ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸುಭಾಷ್ ನಗರದಲ್ಲಿ ಜಿಲ್ಲಾ ಸಹಕಾರ ಸಂಘಗಳ ನಿಬಂಧಕರ ಕಚೇರಿಗೆ ಭೇಟಿ ನೀಡಿದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು, ಎಆರ್ (ಸಹಕಾರ ಸಂಘಗಳ ಸಹಾಯಕ ನಿಬಂಧಕರು) ಪತ್ರದ ಮೇಲೆ ಕೋರಂ ಇಲ್ಲ ಎಂದು ಚುನಾವಣೆ ಮುಂದೂಡಿದ್ದೀರಿ. ಇದೇ ರೀತಿ ಎರಡ್ಮೂರು ಬಾರಿ ಆಗಿದೆ. ಈಗ ಮತ್ತೆ ಎಆರ್ ನಿಮಗೆ ಕೋರಂ ಇದೆ ಎಂದು ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ಅಲ್ಲದೆ, ಸೊಸೈಟಿಗೆ ಆಯ್ಕೆಯಾಗಿರುವ 11 ಮಂದಿಯಲ್ಲಿ 7 ಮಂದಿ ಸಹಿ ಮಾಡಿ ಅಧ್ಯಕ್ಷರ ಚುನಾವಣೆ ನಡೆಸುವಂತೆ ಪತ್ರ ನೀಡಿದ್ದಾರೆ. ಚುನಾವಣೆ ನಡೆಸಲು ನಿಮಗೇನು ಸಮಸ್ಯೆ? ಕಾನೂನು ಚೌಕಟ್ಟಿನಡಿ ಮುಕ್ತವಾಗಿ ಚುನಾವಣೆ ನಡೆಸಬೇಕೇ ಹೊರತು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಶಾಂತ ರೀತಿಯಲ್ಲಿ ಹೇಳಿದರು.ಆದರೆ, ಡಿಆರ್ ಬೀರೇಂದ್ರ ಅವರು ಸೆಕ್ಷನ್ 13ರಲ್ಲಿ ಕೋರಂ ಇಲ್ಲದಿದ್ದಲ್ಲಿ ಚುನಾವಣೆ ನಡೆಸಬಾರದು ಎಂದು ಇದೆ ಎಂದಾಗ, ಕೋಪಗೊಂಡ ರವೀಂದ್ರ ಶ್ರೀಕಂಠಯ್ಯ ಅವರು ಸೊಸೈಟಿಗೆ ಆಯ್ಕೆಯಾಗಿರುವ 7 ಮಂದಿ ಸಹಿ ಮಾಡಿದ್ದಾರೆ. ಅಲ್ಲದೆ, ಎಆರ್ ಅವರು ಕೋರಂ ಇದೆ ಎಂದು ಪತ್ರ ಕೊಟ್ಟಿದ್ದಾರೆ. ಹೀಗಿದ್ದರೂ ರಾಜಕೀಯ ಮಾಡುತ್ತೀರಾ?. ಕಾನೂನು ಏನು ಇದೆಯೋ ಅದನ್ನು ಮಾಡಿ, ಅಧ್ಯಕ್ಷರ ಚುನಾವಣೆ ನಡೆಸಿ ಎಂದು ಏರು ದನಿಯಲ್ಲಿ ಹೇಳಿದರು.
ಸೊಸೈಟಿ ಚುನಾವಣೆಯಲ್ಲಿ ರಾಜಕೀಯ ಮಾಡಬಾರದು. ಸಹಕಾರ ಸಂಘಗಳು ನಿಮ್ಮದಾಗಲಿ, ನನ್ನದಾಗಲಿ ಅಲ್ಲ, ಸ್ವಂತ ಕೆಲಸವೂ ಅಲ್ಲ, ಜನರ ತೆರಿಗೆ ಹಣದಿಂದ ತಾನೇ ಸರ್ಕಾರ ನಿಮಗೆ ಸಂಬಳ ಕೊಡುತ್ತಿರುವುದು, ಚುನಾವಣೆ ನಡೆಸಲು ನಿಮಗೇನು ಸಮಸ್ಯೆ? ಎಂದು ತರಾಟೆಗೆ ತೆಗೆದುಕೊಂಡರು.ನಂತರ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಮಾತಿಗೆ ಮನ್ನಣೆ ನೀಡಿದ ಸಹಕಾರ ಸಂಘಗಳ ನಿಬಂಧಕ ಬೀರೇಂದ್ರ ಅವರು ಇನ್ನೆರಡು ಮೂರು ದಿನಗಳಲ್ಲಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸುವುದಾಗಿ ಒಪ್ಪಿಗೆ ನೀಡಿದರು.