ರವಿಕುಮಾರ್ ಶವವಾಗಿ ಪತ್ತೆ

KannadaprabhaNewsNetwork |  
Published : Jan 20, 2026, 01:45 AM IST
ಪೋಟೋ : 19 ಎಚ್.ಎಚ್.ಆರ್.ಪಿ 2: ರವಿಕುಮಾರ್ | Kannada Prabha

ಸಾರಾಂಶ

ಭಾನುವಾರ ಮಧ್ಯಾಹ್ನ ಅರಬಿಳಚಿ ಕ್ಯಾಂಪ್ ಸಮೀಪದ ಭದ್ರಾ ಬಲದಂಡೆ ನಾಲೆಗೆ ಬಟ್ಟೆತೊಳೆಯಲು ಹೋಗಿ ನಾಪತ್ತೆಯಾಗಿದ್ದ ಒಂದೇ ಕುಟುಂಬದ ನಾಲ್ವರ ಪೈಕಿ ರವಿಕುಮಾರ್ (24) ಶವವಾಗಿ ಪತ್ತೆಯಾಗಿದ್ದಾರೆ.

ಹೊಳೆಹೊನ್ನೂರು: ಭಾನುವಾರ ಮಧ್ಯಾಹ್ನ ಅರಬಿಳಚಿ ಕ್ಯಾಂಪ್ ಸಮೀಪದ ಭದ್ರಾ ಬಲದಂಡೆ ನಾಲೆಗೆ ಬಟ್ಟೆತೊಳೆಯಲು ಹೋಗಿ ನಾಪತ್ತೆಯಾಗಿದ್ದ ಒಂದೇ ಕುಟುಂಬದ ನಾಲ್ವರ ಪೈಕಿ ರವಿಕುಮಾರ್ (24) ಶವವಾಗಿ ಪತ್ತೆಯಾಗಿದ್ದಾರೆ.

ಘಟನೆ ನಡೆದ ಸ್ಥಳದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ. ಎಸ್‌ಡಿ‌ಆರ್‌ಎಫ್, ಅಗ್ನಿಶಾಮಕ ದಳ, ಮುಳುಗು ತಜ್ಞ ಈಶ್ವರ್ ಮಲ್ಪೆ ಸೋಮವಾರ ಬೆಳಗ್ಗೆ 7 ಗಂಟೆಯಿಂದ ಕಾರ್ಯಾಚರಣೆ ಆರಂಭಿಸಿ ಅರಬಿಳಚಿ ಕ್ಯಾಂಪ್‌ನಿಂದ ಅಗರದಹಳ್ಳಿಯವರೆಗೆ ಸುಮಾರು 8 ಕಿಲೋಮೀಟರ್ ನಾಲೆಯಲ್ಲಿ ಸತತವಾಗಿ ಕಾರ್ಯಾಚರಣೆ ನಡೆಸಿದರು. ನಂತರ ವಾಪಾಸ್ಸು ಬರುತ್ತಿರುವಾಗ ಘಟನೆ ನಡೆದ ಸ್ಥಳದಿಂದ ಎರಡು ಕಿಲೋಮೀಟರ್ ದೂರದಲ್ಲಿ ಶವ ದೊರೆತಿದೆ.

ಇನ್ನುಳಿದ ನೀಲಾಬಾಯಿ, ಮಗಳು ಶ್ವೇತಾ ಹಾಗೂ ಅಳಿಯ ಪರುಶುರಾಮನ ಪತ್ತೆಗಾಗಿ ರಕ್ಷಣಾ ತಂಡಗಳು ಸೋಮವಾರ ಸಂಜೆವರೆಗೂ ಶೋಧಕಾರ್ಯ ನಡೆಸಿದವು. ಸಂಜೆ ಕತ್ತಲಾದ ಕಾರಣ ಕಾರ್ಯಾಚರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.

ನಾಪತ್ತೆಯಾದವರಲ್ಲಿ ಒಬ್ಬರು ಶವವಾಗಿ ಸಿಕ್ಕಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಶವ ದೊರೆತ ಸ್ಥಳಕ್ಕೆ ಆಗಮಿಸಿದ್ದರು. ರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯುಂಟಾಗಿತ್ತು.

ತಹಸೀಲ್ದಾರ್ ಪರಸಪ್ಪ ಕುರುಬ ಸ್ಥಳದಲ್ಲೇ ಮೂಕ್ಕಂ ಹೂಡಿದ್ದರು. ಪಟ್ಟಣದ ಠಾಣೆಯ ಪಿ.ಐ ಶಿವಪ್ರಸಾದ್, ಎಸ್‌ಐ ರಮೇಶ್, ಸಿಬ್ಬಂದಿಗಳಾದ ಅಣ್ಣಪ್ಪ, ಮಹಬೂಬ್ ಸಾಬ್ ಬಿಲ್ಲಳ್ಳಿ, ಪ್ರವೀಣ್, ಅಗ್ನಿಶಾಮಕ ದಳದ ಅಧಿಕಾರಿ ಹುಲಿಯಪ್ಪ, ಬಾಬು, ಆನಂದ, ಶೇಖರ, ರಾಜನಾಯ್ಕ್, ಮಹೇಂದ್ರ ಇತರರಿದ್ದರು.

ಮಾನವೀಯತೆ ಮೆರೆದ ಜನತೆ:

ಅರಬಿಳಚಿಯ ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ನಾಪತ್ತೆಯಾಗಿ, ಒಬ್ಬರು ಶವವಾಗಿ ಪತ್ತೆಯಾದಾಗ ಜನಸಾಗರವೇ ಹರಿದು ಬಂದಿತ್ತು. ನಾಪತ್ತೆಯಾದವರ ಪತ್ತೆಗಾಗಿ ಬಂದಿರುವ ಈಜು ತಜ್ಞ ಈಶ್ವರ್ ಮಲ್ಪೆ ಅವರಿಗೆ ನೀಡಲು ತಮ್ಮ ತಮ್ಮ ಕೈಲಾಷ್ಟು ಹಣವನ್ನು ಸಂಗ್ರಹಿಸಿದ್ದಾರೆ. ಅಲ್ಲಿದ್ದವರೆ ಎಲ್ಲವನ್ನೂ ಒಟ್ಟುಗೂಡಿಸಿ ಧನ ಸಹಾಯ ನೀಡಲು ಮುಂದಾದರು.

ಸೋಮವಾರ ಬೆಳಿಗ್ಗೆಯಿಂದಲೂ ಕಾರ್ಯಾಚರಣೆ ನಡೆಸುತ್ತಿದ್ದೇವೆ. ನಾಲೆಯ ನೀರಿನ ಸೆಳೆವು (ರಭಸ) ಹೆಚ್ಚಾಗಿರುವುದರಿಂದ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ. ಈ ನಾಲೆಯಲ್ಲಿ ಎಲ್ಲೂ ಕೂಡ ತಡೆಜಾಲರಿ ವ್ಯವಸ್ಥೆ ಇಲ್ಲ. ಆದ ಕಾರಣ ನೀರಿನಲ್ಲಿ ವ್ಯಕ್ತಿಗಳು ಬಿದ್ದರೆ ವೇಗವಾಗಿ ನೀರಿನೊಡನೆ ಹರಿಯುತ್ತಾರೆ. ಆದ್ದರಿಂದ ಪತ್ತೆಕಾರ್ಯ ತಡವಾಗುತ್ತಿದೆ.

- ಇಮ್ರಾನ್, ಎಸ್‌ಡಿ‌ಆರ್‌ಎಫ್ ನ ಇನ್ಸ್ಪೆಕ್ಟರ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕಾಮ’ಚಂದ್ರರಾವ್‌ ಐಪಿಎಸ್‌ - ಪೊಲೀಸ್‌ ಸಮವಸ್ತ್ರದಲ್ಲೇ ಕಚೇರಿಯಲ್ಲಿ ಮಹಿಳೆಯರ ಜತೆ ಸರಸ
ಪವಿತ್ರಾಗೌಡಗೆ ಮನೆ ಊಟ ಪ್ರಶ್ನಿಸಿಹೈಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ