ವಿಶೇಷ ವರದಿ
ಇದುವರೆಗೆ ಬಡಕುಟುಂಬಗಳ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ 1 ಕೋಟಿ ರು.ಗೂ ಹೆಚ್ಚು ಹಣವನ್ನು ದಾನ ಮಾಡಿರುವ ರವಿ ಕಟಪಾಡಿ, ಈ ಬಾರಿ ಕೃಷ್ಣ ಜನ್ಮಾಷ್ಟಮಿಯ ಸಂದರ್ಭ ಮತ್ತೆ ವಿಭಿನ್ನ ವೇಷ ಹಾಕಿ ಸಾರ್ವಜನಿಕರ ಎದುರು ಕಾಣಿಸಿಕೊಳ್ಳುತ್ತಿದ್ದಾರೆ.
ಕಳೆದ 9 ವರ್ಷಗಳಿಂದ ಕೃಷ್ಣ ಜನ್ಮಾಷ್ಟಮಿಯ ಸಂದರ್ಭ ಹಾಲಿವುಡ್ ಸಿನಿಮಾಗಳ ಚಿತ್ರ ವಿಚಿತ್ರ ಪಾತ್ರಗಳ ವೇಷ ಧರಿಸಿ, ಜನರ ಮುಂದೆ ಪ್ರದರ್ಶಿಸಿ, ಹಣ ಸಂಗ್ರಹಿಸುವ ರವಿ ಕಟಪಾಡಿ, ಅಂದು ಸಂಪಾದಿಸಿದ ಅಷ್ಟು ಹಣವನ್ನು ಜಿಲ್ಲಾಧಿಕಾರಿ ಅವರ ಕೈಯಿಂದಲೇ ಬಡಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ದಾನ ಮಾಡುತ್ತಿದ್ದಾರೆ. 2 ದಿನ ಹಗಲು ರಾತ್ರಿ ಊಟ ನಿದ್ರೆ ವೇಷದೊಳಗೆ ಹಿಂಸೆಯಾದರೂ ಅದನ್ನೊಂದು ತಪಸ್ಸು ಎಂಬಂತೆ ನಡೆಸಿಕೊಂಡು ಬರುತ್ತಿರುವ ರವಿ ಕಟಪಾಡಿ, ಇದುವರೆಗೆ 130 ಮಕ್ಕಳಿಗೆ 1.28 ಕೋಟಿ ರು. ದಾನ ಮಾಡಿ ಅವರಿಗೆ ಮರಜೀವನ ನೀಡಿದ್ದಾರೆ.ಈ 10ನೇ ವರ್ಷ ಅವರು ಹಾಲಿವುಡ್‌ನ ಸೂಪರ್ ಹಿಟ್ ಅವತಾರ್ ಸಿನಿಮಾದ ಹಕ್ಕಿಯ ಮೇಲೆ ಹಾರಿ ಬರುವ ಹೀರೋನ ವೇಷ ಧರಿಸಿದ್ದಾರೆ. ಸೋಮವಾರ ಮುಂಜಾನೆ ಈ ವೇಷ ಹಾಕಿರುವ ರವಿ, ಉಡುಪಿ ಮತ್ತು ಸುತ್ತಮುತ್ತಲಿನ ಪ್ರಮುಖ ಪೇಟೆಗಳಲ್ಲಿ ಸಂಚರಿಸುತ್ತಿದ್ದಾರೆ.
ವಿಶೇಷ ಎಂದರೆ ಈ ಬಾರಿ ರವಿ ಕಟಪಾಡಿ ಅವರೊಂದಿಗೆ ಆಶಿಕ್ ಎಂಬ ಯುವಕ ಕೂಡ ಅದೇ ಸಿನಿಮಾ ಹಿರೋಯಿನ್ ವೇಷ ಧರಿಸಿದ್ದಾರೆ. ಅವರಿಗೆ ದಿನೇಶ್ ಮಟ್ಟು ಅವರು ವೇಷಭೂಷಣ, ಮೇಕಪ್ ಮಾಡಿದ್ದು, ನೈಜವಾಗಿರುವ ಈ ವೇಷ ಜನ ಮನ ಸೆಳೆಯುತ್ತಿದೆ...........
। ರವಿ ಕಟಪಾಡಿ