ಸಿರುಗುಪ್ಪ: ವಧು- ವರರಿಗೆ ಕಿವಿ ಕೇಳಿಸಲ್ಲ; ಮಾತು ಬರಲ್ಲ. ಮೂಗ-ಕಿವುಡ ದಂಪತಿಯ ಮದುವೆಗೆ ಆಗಮಿಸಿದ ಸಹಸ್ರಾರು ಜನರು ನವಜೋಡಿಗೆ ಶುಭ ಹಾರೈಸಿದರು.
ವರ ಸಿರುಗುಪ್ಪ ನಿವಾಸಿ ಕೆ.ಎಚ್. ರಂಗನಾಥ ಶೆಟ್ಟಿ ಮತ್ತು ಕೆ.ಎಚ್. ವಿಜಯ ಕಲಾ ದಂಪತಿಯ ಪುತ್ರ ಕೆ.ಎಚ್. ವೆಂಕಟ ಅಯ್ಯಪ್ಪ, ವಧು ಶಿವಮೊಗ್ಗ ಜಿಲ್ಲೆಯ ನಿವಾಸಿ ಡಿ.ಬಿ. ರವಿ ಮತ್ತು ಡಿ.ಆರ್. ಶಾಂತ ಅವರ ಪುತ್ರಿ ಡಿ.ಆರ್. ಕೀರ್ತನಾ ಎಂಬುವರ ಜೊತೆ ಮದುವೆ ಮಾಡಿಕೊಡಲಾಗಿದೆ. ಈ ಅಪರೂಪದ ಮದುವೆಗೆ ಸಾವಿರಾರು ಜನರು ಸಾಕ್ಷಿಯಾಗಿದ್ದಲ್ಲದೆ ನವಜೋಡಿಗೆ ಶುಭ ಹಾರೈಸಿದರು.
ಬೆಂಗಳೂರಿನಿಂದ ಬೀದರ್‌ವರೆಗಿನ 500ಕ್ಕೂ ಹೆಚ್ಚು ಮೂಗ ಮತ್ತು ಕಿವುಡರು ರಾಜ್ಯದ ವಿವಿಧ ಜಿಲ್ಲೆಯಿಂದ ಆಗಮಿಸಿ ಅದ್ಧೂರಿಯಾಗಿ ಮದುವೆ ಸಂಭ್ರಮಿಸಿದರು.ತೃತೀಯ ಲಿಂಗಿಗಳು ಕೂಡ ಈ ಸಂದರ್ಭದಲ್ಲಿ ವಧು- ವರರಿಗೆ ವಿಶೇಷವಾಗಿ ದೃಷ್ಟಿ ತೆಗೆದು ಶುಭ ಹಾರೈಸಿದರು.
ಸ್ನೇಹಿತನ ಮದುವೆಯಲ್ಲಿ ಬಳ್ಳಾರಿ ಜಿಲ್ಲೆಯ ಕಿವುಡ ಹಾಗೂ ಮಾತಿನ ಅಸಮರ್ಥರ ಸಂಘದ ಸದಸ್ಯರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದ್ದು ಗಮನಾರ್ಹವಾಗಿತ್ತು.ಸಿರುಗುಪ್ಪ ನಗರದ ಎ.ವಿ.ಎಸ್.ಕಲ್ಯಾಣ ಮಂಟಪದಲ್ಲಿ ಕೆ.ಎಚ್.ವೆಂಕಟ ಅಯ್ಯಪ್ಪ ಜೊತೆ ಡಿ.ಆರ್.ಕೀರ್ತನಾ ವಿವಾಹ ನಡೆಯಿತು.