ಮಾರ್ಷಲ್ಸ್ ಇರದೇ ಹೋಗಿದ್ದಿದ್ರೆ ಸಿ.ಟಿ.ರವಿ ಹತ್ಯೆಯಾಗ್ತಿತ್ತು : ರೇಣುಕಾಚಾರ್ಯ ಹೇಳಿಕೆ

KannadaprabhaNewsNetwork | Updated : Dec 21 2024, 11:58 AM IST

ಸಾರಾಂಶ

ಸುವರ್ಣ ಸೌಧದ ಒಳಗೆ ನುಗ್ಗಿದ ಗೂಂಡಾಗಳು ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ಮೇಲೆ ಹಲ್ಲೆ ಮಾಡಿದ್ದಾರೆ. ಆ ಸ್ಥಳದಲ್ಲಿ ಒಂದುವೇಳೆ ಮಾರ್ಷಲ್‌ಗಳು ಇಲ್ಲದೇ ಇದ್ದಿದ್ದರೆ ರವಿಯನ್ನು ಹತ್ಯೆ ಮಾಡಿರುತ್ತಿದ್ದರು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದ್ದಾರೆ.

 ದಾವಣಗೆರೆ :  ಸುವರ್ಣ ಸೌಧದ ಒಳಗೆ ನುಗ್ಗಿದ ಗೂಂಡಾಗಳು ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ಮೇಲೆ ಹಲ್ಲೆ ಮಾಡಿದ್ದಾರೆ. ಆ ಸ್ಥಳದಲ್ಲಿ ಒಂದುವೇಳೆ ಮಾರ್ಷಲ್‌ಗಳು ಇಲ್ಲದೇ ಇದ್ದಿದ್ದರೆ ರವಿಯನ್ನು ಹತ್ಯೆ ಮಾಡಿರುತ್ತಿದ್ದರು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೂಂಡಾಗಳು ಸುವರ್ಣ ಸೌಧದೊಳಗೆ ನುಗ್ಗಿ ಸಿ.ಟಿ.ರವಿ ಮೇಲೆ ಹಲ್ಲೆ ಮಾಡಿದ್ದಾರೆ. ರವಿ ಹತ್ಯೆಗೆ ಗೂಂಡಾಗಳು ಸಂಚು ಮಾಡಿದ್ದರು. ತಲೆಗೆ ತೀವ್ರ ಏಟಾಗಿದ್ದರೂ ಇಡೀ ರಾತ್ರಿಯೆಲ್ಲಾ ಸಿ.ಟಿ.ರವಿ ಅವರನ್ನು ಸುತ್ತಾಡಿಸಿದ್ದಾರೆ. ಗೃಹ ಮಂತ್ರಿ ಡಾ. ಜಿ.ಪರಮೇಶ್ವರ ಅಸಮರ್ಥರಿದ್ದು, ಇಂಥವರಿಂದ ಮತ್ತೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಸದನದಲ್ಲಿ ಸಿ.ಟಿ.ರವಿ ಅವಹೇಳನಕಾರಿ ಪದ ಬಳಸದಿದ್ದರೂ, ಸುಳ್ಳು ಆರೋಪ ಮಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಕ್ಷಣ ಕ್ಷಮೆಯಾಚಿಸಬೇಕು. ಅಧಿವೇಶನದಲ್ಲಿ ರವಿ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ರೆಕಾರ್ಡ್‌ ಇಲ್ಲ, ಯಾವುದೇ ದಾಖಲೆಯೂ ಇಲ್ಲ. ಪೊಲೀಸ್ ಇಲಾಖೆ ಕಾಂಗ್ರೆಸ್ಸಿನ ಅಡಿಯಾಳಾಗಿ ಕೆಲಸ ಮಾಡದೇ, ಜವಾಬ್ದಾರಿಯುತ ಇಲಾಖೆಯಾಗಿ ಕೆಲಸ ಮಾಡಲಿ ಎಂದು ತಾಕೀತು ಮಾಡಿದರು. ತಕ್ಷಣವೇ ಸಿ.ಟಿ.ರವಿಗೆ ಬಿಡುಗಡೆ ಮಾಡಿ, ಕೇಸ್ ವಾಪಸ್‌ ಪಡೆಯಬೇಕು ಎಂದು ಮುಖ್ಯಮಂತ್ರಿ, ಗೃಹ ಸಚಿವರಿಗೆ ಅವರು ಒತ್ತಾಯಿಸಿದರು.

ಅತ್ತ ಸಂಸತ್ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನ್ನೇ ಕಾಂಗ್ರೆಸ್ಸಿನ ನಾಯಕರು ತಿರುಚಿದ್ದಾರೆ. ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರನ್ನು ಗೌರವಿಸದವವರು ಕಾಂಗ್ರಸ್ಸಿನವರು. ಚುನಾವಣೆಗೋಸ್ಕರ ಕಾಂಗ್ರೆಸ್‌ನವರು ಅಂಬೇಡ್ಕರ್ ಹೆಸರನ್ನು ಹೇಳುತ್ತಿದ್ದಾರೆ ಎಂದು ರೇಣುಕಾಚಾರ್ಯ ಟೀಕಿಸಿದರು. 

Share this article