ಹಿಪ್ಪರಗಿ ಹಿರೇಮಠದ ಸಂಭ್ರಮದ ರಥೋತ್ಸವ

KannadaprabhaNewsNetwork |  
Published : Apr 25, 2024, 01:02 AM IST
ಹಿಪ್ಪರಗಿ ಹಿರೇಮಠದ ಸಂಭ್ರಮದ ರಥೋತ್ಸವ : ಮುಗಿಲು ಮುಟ್ಟಿದ ಹರಹರ ಮಹದೇವ ಜಯಘೋಷ. | Kannada Prabha

ಸಾರಾಂಶ

ರಬಕವಿ-ಬನಹಟ್ಟಿ: ತಾಲೂಕಿನ ಹಿಪ್ಪರಗಿ ಗ್ರಾಮದ ಕೃಷ್ಣಾ ನದಿತಟದ ಪಾವನ ಕ್ಷೇತ್ರ ಹಿಪ್ಪರಗಿ ಹಿರೇಮಠದ ಜಾತ್ರಾ ಮಹೋತ್ಸವ, ಮಹಾರಥೋತ್ಸವ ಮಂಗಳವಾರ ಸಂಜೆ ಸಡಗರ ಸಂಭ್ರಮದಿಂದ ಸಾವಿರಾರು ಭಕ್ತರ ಹರ್ಷೋದ್ಗಾರದ ನಡುವೆ ಜರುಗಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತಾಲೂಕಿನ ಹಿಪ್ಪರಗಿ ಗ್ರಾಮದ ಕೃಷ್ಣಾ ನದಿತಟದ ಪಾವನ ಕ್ಷೇತ್ರ ಹಿಪ್ಪರಗಿ ಹಿರೇಮಠದ ಜಾತ್ರಾ ಮಹೋತ್ಸವ, ಮಹಾರಥೋತ್ಸವ ಮಂಗಳವಾರ ಸಂಜೆ ಸಡಗರ ಸಂಭ್ರಮದಿಂದ ಸಾವಿರಾರು ಭಕ್ತರ ಹರ್ಷೋದ್ಗಾರದ ನಡುವೆ ಜರುಗಿತು.

ಮಂಗಳವಾರ ಬೆಳಗ್ಗೆ ಲಿಂ. ಗುರು ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಶಿವಾಷ್ಟೋತ್ತರ ಶಿವನಾಮಾವಳಿ, ವಿಶೇಷ ಪೂಜೆ, ಅಲಂಕಾರ, ಮಹಾಮಂಗಳಾರತಿ ಜರುಗಿತು. ನಂತರ ಬೆಳಗ್ಗೆ ೧೦ಕ್ಕೆ ಸಕಲ ವಾದ್ಯಗಳೊಂದಿಗೆ ಲಿಂಗೈಕ್ಯ ಶ್ರೀಗಳ ರಜತಮೂರ್ತಿ ಪಲ್ಲಕ್ಕಿ ಉತ್ಸವ, ರಥದ ಕಳಸ-ಹಗ್ಗ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರೀ ಮಠಕ್ಕೆ ತಲುಪಿ ಸಂಪನ್ನಗೊಂಡಿತು. ಅಲ್ಲದೆ, ಮಧ್ಯಾಹ್ನದ ವೇಳೆ ಮಹಾಪ್ರಸಾದ ಜರುಗಿತು.

ಮುಸ್ಸಂಜೆ ೬ರ ವೇಳೆಗೆ ಲಿಂ. ಶ್ರೀಗುರು ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳ ರಥೋತ್ಸವ ಜರುಗಿತು. ಈ ಸಂದರ್ಭದಲ್ಲಿ ಮುಗಿಲು ಮುಟ್ಟಿದ ಹರಹರ ಮಹಾದೇವ ಜಯಘೋಷಗಳು, ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾವiಗಳ ಸಾವಿರಾರು ಭಕ್ತರು ಆಗಮಿಸಿ ಬೆಂಡು ಬೆತ್ತಾಸು, ಉತ್ತತ್ತಿ ರಥಕ್ಕೆ ಹಾರಿಸಿ ಜಯಘೋಷ ಮಾಡಿ ಭಕ್ತಿ ಸಮರ್ಪಿಸಿದರು. ನೂರಾರು ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ, ಕರಡಿ ವಾದ್ಯ ಮೇಳ, ಡೊಳ್ಳಿನ ಕೈಪಟ್ಟು, ಕಂಡ್ಯಾಳ ಬಾಸಿಂಗು, ನಂದಿಕೋಲು, ಕುದುರೆ ಕುಣಿತ, ಚಿನಿಕೋಲು ಮೇಳ ಮುಂತಾದ ಜನಪದ ಕಲಾವಾದ್ಯ ಮೇಳಗಳು ರಥೋತ್ಸವಕ್ಕೆ ಮೆರಗು ತಂದವು.

ಶ್ರೀಶೈಲ ಜಗದ್ಗುರು ಶ್ರೀ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹಾಗೂ ಹಿಪ್ಪರಗಿಯ ಚನ್ನಸಂಗಮೇಶ್ವರ ಮಠದ ಶ್ರೀಸಿದ್ದಲಿಂಗ ಸಾಧು ಮಹಾರಾಜರು ರಥೋತ್ಸವಕ್ಕೆ ಚಾಲನೆ ನೀಡಿದರು. ಜಮಖಂಡಿ ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮಿಗಳು, ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಬನಹಟ್ಟಿ ಶರಣಬಸವ ಶಿವಾಚಾರ್ಯ ಸ್ವಾಮಿಗಳು, ಗುಣದಾಳ ಕಲ್ಯಾಣ ಹಿರೇಮಠದ ಡಾ.ವಿವೇಕಾನಂದ ದೇವರು, ಶೆಗುಣಶಿ ವಿರಕ್ತ ಮಠದ ಮಹಾಂತ ದೇವರು, ಹುನ್ನೂರಿನ ವಿಶ್ವನಾಥ ಶಾಸ್ತ್ರಿಗಳು, ಕೊಣ್ಣೂರ ಹೊರಗಿನಮಠದ ಶ್ರೀ ವಿಶ್ವಪ್ರಭುದೇವರು, ಹಿಪ್ಪರಗಿ ಹಿರೇಮಠದ ಅಭಿಷೇಕ ದೇವರು ಸೇರಿದಂತೆ ನಾಡಿನ ಹರಗುರು ಚರಮೂರ್ತಿಗಳು ಹಾಜರಿದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''