ಅರಮನೆ ಆವರಣದಲ್ಲಿ ರಥಸಪ್ತಮಿ ವಿಶೇಷ ಪೂಜೆ

KannadaprabhaNewsNetwork |  
Published : Jan 26, 2026, 02:45 AM IST
8 | Kannada Prabha

ಸಾರಾಂಶ

ಪ್ರತಿ ವರ್ಷದಂತೆ ಈ ವರ್ಷವೂ ಚಾಮುಂಡೇಶ್ವರಿ ಪ್ರಾಧಿಕಾರ ಹಾಗೂ ಅರಮನೆ ಮಂಡಳಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ರಥಸಪ್ತಮಿ ಅಂಗವಾಗಿ ನಗರದಲ್ಲಿ ಭಾನುವಾರ ಅರಮನೆ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯನಿಗೆ ನಮಿಸಲಾಯಿತು.

ಇದು ಬಹಳ ಹಿಂದಿನಿಂದ ನಡೆದುಕೊಂಡು ಬಂದಿರುವ ಆಚರಣೆ. ಅರಮನೆ ಆವರಣದಲ್ಲಿ ಇರುವ ದೇವಾಲಯಗಳು ಬಹಳ ವಿಶೇಷವಾದವು. ಆಗಿನ ಕಾಲದಲ್ಲಿ ರಾಜರು ನಡೆಸುತ್ತಿದ್ದರು. ಈಗ ಸರ್ಕಾರವೇ ಮಾಡುತ್ತಿದೆ.

2016ರ ಬಳಿಕ ಈ ವರ್ಷ ಭಾನುವಾರ ರಥಸಪ್ತಮಿ ಇರುವುದು ವಿಶೇಷ. ಪ್ರತಿ ವರ್ಷದಂತೆ ಈ ವರ್ಷವೂ ಚಾಮುಂಡೇಶ್ವರಿ ಪ್ರಾಧಿಕಾರ ಹಾಗೂ ಅರಮನೆ ಮಂಡಳಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಹೀಗಾಗಿ ಅರಮನೆ ಆವರಣದಲ್ಲಿ ರಥಸಪ್ತಮಿ ಸಂಭ್ರಮ ಮನೆ ಮಾಡಿತ್ತು. ಅರಮನೆ ಆವರಣದಲ್ಲಿ ನಿಲ್ಲಿಸಿದ್ದ 8 ರಥಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಕಲ ಜೀವರಾಶಿಗೂ ತನ್ನ ಬೆಳಕಿನ ಮೂಲಕ ಚೈತನ್ಯ ನೀಡುವ ಸೂರ್ಯನನ್ನು ಆರಾಧಿಸಲಾಯಿತು.

ಮುಂಜಾನೆ ಅರಮನೆಯ ಮುಖ್ಯದ್ವಾರದ ಮುಂಭಾಗ ರಥಗಳನ್ನು ನಿಲ್ಲಿಸಿ ಪೂಜೆ ಸಲ್ಲಿಸಲಾಯಿತು. ನಂತರ ಶ್ರೀ ಭುವನೇಶ್ವರಿ, ಶ್ರೀ ತ್ರಿನೇಶ್ವರ ಸ್ವಾಮಿ, ಶ್ರೀ ಲಕ್ಷ್ಮೀರಮಣಸ್ವಾಮಿ, ಶ್ರೀ ಮಹಾಲಕ್ಷ್ಮೀದೇವಿ, ಶ್ರೀ ಪ್ರಸನ್ನ ಕೃಷ್ಣ, ಶ್ರೀ ವೇದವರಹಸ್ವಾಮಿ, ಶ್ರೀ ಖಿಲ್ಲೆ ವೆಂಕಟರಮಣಸ್ವಾಮಿ ಹಾಗೂ ಶ್ರೀ ಗಾಯಿತ್ರಿ ಅಮ್ಮನವರ ಉತ್ಸವ ಮೂರ್ತಿಗಳನ್ನು ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಯಿತು.

ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಗರದ ವಿವಿಧ ಬಡಾವಣೆಗಳಿಂದ ನೂರಾರು ಮಂದಿ ಅರಮನೆಗೆ ಆಗಮಿಸಿ ದೇವರ ದರ್ಶನ ಪಡೆದರು. ಒಂದೇ ಕಡೆ 8 ದೇವರುಗಳನ್ನು ಕಂಡು ಭಕ್ತರು ಪುಳಕಿತರಾದರು.

ಜತೆಗೆ ಲೋಕ ಕಲ್ಯಾಣಕ್ಕಾಗಿ ರಥಸಪ್ತಮಿ ಆಚರಣೆ ಮಾಡಿದ್ದು, ದರ್ಶನಕ್ಕೆ ಬರುವ ಭಕ್ತರು ಎಲ್ಲ ದೇವರುಗಳನ್ನು ಒಂದೇ ಕಡೆ ನೋಡಬಹುದಲ್ಲದೆ ಗರ್ಭಗುಡಿಯಲ್ಲಿರುವ ಉತ್ಸವ ಮೂರ್ತಿಗಳಿಗೆ ಸೂರ್ಯನ ಕಿರಣ ಬೀಳಲಿ ಎಂಬ ಕಾರಣಕ್ಕೆ ಅರಮನೆ ಮುಂಭಾಗ ಇರಿಸಿ ಪೂಜೆ ಸಲ್ಲಿಸಲಾಯಿತು.

ದೇವರಾಜ ಮೊಹಲ್ಲಾ, ಅಗ್ರಹಾರ, ರಾಮಾನುಜ ರಸ್ತೆ, ಸುಣ್ಣದಕೇರಿ, ಕನಕಗಿರಿ, ವಿದ್ಯಾರಣ್ಯಪುರಂ, ಇಟ್ಟಿಗೆಗೂಡು, ನಜರ್‌ಬಾದ್ ಮೊದಲಾದ ಪ್ರದೇಶಗಳಿಂದ ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದ ಸಾರ್ವಜನಿಕರು ಒಂದೊಂದು ದೇವರಿಗೂ ಕೈ ಮುಗಿದು, ಪೂಜೆ ಸಲ್ಲಿಸಿ ನಮಿಸಿದರು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲೂ ವಿಶೇಷ ಪೂಜೆ ಸಲ್ಲಿಸಲಾಯಿತು. ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಆಂಜನೇಯಸ್ವಾಮಿ ದರ್ಶನ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಗೆ ತಪ್ಪದೇ ಮತ ಚಲಾಯಿಸಿ
ದುರ್ಘಟನೆಗಳ ಪ್ರಚಾರದಿಂದ ಪ್ರವಾಸೋದ್ಯಮಕ್ಕೆ ಹಿನ್ನಡೆ: ಹಿಟ್ನಾಳ