- ಅಧಿಕಾರಿಗಳಿಗೆ ರವಿಶಂಕರ್‌ ತರಾಟೆ

KannadaprabhaNewsNetwork |  
Published : May 31, 2024, 02:15 AM IST
62 | Kannada Prabha

ಸಾರಾಂಶ

ಕಳೆದ ಒಂದು ವಾರದಿಂದ ಪಟ್ಟಣಕ್ಕೆ ಮಣ್ಣು ಮಿಶ್ರಿತ ಅಶುದ್ದ ನೀರು ಸರಬರಾಜಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಪಟ್ಟಣದ ಹೊರ ವಲಯದ ಹಳೆ ಎಡತೊರೆ ಕಾವೇರಿ ನದಿ ದಂಡೆಯಲ್ಲಿರುವ ಕುಡಿಯುವ ನೀರು ಸರಬರಾಜು ಕೇಂದ್ರಕ್ಕೆ ಶಾಸಕ ಡಿ. ರವಿಶಂಕರ್ ಗುರುವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಳೆದ ಒಂದು ವಾರದಿಂದ ಪಟ್ಟಣಕ್ಕೆ ಮಣ್ಣು ಮಿಶ್ರಿತ ಅಶುದ್ದ ನೀರು ಸರಬರಾಜಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ನೀರು ಸರಬರಾಜು ಕೇಂದ್ರದ ಎಲ್ಲಾ ಘಟಕಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಈ ವಿಚಾರದಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕಳೆದ ವಾರ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಡಿ. ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವ್ಯಕ್ತಿಯೋರ್ವ ಮೃತಪಟ್ಟ ನಂತರ ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ಪಟ್ಟಣ ಮತ್ತು ಗ್ರಾಮಗಳಿಗೆ ಶುದ್ದ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಆದೇಶಿಸಿದ್ದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳ ವರ್ತನೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗುಡುಗಿದರು.

ಈ ವೇಳೆ ದೂರವಾಣಿ ಮೂಲಕ ಪುರಸಭೆ ಆಡಳಿತಾಧಿಕಾರಿಯೂ ಆದ ಹುಣಸೂರು ಉಪ ವಿಭಾಗಾಧಿಕಾರಿ ಡಾ. ಮಹಮ್ಮದ್ ಹ್ಯಾರಿಸ್ ಸುಮೈರ್ ಅವರನ್ನು ಕಟುವಾಗಿ ಪ್ರಶ್ನಿಸಿದ ಡಿ. ರವಿಶಂಕರ್ ಜನರಿಗೆ ಅಶುದ್ದ ನೀರು ಸರಬರಾಜಾಗುತ್ತಿದ್ದರೂ ನೀವು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದ್ದು ಇನ್ನೆರಡು ದಿನದಲ್ಲಿ ನೀರಿನ ಸರಬರಾಜು ವ್ಯವಸ್ಥೆ ಸರಿಯಾಗದಿದ್ದಲ್ಲಿ ನಿಮ್ಮ ಕಚೇರಿ ಎದುರು ಧರಣಿ ಕೂರುವುದಾಗಿ ಎಚ್ಚರಿಸಿದರು.

ಆನಂತರ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಕುಡಿಯುವ ನೀರು ನಿರ್ವಹಣೆ ವಿಭಾಗದ ಎಂಜಿನಿಯರ್‌ ವಿರುದ್ಧ ಹರಿಹಾಯ್ದ ಶಾಸಕರು ನಮ್ಮ ವೇಗಕ್ಕೆ ತಕ್ಕಂತೆ ಹೊಂದಿಕೊಂಡು ಜನಪರ ಕೆಲಸ ಮಾಡಲು ಸಾಧ್ಯವಾಗದಿದ್ದಲ್ಲಿ ಇಲ್ಲಿಂದ ತೊಲಗಿ ಉತ್ತಮವಾದ ಅಧಿಕಾರಿಗಳನ್ನು ಕರೆತಂದು ಕೆಲಸ ಮಾಡಿಸಿಕೊಳ್ಳುವುದು ನಮಗೆ ಗೊತ್ತಿದೆ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಪರಿಹಾರವಾಗದಿದ್ದಲ್ಲಿ ನಿಮ್ಮ ತಲೆದಂಡವಾಗುತ್ತದೆ ಎಂದು ಎಚ್ಚರಿಸಿದರು.

ಈಗಾಗಲೇ ಅಮೃತ ಯೋಜನೆಯಡಿ ಪಟ್ಟಣಕ್ಕೆ ಶುದ್ದ ಕುಡಿಯುವ ನೀರು ಸರಬರಾಜು ಮಾಡಲು 30 ಕೋಟಿ ರೂ. ಮಂಜೂರಾಗಿದ್ದು ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿಗೆ ಚಾಲನೆ ನೀಡಲು ನಿರ್ಧಾರ ಮಾಡಲಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ಕಾಮಗಾರಿ ವಿಳಂಭವಾಗಿದ್ದು ಜೂ. 10ರ ನಂತರ ಈ ಕೆಲಸಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.

ಮುಂದಿನ ಮೂರ್ನಾಲ್ಕು ದಿನ ಪಟ್ಟಣದ ನಾಗರೀಕರು ನದಿಯ ನೀರನ್ನು ಕುಡಿಯಲು ಬಳಸದೆ ಶುದ್ದ ಕುಡಿಯವ ನೀರನ್ನೇ ಬಳಕೆ ಮಾಡಿ ಸಹಕಾರ ನೀಡಬೇಕು ಎಂದು ಕೋರಿದರು.

ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ಸದಸ್ಯರಾದ ಕೆ.ಜಿ. ಸುಬ್ರಮಣ್ಯ, ಕೋಳಿ ಪ್ರಕಾಶ್, ಸೈಯದ್‌ ಸಿದ್ದಿಕ್, ಸಿ. ಶಂಕರ್, ನಟರಾಜು, ಜಾವಿದ್‌ ಪಾಷ, ಕೆ.ಎಸ್. ಶಂಕರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ಮಾಜಿ ಅಧ್ಯಕ್ಷ ವೈ.ಎಸ್. ಕುಮಾರ್, ನಿರ್ದೇಶಕ ಸೈಯದ್‌ ಜಾಬೀರ್, ಪುರಸಭೆ ಮುಖ್ಯಾಧಿಕಾರಿ ಹೇಮಂತ್ ದೊಳ್ಳೆ, ಎಂಜಿನಿಯರ್‌ ಗಳಾದ ಚಂದ್ರಶೇಖರ್, ಸೌಮ್ಯಾ, ರೀತು ಸಿಂಗ್, ಆರೋಗ್ಯ ನಿರೀಕ್ಷಕ ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್. ಮಹದೇವ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ರಮೇಶ್, ಕಾಂಗ್ರೆಸ್ ಮುಖಂಡರಾದ ಸೌಮ್ಯಾ ಲೋಕೇಶ್, ಪುಟ್ಟರಾಜು, ನವೀದ್‌ ಅಹಮದ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ