ಮತದಾನ ಮಹತ್ವದ ಕುರಿತು ಯುವ ಜನತೆಗೆ ಜಾಗೃತಿ ಅಗತ್ಯ-ನ್ಯಾಯಾಧೀಶ

KannadaprabhaNewsNetwork |  
Published : Jan 26, 2026, 02:30 AM IST
25ಎಚ್‌ವಿಆರ್2, 2ಎ | Kannada Prabha

ಸಾರಾಂಶ

ಮತದಾನದ ಮಹತ್ವ ಕುರಿತು ಯುವ ಜನತೆಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಯುವ ಸಮೂಹ ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಹಾಗೂ ಮತದಾನ ಕುರಿತು ಇತರರಿಗೆ ತಿಳಿವಳಿಕೆ ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿರಾದಾರ ದೇವೇಂದ್ರಪ್ಪ ಎನ್. ಅವರು ಹೇಳಿದರು.

ಹಾವೇರಿ: ಮತದಾನದ ಮಹತ್ವ ಕುರಿತು ಯುವ ಜನತೆಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಯುವ ಸಮೂಹ ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಹಾಗೂ ಮತದಾನ ಕುರಿತು ಇತರರಿಗೆ ತಿಳಿವಳಿಕೆ ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿರಾದಾರ ದೇವೇಂದ್ರಪ್ಪ ಎನ್. ಅವರು ಹೇಳಿದರು.ನಗರದ ಗುರುಭವನದಲ್ಲಿ ಭಾನುವಾರ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.ಭಾರತ ಚುನಾವಣಾ ಆಯೋಗವು 1950ರಲ್ಲಿ ಜಾರಿಗೆ ಬಂದಿತು. ಎಂ.ಪಿ., ಎಂ.ಎಲ್.ಎ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುವ ವ್ಯಕ್ತಿಗೆ ಮತಹಾಕಬೇಕು. ಮತದಾನ ಮಾಡಲು ಮೊದಲು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ 18 ವರ್ಷ ಪೂರೈಸಿದ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವ ನಮಗೆ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಅವುಗಳ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಭಾರತ ಚುನಾವಣಾ ಆಯೋಗ ಬಗ್ಗೆ ಶೇಷನ್, ಲೋಕಾಯುಕ್ತ ಬಗ್ಗೆ ವೆಂಕಟಾಚಲ್ ಹಾಗೂ ಪೊಲೀಸ್ ಇಲಾಖೆ ಬಗ್ಗೆ ಸಾಂಗ್ಲಿಯಾನ ಅಂತಹ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಇರಲಿಲ್ಲ ಅಂದರೆ ವ್ಯವಸ್ಥಿತ ಜೀವನ ನಡೆಸುವುದು ಕಷ್ಟವಾಗುತ್ತಿತ್ತು. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಯುವಜನತೆ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಬಸವಣ್ಣನವರ ವಚನ, ಡಿವಿಜಿ ಕಗ್ಗ, ಕುವೆಂಪು ಸಾಹಿತ್ಯ ಅಥವಾ ಜಿ.ಎಸ್.ಶಿವರುದ್ರಪ್ಪ ಅವರ ಕವನಗಳ ಪುಸ್ತಕ ಓದಬೇಕು ಎಂದು ಕಿವಿಮಾತು ಹೇಳಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ ಮಾತನಾಡಿ, ಇಲ್ಲಿ ಸೇರಿರುವ ವಿದ್ಯಾರ್ಥಿಗಳು ಬರುವ ದಿನಗಳಲ್ಲಿ ಉದ್ಯೋಗವಂತರು, ಉದ್ಯಮಿಗಳು, ಪ್ರಗತಿಪರ ರೈತ ಹಾಗೂ ರಾಜಕೀಯಕ್ಕೂ ಬರಬಹುದು, ಆಗ ತಾವು ಯೋಗ್ಯ ರಾಜಕಾರಣಿಗಳಾಗಬೇಕು. 18 ವರ್ಷದ ಪೂರೈಸಿದವರು ಮೊದಲು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಚುನಾವಣೆ ಸಮಯದಲ್ಲಿ ಯೋಗ್ಯ ವ್ಯಕ್ತಿಗೆ ಮತದಾನ ಮಾಡಬೇಕು. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಹಾಗೂ ನಿಮ್ಮ ಅಕ್ಕಪಕ್ಕದಲ್ಲಿ ಗಲಾಟೆಗಳು ನಡೆಯುತ್ತಿದ್ದರೆ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ 1098 ಹಾಗೂ 112 ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡಬಹುದು. ಯಾವುದೇ ಕಾರಣಕ್ಕೂ ಸುಳ್ಳು ಮಾಹಿತಿ ನೀಡಬೇಡಿ, ನಿಖರ ಪ್ರಕರಣಗಳ ಕುರಿತು ಮಾತ್ರ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಡಾ.ಎಲ್.ನಾಗರಾಜ ಮಾತನಾಡಿ, ಭಾರತ ಚುನಾವಣಾ ಆಯೋಗವು 25-01-1950 ರಂದು ಅಧಿಕೃತವಾಗಿ ಸ್ಥಾಪನೆಗೊಂಡಿತು. ಮುಖ್ಯವಾಗಿ ಯುವ ಮತದಾರರನ್ನು ಮತದಾನದ ಪ್ರಕ್ರಿಯೆ ಬಗ್ಗೆ ಜಾಗೃತಿ ಮೂಡಿಸುವುದು ಈಗ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಪ್ರಜಾ ಪ್ರತಿನಿಧ್ಯ ಕಾಯ್ದೆ 1950-51ರಲ್ಲಿ ಜಾರಿಯಾಯಿತು. ಜಿಲ್ಲೆಯಲ್ಲಿ 6,84,459 ಪುರುಷ ಹಾಗೂ 6,69002 ಮಹಿಳಾ ಸೇರಿ 13,53,498 ಮತದಾರರಿದ್ದಾರೆ. ಈ ಪೈಕಿ 38,278 ಯುವ ಮತದಾರರಿದ್ದಾರೆ. ಜಿಲ್ಲೆಯ ಜನಸಂಖ್ಯೆಗೆ ಮತದಾರರ ಅನುಪಾತ ಶೇ.72ರಷ್ಟಿದೆ ಹಾಗೂ ಲಿಂಗಾನುಪಾತ 977 ರಷ್ಟು ಇದೆ. 1482 ಮತಗಟ್ಟೆಗಳಿದ್ದು, 905 ಸರಾಸರು ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.ದೇಶದ ಪ್ರಜಾಪ್ರಭುತ್ವ ಗಟ್ಟಿಯಾಗಬೇಕಾದರೆ ದೇಶದ ನಾಗರಿಕರು ಪ್ರಜಾಪ್ರಭುತ್ವ ಬಲಪಡಿಸಬೇಕು. ಎಲ್ಲರೂ ತಪ್ಪದೇ ಮತದಾನ ಪ್ರಕ್ರಿಯೆಲ್ಲಿ ಭಾಗವಹಿಸಬೇಕು. 18 ವರ್ಷ ಪೂರೈಸಿದ ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲವಾದಲ್ಲಿ ಕೂಡಲೇ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಮತದಾನದ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ಕ್ಲಬ್‌ಗಳನ್ನು ರಚನೆ ಮಾಡಲಾಗಿದೆ. ಮತಗಟ್ಟೆ ಅಧಿಕಾರಿಗಳು ಹಾಗೂ ಚುನಾವಣಾ ಆ್ಯಪ್ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು. ಚುನಾವಣೆ ಪ್ರಕ್ರಿಯೆಗಳು ವರ್ಷದ 12 ತಿಂಗಳು ನಿರಂತರ ನಡೆಯುತ್ತಿರುತ್ತದೆ. ಆದರೆ ಸಾರ್ವಜನಿಕರಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಣುತ್ತದೆ. ಜಾತಿ, ಧರ್ಮ, ಪುರುಷ-ಮಹಿಳೆ ಎನ್ನದೇ ಎಲ್ಲರಿಗೂ ಮತದಾನದ ಸಮಾನ ಹಕ್ಕು ನೀಡಲಾಗಿದೆ. ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೇ ಮತದಾನಮಾಡಬೇಕು ಎಂದರು.ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಆಯೋಜಿಸಿದ ಪ್ರಬಂಧ, ಭಿತ್ತಿಪತ್ರ ಒಳಗೊಂಡಂತೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಮತದಾನ ಗುರುತುಪತ್ರ ವಿತರಣೆ: ಇದೇ ಸಂದರ್ಭದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾದ ಮತದಾರರಿಗೆ ಮತದಾನ ಗುರುತುಪತ್ರ ವಿತರಣೆ ನೀಡಲಾಯಿತು. ಮತದಾರರ ನೋಂದಣಿಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಇ.ಎಲ್.ಸಿ. ನೋಡಲ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮಕ್ಕೂ ಮೊದಲು ಹಾವೇರಿ ನಗರದ ಮೈಲಾರ ಮಹದೇವ ವೃತ್ತದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಲ್. ನಾಗರಾಜ ಅವರು ಮತದಾನ ದಿನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಜಾಗೃತಿ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗುರುಭವನ ತಲುಪಿತು. ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಶೈಲಜಾ ಎಚ್.ವಿ., ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ. ಪುನೀತ್, ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಡಿವೈಎಸ್‌ಪಿ ಗಿರೀಶ ತಳಕಟ್ಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಚಂದ್ರಪ್ಪ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮೋಹನ ದಂಡಿನ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಶೋಕ ಶಾಸ್ತ್ರಿ, ತಹಸೀಲ್ದಾರ್ ಶರಣಮ್ಮ , ಚುನಾವಣಾ ತಹಸೀಲ್ದಾರ್ ಅಮೃತಗೌಡ ಪಾಟೀಲ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದುರ್ಘಟನೆಗಳ ಪ್ರಚಾರದಿಂದ ಪ್ರವಾಸೋದ್ಯಮಕ್ಕೆ ಹಿನ್ನಡೆ: ಹಿಟ್ನಾಳ
ಸಾಧನಾ ಸಮಾವೇಶದಲ್ಲಿ ಒಂದು ಲಕ್ಷ ಜನರಿಗೆ ಹಕ್ಕುಪತ್ರ ವಿತರಣೆ