ಆಟೋ ಚಾಲಕಿಗೆ ಎಲ್‌ಪಿಜಿ ಬೆಲೆ ಏರಿಕೆ ಬರೆ!

KannadaprabhaNewsNetwork |  
Published : Apr 08, 2026, 03:30 AM IST
ಮಹಿಳಾ ಆಟೋ ಚಾಲಕಿ ರೇಖಾ ಹುಲ್ಲೂರ.  | Kannada Prabha

ಸಾರಾಂಶ

ಪತಿ ಅಗಲಿದ ನಂತರ ತಂದೆ- ತಾಯಿ ಎರಡೂ ತಾನೇ ಆಗಿ ಮಕ್ಕಳನ್ನು ಸಲಹಲು ಆಟೋ ಓಡಿಸಿ ಬದುಕು ಕಟ್ಟಿಕೊಂಡರು. ಹತ್ತಾರು ಸಂಘ- ಸಂಸ್ಥೆಗಳು ಇವರ ಛಲವನ್ನು ಕಂಡು ಪ್ರಶಸ್ತಿ ನೀಡಿ ಗೌರವಿಸಿದ್ದವು. ಆದರೆ ಈಗ ಆ ಪ್ರಶಸ್ತಿಗಳು ಯುದ್ಧದ ಪರಿಣಾಮ ಈ ಬಡ ಕುಟುಂಬದ ಹಸಿವು ನೀಗಿಸುತ್ತಿಲ್ಲ.

ಶಿವಕುಮಾರ ಕುಷ್ಟಗಿ

ಗದಗ: ಇವರು ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಧೀರ ಮಹಿಳೆ. ಗಂಡುಮಕ್ಕಳಂತೆ ಆಟೋ ಓಡಿಸುತ್ತಾ ಬದುಕಿನ ಬಂಡಿ ಎಳೆಯುತ್ತಿರುವ ವನಿತೆ. ಅದೇ ಕೈಗಳು ಇಂದು ಅಸಹಾಯಕತೆಯಿಂದ ಕಣ್ಣೀರು ಒರೆಸಿಕೊಳ್ಳುವಂಥ ಸ್ಥಿತಿಯನ್ನು ಮಧ್ಯಪ್ರಾಚ್ಯ ಯುದ್ಧ ತಂದಿತ್ತಿದೆ.ಯುದ್ಧದಿಂದಾಗಿ ಗಗನಕ್ಕೇರುತ್ತಿರುವ ಎಲ್‌ಪಿಜಿ ದರ ರೇಖಾ ಹುಲ್ಲೂರ ಎಂಬ ಆಟೋ ಚಾಲಕಿಯ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಪತಿಯ ಅಗಲಿಕೆಯ ನಂತರ ಹೆಗಲಿಗೇರಿದ ಸಂಸಾರದ ನೊಗವನ್ನು ಆಟೋ ಚಾಲನೆಯಿಂದ ಬಂದ ಹಣದಲ್ಲಿಯೇ ನಡೆಸುತ್ತಿದ್ದರು. ಆಟೋ ಚಾಲಕನಾಗಿದ್ದ ಪತಿ ಸಾವಿಗೀಡಾದಾಗ ಇಡೀ ಸಂಸಾರದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು ಇದೇ ಎಲ್‌ಪಿಜಿ ಆಟೋವನ್ನು ನಂಬಿ.

ಪತಿ ಅಗಲಿದ ನಂತರ ತಂದೆ- ತಾಯಿ ಎರಡೂ ತಾನೇ ಆಗಿ ಮಕ್ಕಳನ್ನು ಸಲಹಲು ಆಟೋ ಓಡಿಸಿ ಬದುಕು ಕಟ್ಟಿಕೊಂಡರು. ಹತ್ತಾರು ಸಂಘ- ಸಂಸ್ಥೆಗಳು ಇವರ ಛಲವನ್ನು ಕಂಡು ಪ್ರಶಸ್ತಿ ನೀಡಿ ಗೌರವಿಸಿದ್ದವು. ಆದರೆ ಈಗ ಆ ಪ್ರಶಸ್ತಿಗಳು ಯುದ್ಧದ ಪರಿಣಾಮ ಈ ಬಡ ಕುಟುಂಬದ ಹಸಿವು ನೀಗಿಸುತ್ತಿಲ್ಲ.

ಹೊಟ್ಟೆ ಮೇಲೆ ಹೊಡೆತ: ಕಳೆದ ಒಂದು ವಾರದಿಂದ ಎಲ್‌ಪಿಜಿ ದರ ವಿಪರೀತ ಏರಿಕೆಯಾಗಿದ್ದು, ಆಟೋ ರಸ್ತೆಗೆ ಇಳಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ದಿನಕ್ಕೆ ₹400ರಿಂದ ₹500 ಗಳಿಸುತ್ತಿದ್ದರು. ಆದರೆ ಇಂಧನ ಬೆಲೆಯಲ್ಲಿ‌ ಆಗಿರುವ ಏರಿಕೆಯಿಂದಾಗಿ, ಆಟೋಗೆ ಇಂಧನ ತುಂಬಿಸಿದರೆ ಸಂಜೆ ಕೈಗೆ ಉಳಿಯುವುದು ಕೇವಲ ₹50ರಿಂದ ₹100 ಮಾತ್ರ. ​ಈ ಅಲ್ಪ ಹಣದಲ್ಲಿ ಮನೆ ಬಾಡಿಗೆ ಕಟ್ಟಬೇಕೋ? ಮಗಳ ಇನ್ಸುಲಿನ್ ತರಬೇಕೋ? ಅಥವಾ ಮಕ್ಕಳ ಹಸಿವು ನೀಗಿಸಬೇಕೋ ಎಂಬ ಪ್ರಶ್ನೆ ರೇಖಾ ಅವರನ್ನು ಕಾಡುತ್ತಿದೆ. ಮಗಳ ಸಕ್ಕರೆ ಕಾಯಿಲೆ: ​ರೇಖಾ ಅವರ ಸಂಕಷ್ಟಕ್ಕೆ ಮದ್ದಿಲ್ಲದಂತಾಗಿರುವುದು ಅವರ 10 ವರ್ಷದ ಮಗಳ ಆರೋಗ್ಯದ ವಿಚಾರದಲ್ಲಿ. ಮಗು ತೀವ್ರತರದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದೆ. ಪ್ರತಿದಿನ ಮಗಳಿಗೆ ಇನ್ಸುಲಿನ್ ನೀಡಲೇಬೇಕು. ಒಂದು ದಿನ ಔಷಧಿ ತಪ್ಪಿದರೂ ಮಗಳ ಪ್ರಾಣಕ್ಕೆ ಆಪತ್ತು. ಒಂದು ಕಡೆ ಅನಾರೋಗ್ಯ ಪೀಡಿತ ಮಗಳು. ಇನ್ನೊಂದೆಡೆ ಮಗನ ಶಿಕ್ಷಣದ ಹೊರೆ. ಇವೆಲ್ಲದರ ನಡುವೆ ರೇಖಾ ಅವರು ಆಟೋ ಓಡಿಸಿ ಅದೇ ಸಂಪಾದನೆಯಲ್ಲಿ ಕುಟುಂಬ ನಿರ್ವಹಣೆ ಮಾಡಲು ಹರಸಾಹಸ ಪಡುತ್ತಿದ್ದಾರೆ.ಈ ಹಿಂದೆ ಆಟೋ ಓಡಿಸುವ ವೇಳೆ ಮನೆ ಬಾಡಿಗೆ, ಮಗಳ ಆಸ್ಪತ್ರೆ ಖರ್ಚು ಸೇರಿದಂತೆ ಎಲ್ಲವೂ ಸಾಕಾಗುತ್ತಿತ್ತು. ಆದರೆ ಎಲ್ಪಿಜಿ ದರದಲ್ಲಿ ತೀವ್ರ ಹೆಚ್ಚಳವಾದ ಹಿನ್ನೆಲೆ ದುಡಿಮೆಯಲ್ಲಿ ಒಂದು ರುಪಾಯಿಯೂ ಉಳಿಯುತ್ತಿಲ್ಲ. ಒಂದೊತ್ತಿನ ಊಟಕ್ಕೂ ಕಷ್ಟವಾಗುತ್ತಿದೆ. ಔಷಧಿ ಇಲ್ಲದೇ ಒದ್ದಾಡುತ್ತಿರುವ ನನ್ನ ಮಗಳ ಆರೋಗ್ಯದ ದೃಷ್ಟಿಯಿಂದಾದರೂ ನಾನು ಸಹಾಯ ನಿರೀಕ್ಷೆ ಮಾಡುತ್ತಿದ್ದೇನೆ. ಮನೆ ಬಾಡಿಗೆ ಕಟ್ಟಲು ಆಗದೇ ಖಾಲಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಮಗನ ಶಿಕ್ಷಣದ ಶುಲ್ಕ ಕಟ್ಟಲಾಗದ ಅಸಹಾಯಕ ಸ್ಥಿತಿಯಲ್ಲಿದ್ದೇನೆ ಎಂದು ಆಟೋ ಚಾಲಕಿ(ಮೊ. 9108110166) ರೇಖಾ ಹುಲ್ಲೂರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯಪಾಲರ ವಜಾಕ್ಕೆ ಆಗ್ರಹಿಸಿ ಕರವೇ ಪ್ರತಿಭಟನೆ
ವಿಶೇಷಚೇತನ ಮಕ್ಕಳಿಗೆ ಜಿಲ್ಲಾಡಳಿತದಿಂದ ಸೌಲಭ್ಯ ಕಲ್ಪಿಸಲು ಕ್ರಮ: ಡಿಸಿ ಕವಿತಾ ಎಸ್‌. ಮನ್ನಿಕೇರಿ