ಕನ್ನಡಪ್ರಭ ವಾರ್ತೆ ಮಡಿಕೇರಿ ವೈಚಾರಿಕ, ವೈಜ್ಞಾನಿಕತೆ, ಜೀವನ ಮೌಲ್ಯವನ್ನು ಗೌರಮ್ಮ ಸಾಹಿತ್ಯದಲ್ಲಿ ಕಾಣಬಹುದಾಗಿದೆ. ಕನ್ನಡ ಸಾರಸ್ವತ ಲೋಕಕ್ಕೆ ಗೌರಮ್ಮ ಕೊಡುಗೆ ಅಪಾರ ಎಂದು ಕೊಡಗು ವಿಶ್ವ ವಿದ್ಯಾನಿಲಯದ ಚಿಕ್ಕಅಳುವಾರ ಜ್ಞಾನಕಾವೇರಿ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹ್ಮದ್ ಹೇಳಿದ್ದಾರೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ನಡೆದ 2022-23 ನೇ ಸಾಲಿನ 19 ನೇ ಗೌರಮ್ಮ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಕೊಡಗಿನ ಗೌರಮ್ಮ ಸ್ವಾತಂತ್ರ್ಯ ಪೂರ್ವದಲ್ಲಿ ಸಣ್ಣ ಕತೆಗಳನ್ನು ಬರೆಯುವ ಮೂಲಕ ಮಹಿಳಾ ಸಬಲೀಕರಣ, ಸಮಾಜದಲ್ಲಿ ಸಮಾನತೆ ಹೀಗೆ ಹಲವು ವಿಚಾರಗಳ ಕುರಿತು ಕನ್ನಡ ಸಾಹಿತ್ಯದಲ್ಲಿ ಬೆಳಕು ಚೆಲ್ಲಿದ್ದಾರೆ. ಬದುಕಿದ 27 ವರ್ಷದಲ್ಲಿ ಸಾಮಾಜಿಕ ಕ್ರಾಂತಿಯನ್ನೇ ಉಂಟು ಮಾಡಿದ್ದರು. ಮಹಾತ್ಮ ಗಾಂಧೀಜಿ ಭೇಟಿ ನೀಡಿದ ಸಂದರ್ಭದಲ್ಲಿ ಬಡ ವರ್ಗದವರು ಮುಖ್ಯವಾಹಿನಿಗೆ ಬರುವಂತಾಗಲು ತಮ್ಮಲ್ಲಿದ್ದ ಒಡವೆಗಳನ್ನು ಮಹಾತ್ಮ ಗಾಂಧೀಜಿಗೆ ನೀಡಿದ್ದರು ಎಂದು ಸ್ಮರಿಸಿದರು. ಸಂವೇದನಾ ಶೀಲ ಬರಹಗಾರ್ತಿ: ಜೀವನದಲ್ಲಿ ಸರಳ ಸಜ್ಜನ ಬದುಕು ನಡೆಸಿದ್ದ ಗೌರಮ್ಮ ಸಂವೇದನಾಶೀಲ ಹಾಗೂ ಕ್ರಿಯಾಶೀಲ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಸಮಾಜಮುಖಿ ಕಾರ್ಯಗಳಿಗಾಗಿ ಸದಾ ಮುಂಚೂಣಿಯಲ್ಲಿದ್ದರು ಎಂದು ಹೇಳಿದರು. ಗೌರಮ್ಮನವರ ಸಣ್ಣ ಕತೆಗಳು ಪ್ರಸ್ತುತವಾಗಿದ್ದು ಸಮಾಜಮುಖಿಯಾಗಿ ಬೆಳಕು ಚೆಲ್ಲುತ್ತದೆ ಎಂದು ಅವರು ವಿವರಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಗೌರಮ್ಮ ದತ್ತಿನಿಧಿ ಪ್ರಶಸ್ತಿಯಿಂದ ಕೊಡಗು ಜಿಲ್ಲೆಯಲ್ಲಿ ಹಲವು ಮಹಿಳಾ ಬರಹಗಾರರನ್ನು ಗುರುತಿಸುವಂತಾಗಿದೆ ಎಂದರು. ಸಾಹಿತ್ಯ ಲೋಕದಲ್ಲಿ ಗೌರಮ್ಮ ದತ್ತಿನಿಧಿ ಪ್ರಶಸ್ತಿ ರಾಜ್ಯ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದು ತಿಳಿಸಿದರು. ಗೌರಮ್ಮ ಬರೆದಿರುವ 21 ಸಣ್ಣ ಕತೆಗಳು ಸಾರ್ವಕಾಲೀಕವಾಗಿವೆ. ಗೌರಮ್ಮ ದತ್ತಿನಿಧಿ ಕಥಾ ಸ್ಪರ್ಧೆಯಿಂದ ವಿದ್ಯಾರ್ಥಿಗಳಿಗೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಿದೆ ಎಂದು ರಮೇಶ್ ನುಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪಿ.ಕೆ.ವೆಂಕಟೇಶ್ ಪ್ರಸನ್ನ ಮಾತನಾಡಿ, ಹೃದಯದ ಬದುಕನ್ನು ಹತ್ತಿರಕ್ಕೆ ಬೆಸೆಯುವುದು ಸಾಹಿತ್ಯ. ಜಾತಿ, ಧರ್ಮವನ್ನು ಮೀರುವಂತದ್ದು ಸಾಹಿತ್ಯ. ಬದುಕನ್ನು ಅರ್ಥೈಸಿಕೊಳ್ಳಲು ಸಾಹಿತ್ಯ ಸಹಕಾರಿ. ಗೌರಮ್ಮ ಅವರು ಮಹಿಳಾ ಕಥೆ ಗಾರ್ತಿಯಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದರು. ಸಾಹಿತಿ ಕಟ್ರತನ ಲಲಿತ ಅಯ್ಯಣ್ಣ ಮತ್ತು ಈರಮಂಡ ಹರಿಣ್ ವಿಜಯ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗೌರಮ್ಮ ದತ್ತಿನಿಧಿ ಕಥಾಸ್ಪರ್ಧೆ ಬಹುಮಾನವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ದತ್ತಿನಿಧಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಟ್ರತನ ಲಲಿತ ಅಯ್ಯಣ್ಣ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಕುಟುಂಬದವರ ಪ್ರೇರಣೆ ಹೆಚ್ಚಿನದ್ದಾಗಿದೆ ಎಂದರು. ಈರಮಂಡ ಹರಿಣಿ ವಿಜಯ್, ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಮುನೀರ್ ಅಹ್ಮಮದ್ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ರೇವತಿ ರಮೇಶ್, ಗೌರವ ಕೋಶಾಧಿಕಾರಿ ಎಸ್.ಎ.ಸಂಪತ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಅದ್ಯಕ್ಷ ಕಡ್ಲೇರ ತುಳಸಿ ಮೋಹನ್(ಮಡಿಕೇರಿ), ಎಸ್.ಡಿ.ವಿಜೇತ (ಸೋಮವಾರಪೇಟೆ), ಬೈತಡ್ಕ ಜಾನಕಿ ಬೆಳ್ಯಪ್ಪ, ಸ್ಮಿತಾ ಅಮೃತರಾಜ್, ಸಂಗೀತ ರವಿರಾಜ್, ಡಾ. ಕೋರನ ಸರಸ್ವತಿ, ಡಾ.ಕಾವೇರಿ ಪ್ರಕಾಶ್, ಸುನಿತಾ ಲೋಕೇಶ್, ಸಹನ ಕಾಂತಬೈಲು, ಕೆ.ಟಿ.ಬೇಬಿ ಮ್ಯಾಥ್ಯೂ, ನವೀನ್ ಅಂಬೆಕಲ್ಲು, ಕುಡೆಕಲ್ ಸಂತೋಷ್ ಮತ್ತಿತರರಿದ್ದರು. ರೇವತಿ ರಮೇಶ್ ಸ್ವಾಗತಿಸಿದರು, ಸಾಹಿತ್ಯ ಪರಿಷತ್ತಿನ ನಿರ್ದೇಶಕಿ ಕೆ.ಜಿ.ರಮ್ಯಾ, ಪ್ರೇಮ ರಾಘವಯ್ಯ ತಂಡದವರು ನಾಡಗೀತೆ ಹಾಡಿದರು.