ಸಾಧನಾ ಸಮಾವೇಶದಲ್ಲಿ ಒಂದು ಲಕ್ಷ ಜನರಿಗೆ ಹಕ್ಕುಪತ್ರ ವಿತರಣೆ

KannadaprabhaNewsNetwork |  
Published : Jan 26, 2026, 02:30 AM IST
ಹಾವೇರಿ ನಗರದ ಹೊರವಲಯದ ಅಜ್ಜಯ್ಯನ ಗುಡಿ ಸಮೀಪ ಆಯೋಜಿಸುತ್ತಿರುವ ಸರ್ಕಾರದ ಸಾಧನಾ ಸಮಾವೇಶದ ಸ್ಥಳಕ್ಕೆ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು. | Kannada Prabha

ಸಾರಾಂಶ

ಹಾವೇರಿಯಲ್ಲಿ ಫೆ. ೧೩ರಂದು ನಡೆಯಲಿರುವ ಬೃಹತ್ ಸಾಧನಾ ಸಮಾವೇಶದ ಕಾರ್ಯಕ್ರಮದಲ್ಲಿ ಜಿಲ್ಲೆಯ ೩೦ ಸಾವಿರ ಫಲಾನುಭವಿಗಳು ಸೇರಿ ಸುಮಾರು ಒಂದು ಲಕ್ಷ ಜನರಿಗೆ ಕಂದಾಯ ಹಕ್ಕುಪತ್ರ, ಇ -ಪೌತಿ ಮತ್ತು ಬಕರ್ ಹುಕುಂ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದರು.

ಹಾವೇರಿ: ಹಾವೇರಿಯಲ್ಲಿ ಫೆ. ೧೩ರಂದು ನಡೆಯಲಿರುವ ಬೃಹತ್ ಸಾಧನಾ ಸಮಾವೇಶದ ಕಾರ್ಯಕ್ರಮದಲ್ಲಿ ಜಿಲ್ಲೆಯ ೩೦ ಸಾವಿರ ಫಲಾನುಭವಿಗಳು ಸೇರಿ ಸುಮಾರು ಒಂದು ಲಕ್ಷ ಜನರಿಗೆ ಕಂದಾಯ ಹಕ್ಕುಪತ್ರ, ಇ -ಪೌತಿ ಮತ್ತು ಬಕರ್ ಹುಕುಂ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದರು.ನಗರ ಹೊರವಲಯದ ಅಜ್ಜಯ್ಯನ ಗುಡಿ ಹತ್ತಿರ ಸಾಧನಾ ಸಮಾವೇಶ ಆಯೋಜನೆ ಮಾಡಲಿರುವ ಸ್ಥಳಕ್ಕೆ ಭಾನುವಾರ ಸಂಜೆ ಭೇಟಿ ನೀಡಿ ಸಿದ್ಧತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಇದುವರೆಗೆ ಒಟ್ಟು ೬೫ ಸಾವಿರ ಹಕ್ಕುಪತ್ರಗಳಿಗೆ ಅನುಮೋದನೆ ದೊರೆತಿದೆ. ಜಿಲ್ಲೆಯ ೨೦ ಸಾವಿರ ಜನರಿಗೆ ಕಂದಾಯ ಹಕ್ಕುಪತ್ರ ಹಾಗೂ ೧೦ ಸಾವಿರ ಜನರಿಗೆ ಇ-ಪೌತಿ ಹಾಗೂ ಇತರ ಸವಲತ್ತುಗಳನ್ನು ವಿತರಣೆ ಮಾಡಲಾಗುವುದು ಎಂದು ಹೇಳಿದರು.ಕಂದಾಯ ಗ್ರಾಮದ ಹಕ್ಕು ಪತ್ರ, ಇ-ಪಾವತಿ ಖಾತೆ, ದರಖಾಸ್ತು ಪೋಡಿ, ಬಗರ್ ಹುಕುಂ ಹಕ್ಕುಪತ್ರ ವಿತರಣೆ ಹಾಗೂ ಪೋಡಿಮುಕ್ತ ಗ್ರಾಮ ಅಭಿಯಾನ ನಡೆಯಲಿದೆ. ರಾಜ್ಯಾದ್ಯಂತ ಒಂದು ಲಕ್ಷ ಕಂದಾಯ ಗ್ರಾಮ ಹಕ್ಕುಪತ್ರ (೯೪ ಡಿ) ವಿತರಣೆಯ ಗುರಿ ಹೊಂದಲಾಗಿದೆ. ಹಾವೇರಿ ಜಿಲ್ಲೆಯ ೩೧ ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಿದ್ದು, ಅದರಲ್ಲಿ ೨೧ ಸಾವಿರ ಕಂದಾಯ ಗ್ರಾಮ ಹಕ್ಕುಪತ್ರ ನೀಡಲಾಗುತ್ತದೆ ಎಂದು ವಿವರಿಸಿದರು.ಕಾರ್ಯಕ್ರಮದ ಸಿದ್ಧತೆ ಹಾಗೂ ಸವಲತ್ತುಗಳ ವಿತರಣೆ ಬಗ್ಗೆ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಆನ್‌ಲೈನ್ ಸಭೆ ಆಯೋಜನೆ ಮಾಡಲಾಗಿದೆ. ಆನ್‌ಲೈನ್‌ಗಿಂತ ನೇರವಾಗಿ ಸಭೆ ನಡೆಸುವುದು ಹೆಚ್ಚು ಪರಿಣಾಮಕಾರಿಯಾಗಿದ್ದು, ಮತ್ತೊಮ್ಮೆ ಸಭೆ ಆಯೋಜನೆ ಮಾಡುವ ಉದ್ದೇಶವಿದೆ ಎಂದು ಹೇಳಿದರು.ವಿಜಯನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಶಾಮಿಯಾನಾ ಗುತ್ತಿಗೆ ಪಡೆದವರು ಯಾರು? ಎಂಬ ಬಗ್ಗೆ ಮಾಹಿತಿ ಪಡೆದ ಸಚಿವರು, ವೇದಿಕೆ ನಿರ್ಮಾಣದ ಜವಾಬ್ದಾರಿಯನ್ನು ಯಾರು ನಿರ್ವಹಣೆ ಮಾಡುತ್ತಿದ್ದಾರೆ. ಅವರಿಗೆ ಸರಿಯಾದ ಮಾಹಿತಿ ಕೊಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಅಪರ ಜಿಲ್ಲಾಧಿಕಾರಿ ಡಾ.ಎಲ್. ನಾಗರಾಜ್, ಎಸ್ಪಿ ಯಶೋದಾ ವಂಟಗೋಡಿ, ಜಿಪಂ ಸಿಇಒ ರುಚಿ ಬಿಂದಲ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಎನ್.ಎನ್. ಪಾಟೀಲ ಮತ್ತಿತರ ಅಧಿಕಾರಿಗಳು ಇದ್ದರು.

ತ್ವರಿತವಾಗಿ ಕೆಲಸ ಮಾಡಿ: ವೇದಿಕೆ ನಿರ್ಮಾಣ ಸ್ಥಳದಲ್ಲಿನ ಕೆಲಸ ಪರಿಶೀಲಿಸಿದ ಸಚಿವರು, ಈ ವೇಳೆಗೆ ವೇದಿಕೆ ನಿರ್ಮಾಣ ಆರಂಭವಾಗಬೇಕಿತ್ತು. ವಿಳಂಬವಾದರೆ ಕೊನೆಯ ಹಂತದಲ್ಲಿ ಸಮಸ್ಯೆಯಾಗಬಹುದು. ಹೀಗಾಗಿ ಬೇಗ ಕೆಲಸ ಮಾಡಿಸಬೇಕು ಎಂದು ಸೂಚನೆ ನೀಡಿದರು.ದ್ವಿಚಕ್ರವಾಹನ ಮತ್ತಿತರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ಗಣ್ಯರು, ಅತಿ ಗಣ್ಯರ ವಾಹನಗಳಿಗೆ ಪ್ರತ್ಯೇಕ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ವೇದಿಕೆಯ ಸಮೀಪದಲ್ಲೇ ಗಣ್ಯರ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡುವುದು ಸೂಕ್ತ ಎಂದು ಸಲಹೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದುರ್ಘಟನೆಗಳ ಪ್ರಚಾರದಿಂದ ಪ್ರವಾಸೋದ್ಯಮಕ್ಕೆ ಹಿನ್ನಡೆ: ಹಿಟ್ನಾಳ
ಮತದಾನ ಮಹತ್ವದ ಕುರಿತು ಯುವ ಜನತೆಗೆ ಜಾಗೃತಿ ಅಗತ್ಯ-ನ್ಯಾಯಾಧೀಶ