗಿ ಕಲ್ಲಿನ ಕೆಳಗೆ ಕಂಡುಬರುತ್ತದೆ. ಇದರ ಬೂದು ಬಣ್ಣದ ಬೆನ್ನಿನ ಮೇಲೆ ಕಪ್ಪು ಚೌಕಾಕಾರದ ಚುಕ್ಕೆಗಳಿರುವುದರಿಂದ ಇದನ್ನು ಚೌಕಾಕಾರದ ಚುಕ್ಕೆಗಳಿರುವ ಹಲ್ಲಿ(ಸ್ಕ್ವೇರ್ ಸ್ಪಾಟೆಡ್ ಗೆಕ್ಕೋ) ಎಂದೂ ಕರೆಯುತ್ತಾರೆ.

ಇದರ ತಲೆ ಸಣ್ಣ ಹಾಗೂ ಉದ್ದವಾಗಿದ್ದು, ಮೂಗಿನ ಭಾಗವು ಕಣ್ಣಿನಿಂದ ಕಿವಿಯ ನಡುವಿನ ದೂರಕ್ಕಿಂತ ಸ್ವಲ್ಪ ಉದ್ದವಾಗಿದೆ. ಕಿವಿಯ ರಂಧ್ರ ಸಣ್ಣದು ಮತ್ತು ಗೋಳಾಕಾರವಾಗಿದೆ. ದೇಹ ಮತ್ತು ಅಂಗಗಳು ಸೊಗಸಾಗಿವೆ. ಮೂಗಿನ ಮೇಲೆ ಬಹುಭುಜಾಕಾರದ ಗರಗಸದ ಹುರುಪೆಗಳಿವೆ. ತಲೆಯ ಹಿಂಭಾಗದಲ್ಲಿ ಚಿಕ್ಕಚಿಕ್ಕ ಕಣಗಳಿವೆ. ದೇಹದ ಮೇಲ್ಭಾಗದಲ್ಲಿ ಗಟ್ಟಿಯಾದ ಕಣಗಳೊಂದಿಗೆ ಒವಲ್ ಆಕಾರದ ಉಬ್ಬುಗಳು ಇದ್ದು, ಅವು ಸುಮಾರು ಹನ್ನೆರಡು ಅಸಮ ಪ್ರಮಾಣದ ಉದ್ದ ಸಾಲುಗಳಲ್ಲಿವೆ.

ಬಾಲವು ಗೋಳಾಕಾರದಾಗಿದ್ದು, ಮೂಲ ಭಾಗದಲ್ಲಿ ಸ್ವಲ್ಪ ಹಿಂಭಾಗಕ್ಕೆ ಸಣ್ಣವಾಗುತ್ತಾ ಹೋಗುತ್ತದೆ. ಬೂದು ಬಣ್ಣದ ಮೇಲೆ ಕಪ್ಪು ಚೌಕಾಕಾರದ ಚುಕ್ಕೆಗಳು ಉದ್ದ ಸಾಲುಗಳಲ್ಲಿ ಕಾಣಿಸುತ್ತವೆ. ತಲೆಯ ಬದಿಯಲ್ಲಿ ಕಣ್ಣಿನ ಮೂಲಕ ಸಾಗುವ ಕಪ್ಪು ಪಟ್ಟಿಯು ಮೇಲ್ಭಾಗದಲ್ಲಿ ಬಿಳಿ ಅಂಚನ್ನು ಹೊಂದಿದೆ. ಕೆಳಭಾಗವು ಬಿಳಿಯಾಗಿದ್ದು, ಕೆಲವೊಮ್ಮೆ ಬೂದು ರೇಖೆಗಳಿರುತ್ತವೆ.

ಕೀಟ ನಿಯಂತ್ರಕ: ಹುಲ್ಲುಗಾವಲು ಪರಿಸರ ವ್ಯವಸ್ಥೆಗಳು ಜೀವವೈವಿಧ್ಯ ಮತ್ತು ಮಾನವ ಜೀವನಕ್ಕೆ ಅತಿ ಮುಖ್ಯವಾದವು. ಹಲ್ಲಿಗಳು ಕೀಟಗಳನ್ನು ನಿಯಂತ್ರಿಸುವ ಮೂಲಕ ಪರಿಸರ ಸಮತೋಲನವನ್ನು ಕಾಪಾಡುತ್ತವೆ. ಇವು ಬಹಳ ಹೊಂದಿಕೊಳ್ಳುವ ಸ್ವಭಾವ ಹೊಂದಿದ್ದು, ಸ್ವಾಭಾವಿಕ ಮತ್ತು ನಗರ ಪರಿಸರದಲ್ಲಿಯೂ ಬದುಕುತ್ತವೆ. ಸ್ವಾಭಾವಿಕ ಕೀಟ ನಿಯಂತ್ರಕರಾಗಿ, ಆಹಾರ ಸರಪಳಿಯಲ್ಲಿ ಪ್ರಮುಖ ಆಹಾರವಾಗಿಯೂ, ಪರಿಸರದ ಆರೋಗ್ಯದ ಸೂಚಕಗಳಾಗಿಯೂ ಕಾರ್ಯನಿರ್ವಹಿಸುತ್ತವೆ ಮತ್ತು ಮೇಲಸ್ತರದ ಜೀವಿಗಳಿಗೆ ಆಹಾರ ಮೂಲ ಒದಗಿಸುವುದರ ಮೂಲಕ ಆಹಾರ ಸರಪಳಿಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜೈವವೈವಿಧ್ಯ ಸಂಶೋಧಕರಾದ ಮಂಜುನಾಥ್ ಎಸ್. ನಾಯಕ ಹಾಗೂ ತಂಡದ ಸಂಗಮೇಶ್ ಕಡಗದ, ಶರಣು ಗೌಡರ, ರಾಜು ಮಂತಾ ಕುನ್ನಿಭಾವಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯಪಾಲರ ವಜಾಕ್ಕೆ ಆಗ್ರಹಿಸಿ ಕರವೇ ಪ್ರತಿಭಟನೆ
ವಿಶೇಷಚೇತನ ಮಕ್ಕಳಿಗೆ ಜಿಲ್ಲಾಡಳಿತದಿಂದ ಸೌಲಭ್ಯ ಕಲ್ಪಿಸಲು ಕ್ರಮ: ಡಿಸಿ ಕವಿತಾ ಎಸ್‌. ಮನ್ನಿಕೇರಿ