ನಾಳೆ ವರವಿ ಶ್ರೀ ಮೌನೇಶ್ವರ ಮಠದಲ್ಲಿ ರಥೋತ್ಸವ

KannadaprabhaNewsNetwork |  
Published : Aug 17, 2025, 01:40 AM IST
ಪೋಟೊ-೧೬ ಎಸ್.ಎಚ್.ಟಿ. ೨ಕೆ-ಪವಾಡ ಪುರುಷ ವರವಿಯ ಶ್ರೀ ಮೌನೇಶ್ವರರ ಚಿತ್ರ. | Kannada Prabha

ಸಾರಾಂಶ

ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ವರವಿ ಮೌನೇಶ್ವರ ಮಠದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರ ಆ.18 ರಂದು ಆ.೧೮ರಂದು ಸಾಯಂಕಾಲ ೫-೧೫ ಗಂಟೆಗೆ ಸಾಂಪ್ರದಾಯಕವಾಗಿ ಪ್ರತಿ ವರ್ಷದಂತೆ ರಥೋತ್ಸವ ನಡೆಯಲಿದೆ.

ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ: ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ವರವಿ ಮೌನೇಶ್ವರ ಮಠದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರ ಆ.18 ರಂದು ಆ.೧೮ರಂದು ಸಾಯಂಕಾಲ ೫-೧೫ ಗಂಟೆಗೆ ಸಾಂಪ್ರದಾಯಕವಾಗಿ ಪ್ರತಿ ವರ್ಷದಂತೆ ರಥೋತ್ಸವ ನಡೆಯಲಿದೆ.

ಆ. ೧೯ರ ಸಂಜೆ ೪ ಗಂಟೆಗೆ ಕಡುಬಿನ ಕಾಳಗ, ಆ. ೨೦ರಂದು ಶ್ರೀ ಮೌನೇಶ್ವರರ ಪಲ್ಲಕ್ಕಿ ಛಬ್ಬಿ ಗ್ರಾಮಕ್ಕೆ ಹೋಗಿ ಬರುವುದು ಹಾಗೂ ಆ. ೨೧ರಂದು ಮೌನೇಶ್ವರರ ಪಲ್ಲಕ್ಕಿ ಅಲಾವಿ ಗುಡ್ಡಕ್ಕೆ ಹೋಗಿ ಬರಲಿದೆ. ಮಹಾ ತಪಸ್ವಿ ಮೌನೇಶ್ವರರ ಸಾಧನೆ, ಪವಾಡ, ಚಮತ್ಕಾರದ ಬಗ್ಗೆ ಹಲವಾರು ಪ್ರತೀತಿಗಳಿವೆ. ಈ ಭಾಗದ ವರವಿಯಲ್ಲಿ ನೆಲೆ ನಿಂತಿರುವ ಮೌನೇಶ್ವರ ಸಿದ್ಧ ಪುರುಷರಾಗಿ ಜಗದ ಉದ್ಧಾರಕ್ಕಾಗಿ ಹಲವಾರು ಕಾರ್ಯ ಕೈಗೊಂಡಿದ್ದಾರೆ.

ಮೌನೇಶ್ವರರು ಎಲ್ಲರಂತೆ ತಾಯಿ ಗರ್ಭದಲ್ಲಿ ಹುಟ್ಟಿ ಬರಲಿಲ್ಲ. ಭಕ್ತರ ಮನೋಕಾಮನೆಯನ್ನು ಈಡೇರಿಸಲೆಂದು ಪರಮೇಶ್ವರನೇ ಮಗುವಿನ ರೂಪ ಧಾರಣ ಮಾಡಿಸಿಕೊಂಡು ಮಾತೆಯ ಮಡಿಲಲ್ಲಿ ಮೂಡಿ ನಿಂತ ಮಹಾನ್ ವ್ಯಕ್ತಿ ಮೌನೇಶ್ವರ ಎಂಬ ನಂಬಿಕೆ ಭಕ್ತರದು.ಮುಗ್ಧ ಸಾಧ್ವಿಯ ದೈವಭಕ್ತಿ ನಿಶ್ಚಿತ ಬಂಜೆತನದಿಂದ ಮುಕ್ತ ಮಾಡುವ ಅಂತಃಕರುಣೆಯು ಸಾಕ್ಷಾತ್ಕಾರವಾದ ವಿಶಿಷ್ಟ ಜನನ ಅವರದು. ಆದರೂ ಸಹಜ ಮಾನವರಂತೆ ಬೆಳೆದು ಬಾಲ್ಯದಲ್ಲಿಯೇ ಅನೇಕ ಪವಾಡಗಳನ್ನು ತೋರಿಸಿ ಭಕ್ತರ ಆಕರ್ಷಿಸಿಕೊಂಡು ಜ್ಞಾನೋಪದೇಶಗೈದ ಸ್ಥಳಗಳಲ್ಲಿ ಶಿರಹಟ್ಟಿ ತಾಲೂಕಿನ ಪವಿತ್ರ ವರವಿ ಕ್ಷೇತ್ರವೂ ಒಂದು. ಅಖಂಡ ಭಾರತವನ್ನು ಸುತ್ತಾಡಿದ ಮೌನೇಶ್ವರರು ಅನೇಕ ಪವಾಡಗಳಿಂದ ಪ್ರಸಿದ್ಧರಾಗಿದ್ದಾರೆ.

ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲದೇ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಮತ್ತು ಉತ್ತರ ಹಿಂದೂಸ್ಥಾನದಲ್ಲಿಯೂ ಕೂಡ ಅದ್ಭುತ ಪವಾಡಗಳನ್ನು ಮೆರೆದು ಶಿಷ್ಯ ಭಕ್ತಕೋಟಿಯನ್ನು ನಿರ್ಮಿಸಿಕೊಂಡು ನಿತ್ಯ ನಿರ್ಮಲ ಪರಂಜ್ಯೋತಿ ಸ್ವರೂಪವೇ ಮೌನೇಶ್ವರರು.

ಮೌನೇಶ್ವರರು ಬಿಜಾಪೂರದಿಂದ ಶಿರಹಟ್ಟಿಯ ಫಕೀರೇಶ್ವರ ಮಠಕ್ಕೆ ಬಂದು ಚನ್ನವೀರಸ್ವಾಮಿಯನ್ನು ಫಕೀರೇಶ್ವರರೆಂದು ಮಠಕ್ಕೆ ಅರ್ಪಿಸಿ ನಂತರ ಶಿಷ್ಯ ಪರಿವಾರದೊಂದಿಗೆ ಹೊರಟು ಸಮೀಪದ ವರವಿ ಗ್ರಾಮದ ಹೊರವಲಯದಲ್ಲಿ ಸಾಗುತ್ತಿದ್ದಾಗ ನುಣುಪಾದ ತುಂಡು ಶಿಲೆಗೆ ಪಾದ ತಗುಲಿತು. ಇದೇನು ಸ್ವಾಮಿಗಳೇ ಮೈಮನ ತುಂಬ ಕಣ್ಣುಗಳನ್ನು ಹೊತ್ತ ನೀವು ಈ ಶಿಲೆಯನ್ನು ಎಡವಬಹುದೇ ಎಂದು ಪ್ರಶ್ನಿಸಿದರು. ಆಗ ಮೌನೇಶ್ವರರು ನಾನು ಎಡವಿದ್ದು ಶಿಲೆಯಲ್ಲ ಅದು ಉದ್ಭವ ಲಿಂಗವಾಗಿದೆ. ನಾನು ಈ ಲಿಂಗದಲ್ಲಿ ಸ್ಥಿರವಾಗಿ ನೆಲೆಸಿ ಭಕ್ತರ ಮನೋಭಿಲಾಷೆಯನ್ನು ಪೂರೈಸುವೆ. ಮುಂದೊಂದು ದಿನ ಈ ಗ್ರಾಮ ಪುಣ್ಯ ಕ್ಷೇತ್ರವಾಗಿ ಮೆರೆಯುವುದು ಎಂದು ನುಡಿದರಂತೆ. ಅದೇ ದಿನ ರಾತ್ರಿ ವೊಬಾಪೂರದ ಬಾದಷಹನ ಸ್ವಪ್ನದಲ್ಲಿ ಕಾಣಿಸಿಕೊಂಡು ದೇವಾಲಯ ಕಟ್ಟಿಸುವಂತೆ ಅಪ್ಪಣೆ ಮಾಡಿದರು. ಕೂಡಲೇ ಬಾದಷಹನು ಗುರುವಿನ ಆಜ್ಞೆಯಂತೆ ಕುಶಲ ಕಲಾ ಕಾರ್ಮಿಕರನ್ನು ಕಳುಹಿಸಿ ಕಟ್ಟಡ ನಿರ್ಮಿಸಲು ಆದೇಶ ಮಾಡಿದರಂತೆ. ದೇವಾಲಯ ಪೂರ್ಣಗೊಂಡ ಬಳಿಕ ಮೌನೇಶ್ವರರ ಆಜ್ಞೆ ಪಡೆದುಕೊಂಡು ದೇವಾಲಯದ ಉದ್ಘಾಟನೆಗೆ ಆಗಮಿಸಿ ಆಶೀರ್ವಾದ ಪಡೆದುಕೊಂಡು ಮರಳಿದನು ಎಂದು ಹೇಳಲಾಗುತ್ತಿದೆ. ಮೌನೇಶ್ವರರು ಲಿಂಗಕ್ಕೆ ಎಡವಿದ್ದು ಶ್ರಾವಣ ಮಾಸದ ಕೊನೆಯ ಸೋಮವಾರವಾದ್ದರಿಂದ ಆ ದಿನವನ್ನು ಜಾತ್ರೆಯ ದಿನವನ್ನಾಗಿ ಆಚರಿಸುವರು. ವಿಜೃಂಭಣೆಯಿಂದ ಈ ಜಾತ್ರೆಗೆ ನಾಡಿನ ಎಲ್ಲ ಭಾಗದಿಂದ ಭಕ್ತಜನ ಬಂದು ಗುರುವಿನ ಆಶೀರ್ವಾದ ಪಡೆಯುವರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ