ಪಡಿತರ ಅಕ್ಕಿ ಅಕ್ರಮ- ಸಿಐಡಿ ತನಿಖೆಗೆ ಸದನದಲ್ಲಿ ಶಾಸಕ ಕಂದಕೂರು ಆಗ್ರಹ

KannadaprabhaNewsNetwork | Published : Dec 13, 2023 1:00 AM

ಸಾರಾಂಶ

ಜಿಲ್ಲೆಯಲ್ಲಿ ನಡೆದ ಅನ್ನಭಾಗ್ಯ ಅಕ್ಕಿ ಅಕ್ರಮ ಪ್ರಕರಣ ಸಿಐಡಿ ತನಿಖೆಗೆ ವಹಿಸುವಂತೆ ಮಂಗಳವಾರ ಬೆಳಗಾವಿ ಅಧಿವೇಶನದಲ್ಲಿ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸಾದ ಅನ್ನಭಾಗ್ಯ ಯೋಜನೆಯಲ್ಲಿನ ಕೋಟ್ಯಂತರ ರುಪಾಯಿ ಅಕ್ಕಿ ದಾಸ್ತಾನು ಕಳವಾಗಿದೆ. ಅಕ್ರಮ ಪ್ರಕರಣಗಳು ಜಿಲ್ಲೆಯಲ್ಲಿ ಪದೇ ಪದೆ ನಡೆಯುತ್ತಿರುವುದಕ್ಕೆ ಲಗಾಮು ಹಾಕಬೇಕು ಎಂದು ಅವರು ಆಗ್ರಹಿಸಿದರು.

ಬೆಳ‍ಗಾವಿ ಅಧಿವೇಶನದಲ್ಲಿ ಪ್ರತಿಧ್ವನಿಸಿದ ಯಾದಗಿರಿ ಅಕ್ಕಿ ಅಕ್ರಮ ಪ್ರಕರಣ

ಅಕ್ಕಿ ಕಳ್ಳರಿಗೆ ಡಿವೈಎಸ್ಪಿಯಿಂದಲೇ ಸನ್ಮಾನ: ಶಾಸಕ ಕಂದಕೂರು ಆರೋಪ

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯಲ್ಲಿ ನಡೆದ ಅನ್ನಭಾಗ್ಯ ಅಕ್ಕಿ ಅಕ್ರಮ ಪ್ರಕರಣ ಸಿಐಡಿ ತನಿಖೆಗೆ ವಹಿಸುವಂತೆ ಮಂಗಳವಾರ ಬೆಳಗಾವಿ ಅಧಿವೇಶನದಲ್ಲಿ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸಾದ ಅನ್ನಭಾಗ್ಯ ಯೋಜನೆಯಲ್ಲಿನ ಕೋಟ್ಯಂತರ ರುಪಾಯಿ ಅಕ್ಕಿ ದಾಸ್ತಾನು ಕಳವಾಗಿದೆ. ಅಕ್ರಮ ಪ್ರಕರಣಗಳು ಜಿಲ್ಲೆಯಲ್ಲಿ ಪದೇ ಪದೆ ನಡೆಯುತ್ತಿರುವುದಕ್ಕೆ ಲಗಾಮು ಹಾಕಬೇಕು ಎಂದು ಅವರು ಆಗ್ರಹಿಸಿದರು.

ಅಕ್ಕಿ ಕಳ್ಳತನದ ಆರೋಪಿಗೆ ಡಿವೈಎಸ್ಪಿ ದರ್ಜೆ ಅಧಿಕಾರಿಯೊಬ್ಬರು ಸನ್ಮಾನ ಮಾಡಿದ್ದಾರೆ. ಈಗ ಮತ್ತೆ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಇದೇ ಅಧಿಕಾರಿ ತನಿಖೆ ನೇತೃತ್ವ ವಹಿಸಿದ್ದು, ಇಂತಹವರಿಂದ ಹೇಗೆ ಪ್ರಾಮಾಣಿಕ ತನಿಖೆ ಸಾಧ್ಯ ಎಂದು ಶಂಕೆ ವ್ಯಕ್ತಪಡಿಸಿದ ಶಾಸಕರು, ಈ ಅಕ್ರಮದಲ್ಲಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಕೈವಾಡದ ಬಗ್ಗೆ ಆರೋಪಿಸಿದರು.

ಅಕ್ಕಿ ಅಕ್ರಮದ ಆರೋಪಿಗೆ ಸನ್ಮಾನ ಮಾಡಿದ ಸುರಪುರ ಡಿವೈಎಸ್ಪಿ ವಿರುದ್ಧ ಈ ಹಿಂದೆ ಯಮಕನಮರಡಿಯಲ್ಲಿ ಚಿನ್ನ ಕಳವು ಆರೋಪ ಕೇಳಿ ಬಂದಿತ್ತು. ಸಿಐಡಿ ತನಿಖೆಯೂ ನಡೆದಿದೆ. ಹೀಗಿರುವಾಗ, ಈಗ ಟಿಎಪಿಸಿಎಂಎಸ್‌ ಗೋದಾಮಿನಿಂದ 3 ಕೋಟಿ ರು. ಅಕ್ಕಿ ಕಳ್ಳತನದ ಪ್ರಕರಣದಲ್ಲಿ ಇದೇ ಸುರಪುರ ಡಿವೈಎಸ್ಪಿ ನಡೆಸುವ ತನಿಖೆ ಮೇಲೆ ವಿಶ್ವಾಸವಿಲ್ಲ ಎಂದು ವಿವರಿಸಿದರು.

ಏನಿದು ಅಕ್ಕಿ ಅಕ್ರಮ ಪ್ರಕರಣ?

ಜಿಲ್ಲೆಯ ಶಹಾಪುರದ ಸರ್ಕಾರಿ ಗೋದಾಮಿನಿಂದ 2 ಕೋಟಿ ರು.ಗಳಿಗೂ ಹೆಚ್ಚಿನ ಮೌಲ್ಯದ, 6 ಸಾವಿರ ಕ್ವಿಂಟಲ್‌ ಪಡಿತರ ಅಕ್ಕಿ ನಾಪತ್ತೆಯಾಗಿತ್ತು. ಈ ಬಗ್ಗೆ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆದರೆ, ಈ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿ ಹಾಗೂ ಮತ್ತಿತರೆ ಪೊಲೀಸ್‌ ಅಧಿಕಾರಿಗಳ ತಂಡವು ಅಕ್ಕಿ ಅಕ್ರಮದ ಆರೋಪಿಯೊಬ್ಬರನ್ನು ಸನ್ಮಾನಿಸಿದ್ದ ‍ಫೋಟೋ ವೈರಲ್ ಆಗಿ ಈ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಜಿಲ್ಲೆಯಲ್ಲಿನ ಅಕ್ಕಿ ಅಕ್ರಮ ಪ್ರಕರಣಗಳ ಆರೋಪಿಗೆ ಪೊಲೀಸರೇ ಸನ್ಮಾನಿಸಿರುವುದು ನೋಡಿದರೆ, ಇಂತಹವರಿಂದ ಪ್ರಕರಣದ ಪ್ರಾಮಾಣಿಕ ತನಿಖೆ ಸಾಧ್ಯವೆ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಮೂಡಿದ್ದವು.

ಹಿರಿಯ ಪೊಲೀಸ್‌ ಅಧಿಕಾರಿಗಳ ಕಾರ್ಯವೈಖರಿ ಇಲಾಖೆಯಲ್ಲೇ ಇರುಸುಮುರುಸು ಮೂಡಿಸಿತ್ತು. ಪ್ರಭಾವಿಯಾಗಿರುವ ಆರೋಪಿಯನ್ನು ಅಕ್ರಮ ಪ್ರಕರಣದಿಂದ ಬಚಾವ್ ಮಾಡಲು ಬೇರೊಬ್ಬರನ್ನು ಈ ಪ್ರಕರಣದಲ್ಲಿ ಬಲಿಪಶು ಮಾಡುವ ಸಂಚು ನಡೆದಿದೆ ಎಂಬ ಮಾತುಗಳೂ ಕೇಳಿಬಂದಿವೆ. ಡಿ.4 ರಂದು "ಕನ್ನಡಪ್ರಭ "ದಲ್ಲಿ ಈ ಬಗ್ಗೆ ವಿಶೇಷ ವರದಿ ಪ್ರಕಟಗೊಂಡಿತ್ತು.

Share this article