ಕನ್ನಡ ಕಡ್ಡಾಯ: ಜಾಗೃತಿಗಾಗಿ ಬೀದಿಗೆ ರಥಯಾತ್ರೆ

KannadaprabhaNewsNetwork | Published : Mar 1, 2024 2:15 AM

ಸಾರಾಂಶ

ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡ ಇರಬೇಕು ಎನ್ನುವುದಕ್ಕೆ ನೀಡಲಾಗಿದ್ದ ಗಡುವು ಈಗಾಗಲೇ ಮುಗಿದಿದ್ದು, ಇದನ್ನು ಯಾರು ಪಾಲಿಸಿಲ್ಲವೋ ಅಂಥವರಿಗೆ ಎಚ್ಚರಿಕೆ ನೀಡಲು ಗುರುವಾರದಿಂದ ಕನ್ನಡ ಉಳಿಸಿ ಕನ್ನಡ ಬೆಳೆಸಿ ಎನ್ನುವ ಕನ್ನಡ ರಥ ಬೀದಿ ಬೀದಿಗೆ ಹೋಗಲಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ಎಚ್ಚರಿಕೆ ನೀಡಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ಎಚ್ಚರಿಕೆ । ‘ಕನ್ನಡ ಉಳಿಸಿ, ಕನ್ನಡ ಬೆಳೆಸಿ’ ಘೋಷಣೆಕನ್ನಡಪ್ರಭ ವಾರ್ತೆ ಹಾಸನ

ಸರ್ಕಾರದ ಆದೇಶದಂತೆ ರಾಜ್ಯದ ಎಲ್ಲಾ ಕಡೆ ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡ ಇರಬೇಕು ಎನ್ನುವುದಕ್ಕೆ ನೀಡಲಾಗಿದ್ದ ಗಡುವು ಈಗಾಗಲೇ ಮುಗಿದಿದ್ದು, ಇದನ್ನು ಯಾರು ಪಾಲಿಸಿಲ್ಲವೋ ಅಂಥವರಿಗೆ ಎಚ್ಚರಿಕೆ ನೀಡಲು ಗುರುವಾರದಿಂದ ಕನ್ನಡ ಉಳಿಸಿ ಕನ್ನಡ ಬೆಳೆಸಿ ಎನ್ನುವ ಕನ್ನಡ ರಥ ಬೀದಿ ಬೀದಿಗೆ ಹೋಗಲಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ಎಚ್ಚರಿಕೆ ನೀಡಿದರು.

ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ತಿರುವಳ್ಳುವರ್ ಪ್ರತಿಮೆ ಬೆಂಗಳೂರಿನಲ್ಲಿ ಸ್ಥಾಪನೆ ವಿರೋಧಿಸಿ ಹೋರಾಟ ವಿಚಾರವಾಗಿ ಪ್ರತಿಮೆ ಉದ್ಘಾಟನೆ ಖಂಡಿಸಿ ಪ್ರತಿಭಟನೆ ಮಾಡದಂತೆ ಹಾಸನದಲ್ಲಿ ಬಂಧನವಾಗಿತ್ತು. ದಶಕಗಳ ಹಿಂದೆ ನಮ್ಮ ಮೇಲೆ ಹಾಕಿದ್ದ ಕೇಸ್ ಇನ್ನೂ ನಡೆಯುತ್ತಿದೆ. ನಮ್ಮ ಸರ್ಕಾರ ಕನ್ನಡಪರ ಹೋರಾಟಗಾರರ ಕೇಸ್ ವಾಪಸ್ ಪಡೆಯುತ್ತೇವೆ ಅಂತಾರೆ. ಆದರೆ ಈವರೆಗೆ ಯಾವುದೇ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆದಿಲ್ಲ. ರಾಜಕೀಯ ಪಕ್ಷಗಳ ಮೇಲಿನ ಕೇಸ್ ವಾಪಸ್ ಪಡೆದಿದ್ದಾರೆ. ರಾಜ್ಯದಲ್ಲಿ ಕನ್ನಡ ನಾಮಫಲಕ ಕಡ್ಡಾಯ ಗಡುವು ಇಂದಿಗೆ ಮುಗಿದಿದೆ. ಶುಕ್ರವಾರ ಕನ್ನಡ ಉಳಿಸಿ ಕನ್ನಡ ಬೆಳೆಸಿ ಕನ್ನಡ ರಥ ಬೀದಿ ಬೀದಿಗೆ ಹೋಗಲಿದೆ’ ಎಂದು ಹೇಳಿದರು.

ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಿಂದ ಎಲ್ಲೆಡೆ ಹೋಗಿ ಎಚ್ಚರಿಕೆ ನೀಡುತ್ತೇವೆ. ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಸರ್ಕಾರಿ ಸ್ವಾಮ್ಯದ ಎಲ್ಲಾ ಕೈಗಾರಿಕೆ ಮುಚ್ಚಿ ಹೋಗಿದೆ. ದೊಡ್ಡ ದೊಡ್ಡ ಕಂಪನಿಗಳ ಕೈಗಾರಿಗಳು ಆರಂಭ ಆಗಿವೆ. ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದ ವಿಚಾರದಲ್ಲಿ ಸರ್ಕಾರ ನಿಲುವು ಹೇಳಬೇಕು. ಜನರ ಭೂಮಿ ಕೊಡುತ್ತಾರೆ, ಆದರೆ ಉದ್ಯೋಗ ಕೊಟ್ಟಿಲ್ಲ. ರಾಜ್ಯದಲ್ಲಿ ಈ ಬಗ್ಗೆ ಯಾರಿಗೆ ಉದ್ಯೋಗ ಕೊಡಲಾಗಿದೆ ಎಂದು ಸಮೀಕ್ಷೆ ನಡೆಯಲಿ. ಆಗ ಯಾವ ರಾಜ್ಯದ ಜನರು ಎಷ್ಟು ಇದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

ಪಕ್ಷಾಂತರ ಕಾಯಿದೆಗೆ ಸಮಗ್ರ ತಿದ್ದುಪಡಿ ಆಗಬೇಕು. ಇಲ್ಲವಾದರೆ ಚುನಾವಣೆ ವ್ಯವಸ್ಥೆ ಮೇಲೆ ನಂಬಿಕೆ ಹೋಗಬಹುದು. ಪಕ್ಷಾಂತರ ನಿಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲ ಇಲ್ಲ. ವಿಧಾನಸಭೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ಆಗಲಿ ಎಂದು ಒತ್ತಾಯ ಮಾಡುತ್ತೇವೆ ಎಂದರು.ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್.

Share this article