ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ನರಸಿಂಹ ಜಯಂತಿ ನಿಮಿತ್ತ ಲಕ್ಷ್ಮೀನೃಸಿಂಹ ದೇವರ ರಥೋತ್ಸವ ಭಕ್ತರ, ಶಿಷ್ಯರ ಹರ್ಷೋದ್ಗಾರದ ನಡುವೆ ನಡೆಯಿತು.
ಆಕರ್ಷಕ ಮದ್ದುಗುಂಡು ಪ್ರದರ್ಶನ ಗಮನ ಸೆಳೆಯಿತು. ಧಾರ್ಮಿಕ ವಿಧಾನಗಳಲ್ಲಿ ಮೃಗಬೇಟೆ, ಅಷ್ಟಾವಧಾನ ಸೇವೆ ಸಮರ್ಪಣೆ ಆದವು.
ಸ್ಬರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ, ಕಿರಿಯ ಸ್ವಾಮೀಜಿ ಆನಂದಬೋಧೇಂದ್ರ ಸರಸ್ವತೀ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಕಾರ್ಯದರ್ಶಿ ಜಿ.ವಿ. ಹೆಗಡೆ ಗೊಡವೆಮನೆ, ವ್ಯವಸ್ಥಾಪಕ ದತ್ತಾತ್ರಯ ಹೆಗಡೆ ಲಿಂಗದಕೋಣ ಇತರರು ಇದ್ದರು.ಸ್ವರ್ಣವಲ್ಲೀ ರಥದ ನಿರ್ಮಾಣ ಹಾಗೂ ರಥದ ವೇಗ ನಿಯಂತ್ರಿಸುವವರು ಪರಂಪರೆಯಿಂದ ಮುಸ್ಲಿಂ ಸಮುದಾಯದವರೇ ಆಗಿದ್ದು, ಮಠದ ತೇರು ಸಾಮರಸ್ಯದ ಕೇಂದ್ರವಾಗಿದೆ ಎಂಬುದೂ ವಿಶೇಷವಾಗಿದೆ.
ರಥೋತ್ಸವದ ಬಳಿಕ ಸ್ವರ್ಣವಲ್ಲೀ ಯಕ್ಷ ಶಾಲ್ಮಲಾದಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಹಾಸ ಚರಿತ್ರೆ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಯಿತು.